ಆಳಂದ: ತೀರಾ ಇಕ್ಕಟ್ಟಿನಿಂದಾಗಿ ಹೆಚ್ಚಿದ ಸಂಚಾರಕ್ಕೆ ಅಡಚಣೆಯಾಗಿ ಪರಿಣಮಿಸಿರುವ ವಾಗ್ದರಿ–ರಿಬ್ಬನಪಳ್ಳಿ ದ್ವಿಪಥ ರಾಜ್ಯ ಹೆದ್ದಾರಿಯನ್ನು ಎರಡೂ ಬದಿಗೆ ತಲಾ ಒಂದೂವರೆ ಮೀಟರ್ ವಿಸ್ತರಣೆ ಕೈಗೊಳ್ಳಲು ಎಚ್‌ಕೆಡಿಬಿಯಿಂದ 200 ಕೋಟಿ ರೂ. ಅನುದಾನ ಹಾಗೂ ರಾಜ್ಯ ಸರ್ಕಾರದಿಂದ 200 ಕೋಟಿ ರೂ. ಸೇರಿ ಒಟ್ಟು 400 ಕೋಟಿ ರೂ. ಬೇಡಿಕೆಯ ಪ್ರಸ್ತಾವನೆಯನ್ನು ರಾಜ್ಯ ಬಜೆಟ್‌ನಲ್ಲಿ ಅಂಗೀಕಾರಕ್ಕೆ ಸೇರಿಸಲು ಕಳುಹಿಸಲಾಗಿದೆ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಶಾಸಕ ಬಿ.ಆರ್. ಪಾಟೀಲ ಅವರು ತಿಳಿಸಿದ್ದಾರೆ.
ಈ ಕುರಿತು ಇತ್ತೀಚೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ಮಹತ್ವದ ಚರ್ಚೆ ನಡೆಯಿತು. ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಆಳಂದ ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ ಸೇರಿದಂತೆ ಸಂಬಂಧಿತ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಸದ್ಯ ಈ ಹೆದ್ದಾರಿ ಏಳು ಮೀಟರ್ ಅಗಲವಿದ್ದು, ಇನ್ನೂ ಮೂರು ಮೀಟರ್ ಅಗಲೀಕರಣ ಅಗತ್ಯವಾಗಿದೆ. ಎರಡೂ ಬದಿಗೆ ಒಂದೂವರೆ ಮೀಟರ್‌ನಂತೆ ಒಟ್ಟು ಮೂರು ಮೀಟರ್ ಅಗಲ ವಿಸ್ತರಣೆಯ ಅವಶ್ಯಕತೆ ಇದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು ಎಂದು ಅವರು ಹೇಳಿದರು.
ಕಲ್ಯಾಣ ಕರ್ನಾಟಕದಿಂದ ಮುಖ್ಯವಾಗಿ ಮಹಾರಾಷ್ಟ್ರಕ್ಕೆ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವ ಗುರಿಯೊಂದಿಗೆ ಆಳಂದದಿಂದ ಕಲಬುರ್ಗಿವರೆಗೆ 40 ಕಿ.ಮೀ. ಹಾಗೂ ಆಳಂದದಿಂದ ವಾಗ್ದರಿವರೆಗೆ ಸುಮಾರು 26 ಕಿ.ಮೀ., ಒಟ್ಟು 64 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ–10 ಅನ್ನು ದ್ವಿಪಥ ರಸ್ತೆಯಾಗಿ ನಿರ್ಮಿಸಿದ್ದರೂ, ದ್ವಿಮುಖ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಇದರ ಅಗಲೀಕರಣ ತುರ್ತು ಅಗತ್ಯವಾಗಿದೆ ಎಂದು ಶಾಸಕ ಪಾಟೀಲರು ಸಚಿವರ ಗಮನಕ್ಕೆ ತಂದರು.
ಮಹಾರಾಷ್ಟ್ರ ಗಡಿಯಿಂದ ಆಳಂದ, ಕಲಬುರ್ಗಿ ಸೇರಿದಂತೆ ಸೇಡಂ ಮಾರ್ಗವಾಗಿ ಆಂಧ್ರಪ್ರದೇಶ ಗಡಿಯವರೆಗೆ ಸಂಪರ್ಕ ಕಲ್ಪಿಸುವ ಈ ರಾಜ್ಯ ಹೆದ್ದಾರಿ–10 ಈಗಾಗಲೇ ದೀಪದಾರಿಯಾಗಿದ್ದರೂ, ವಾಹನ ದಟ್ಟಣೆಯಿಂದ ಅಪಘಾತಗಳು ಹೆಚ್ಚಾಗುತ್ತಿವೆ. ವಾಗ್ದರಿ–ರಿಬ್ಬನಪಳ್ಳಿ ಮಧ್ಯದ ಈ ಮಾರ್ಗದಲ್ಲಿ ವಾಹನ ಸಂಚಾರ ತೀವ್ರವಾಗಿದ್ದು, ಈಗಾಗಲೇ 30 ವರ್ಷಗಳ ಕಾಲ ಬಿಒಟಿ (ಬಿಲ್ಡ್–ಆಪರೇಟ್–ಟ್ರಾನ್ಸ್‌ಫರ್) ಮಾದರಿಯಲ್ಲಿ ನೀಡಲ್ಪಟ್ಟಿರುವ ಈ ರಸ್ತೆಯಲ್ಲಿ ಟೋಲ್ ಸಂಗ್ರಹ ನಡೆಯುತ್ತಿದೆ. ಇಕ್ಕಟ್ಟಿನ ಹೆದ್ದಾರಿಯಿಂದಾಗಿ ವಾಹನ ಸವಾರರು ಎದುರಿಸುತ್ತಿರುವ ಸಮಸ್ಯೆಯನ್ನು ಶಾಸಕರು ಸಭೆಯಲ್ಲಿ ಪ್ರಸ್ತಾಪಿಸಿದರು.
ಅಲ್ಲದೆ, “ವಾಗ್ದರಿ–ರಿಬ್ಬನಪಳ್ಳಿ ಹೆದ್ದಾರಿ ದೀಪದಾರಿಯಾಗಿದ್ದರೂ ದಟ್ಟಣೆಯಿಂದ ಅಪಘಾತಗಳು ಸಂಭವಿಸುತ್ತಿವೆ. ಹೆದ್ದಾರಿ ಅಗಲೀಕರಣವಾದರೆ ಮಾತ್ರ ಸಂಚಾರ ಸುಗಮವಾಗುತ್ತದೆ. ಇದಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಸಚಿವರ ಗಮನ ಸೆಳೆದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೂ ಈ ಬೇಡಿಕೆಗೆ ಬೆಂಬಲ ನೀಡಿ, “ಕಲ್ಯಾಣ ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ಈ ರಸ್ತೆ ಅತ್ಯಂತ ಪ್ರಮುಖವಾಗಿದೆ. ದಟ್ಟಣೆ ನಿಯಂತ್ರಣಕ್ಕಾಗಿ ತ್ವರಿತ ಕ್ರಮ ಅಗತ್ಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, “ಈ ಕಾಮಗಾರಿಯಿಂದ ವ್ಯಾಪಾರ–ವಾಣಿಜ್ಯ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಹೊಸ ಉತ್ತೇಜನ ದೊರೆಯಲಿದೆ. ಬೇಡಿಕೆಯನ್ನು ಪರಿಗಣಿಸಿ ಶೀಘ್ರ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಬರುವ ಬಜೆಟ್‌ನಲ್ಲಿ ಅನುದಾನ ಸೇರಿಸಿ ಕಾಮಗಾರಿ ಶೀಘ್ರ ಆರಂಭವಾಗುವಂತೆ ಖಚಿತಪಡಿಸುತ್ತೇನೆ” ಎಂದು ಹೇಳಿದರು. ಇದಕ್ಕೆ ಸಂಬಂಧಿಸಿದಂತೆ ಹಾಜರಿದ್ದ ಅಧಿಕಾರಿಗಳಿಗೆ ಮುಂದಿನ ಯೋಜನಾ ರೂಪರೇಖೆಗಳನ್ನು ತಯಾರಿಸುವಂತೆ ಸೂಚಿಸಿದರು.
ಈ ದ್ವಿಪಥ ರಸ್ತೆಯ ಅಗಲೀಕರಣದಿಂದ ಆಳಂದ ತಾಲ್ಲೂಕಿನ ಗಡಿಭಾಗದ ವಾಗ್ದರಿ–ರಿಬ್ಬನಪಳ್ಳಿ ಮಾರ್ಗದ ಸಂಪರ್ಕ ಬಲಗೊಳ್ಳುವ ಜೊತೆಗೆ, ಸ್ಥಳೀಯರ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ ಎಂಬ ನಿರೀಕ್ಷೆಯಿದೆ. ಶಾಸಕ ಬಿ.ಆರ್. ಪಾಟೀಲ ಅವರು ಈ ಬೇಡಿಕೆಯನ್ನು ದೀರ್ಘಕಾಲದಿಂದ ಮುಂದಿಟ್ಟುಕೊಂಡು ಬಂದಿದ್ದು, ಈ ಸಭೆಯಿಂದ ಯೋಜನೆಗೆ ಹಸಿರು ನಿಶಾನೆ ಸಿಗುವ ಸಾಧ್ಯತೆ ಹೆಚ್ಚಾಗಿದೆ.









