ಆಳಂದ: “ಇಂದಿನ ಸಮಾಜದಲ್ಲಿ ಧರ್ಮಗುರುಗಳು, ಮಠಾಧೀಶರು ಮತ್ತು ರಾಜಕಾರಣಿಗಳು ತಮ್ಮ ಮಿತಿಯನ್ನು ಮೀರುತ್ತಿದ್ದಾರೆ. ಇದು ಒಳ್ಳೆಯದಲ್ಲ. ಪ್ರತಿಯೊಬ್ಬರೂ ತಮ್ಮ ಧರ್ಮ, ಕರ್ತವ್ಯ ಮತ್ತು ನಿಯಮಾನುಸಾರ ನಡೆದುಕೊಳ್ಳಬೇಕು” ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಕೇಂದ್ರ ಶಿವಾಚಾರ್ಯ ಭಗವತ್ಪಾದರು ತಮ್ಮ ಆಶೀರ್ವಚನ ನೀಡುವ ವೇಳೆ ತೀಕ್ಷ್ಣ ಸಂದೇಶ ನೀಡಿದರು.
ತಾಲೂಕಿನ ಮುನ್ನಹಳ್ಳಿ ಗ್ರಾಮದ ಶ್ರೀ ಶಾಂತಲಿಂಗೇಶ್ವರ ಮಠದ ನೂತನ ಕಟ್ಟಡ ಲೋಕಾರ್ಪಣೆ, ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಮಹೋತ್ಸವ ಹಾಗೂ ಭಕ್ತಾದಿಗಳ ಕೈಗೊಂಡ ಅಡ್ಡಪಲ್ಲಕ್ಕಿ ಉತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯದಲ್ಲಿ ಅವರು ಮಾತನಾಡಿದರು.
ಜಗದ್ಗುರು ಅವರು ಮಠಾಧೀಶರು ಭಕ್ತರಲ್ಲಿ ಭಕ್ತಿ, ಸಂಸ್ಕೃತಿ ಮತ್ತು ನೀತಿ ಬೋಧಿಸಬೇಕು; ಗುರುವಾದವನ್ನು ಸಮಾಜಕ್ಕಾಗಿ ಮೀಸಲಿಡಬೇಕು. “ರಾಜಕಾರಣಿಗಳ ಬಾಗುವುದಲ್ಲ. ಬಡವನಾಗಲಿ ಶ್ರೀಮಂತನಿರಲಿ ಸರ್ವರಿಗೂ ಸಮಾನವಾಗಿ ವ್ಯವಹರಿಸುವ ಪರಂಪರೆಯನ್ನು ಬೆಳೆಸಬೇಕು. ರಾಜಕಾರಣಿಗಳು ಜನಸೇವೆಗೆ ಸಮರ್ಪಿತರಾಗಬೇಕು. ಅಹಂಕಾರ ಮತ್ತು ಅಧಿಕಾರದ ದುರುಪಯೋಗದಿಂದ ಮಠ ಅಥವಾ ರಾಜಕೀಯ ಕಲಂಕಿತರಾಗಬಾರದು” ಎಂದು ಖಡಕ್ ಎಚ್ಚರಿಕೆ ನೀಡಿದರು.
ಅವರು ಮಠಗಳನ್ನು ಧರ್ಮಶಿಕ್ಷಣದ ಕೇಂದ್ರವಾಗಿರಲಿ, ರಾಜಕಾರಣವನ್ನು ಜನರ ವಿಶ್ವಾಸದ ದಾರಿಯಾಗಿರಲಿ ಎಂದು ಹೇಳಿದರು. ಧರ್ಮವನ್ನು ವ್ಯಾಪಾರ, ರಾಜಕಾರಣವನ್ನು ಸ್ವಾರ್ಥ ಸಾಧನ ಮಾಡುವವರು ಸಮಾಜದ ಶತ್ರುಗಳು. ಈ ಪ್ರವೃತ್ತಿ ಬದಲಾಗದಿದ್ದರೆ ಮಠಗಳಿಗೂ, ರಾಜಕಾರಣಕ್ಕೂ ಭವಿಷ್ಯ ಕತ್ತಲೆಯಲ್ಲಿದೆ ಎಂದು ಗಂಭೀರ ಎಚ್ಚರಿಕೆ ನೀಡಿದರು.
ಮುನ್ನಹಳ್ಳಿ ಶಾಂತಲಿಂಗೇಶ್ವರ ಮಠದ ನೂತನ ಕಟ್ಟಡ ಗೋಪುರ ಹಾಗೂ ಕಳಸಾರೋಹಣ ಕಾರ್ಯಕ್ರಮವು ಏಕಕಾಲಕ್ಕೆ ನೆರವೇರಿದ್ದು ಐತಿಹಾಸಿಕ ಮಹತ್ವವಿರುತ್ತದೆ. ಜಗದ್ಗುರು ತಮ್ಮ ಆಶೀರ್ವಚನದಲ್ಲಿ ಎಲ್ಲರಿಗೂ ಸನ್ಮಂಗಲ, ಉತ್ತಮ ಬೆಳೆಯ, ರೈತರಿಗೆ ಉತ್ತಮ ಬದುಕು, ವ್ಯಾಪಾರ-ಉದ್ಯೋಗದ ಅಭಿವೃದ್ಧಿ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ, ದಂಪತಿಗಳಿಗೆ ಧರ್ಮನಿಷ್ಠ ಕಾರ್ಯಗಳು ಸಾಗಲಿ ಎಂಬ ಆಶೀರ್ವಾದ ನೀಡಿದರು.
ಯುವಕ ಯುವತಿಯರು ಲಹು ಜಿಹಾದ್‍ನಂತಹ ಕೆಟ್ಟದಕ್ಕೆ ಆಸ್ಪದ ನೀಡದೆ, ತಾಯ್ತಂದೆ ಮಾರ್ಗದರ್ಶನ ಅನುಸರಿಸಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಜಗದ್ಗುರು ಸಲಹೆ ನೀಡಿದರು. ಶಾಂತಲಿಂಗೇಶ್ವರ ಮಠವು ಭಕ್ತರಿಗೆ ಧಾರ್ಮಿಕ ಜಾಗೃತಿ, ನೀತಿವಂತ ಜೀವನ ಮತ್ತು ಸಮಾಜದ ಶಾಂತಿಯ ಸಂಕೇತವಾಗಿದೆ. ಇಂತಹ ಮಠಗಳು ಭಕ್ತಿ, ತಾಳ್ಮೆ ಮತ್ತು ಸಂಸ್ಕೃತಿಯನ್ನು ಬೋಧಿಸುತ್ತವೆ ಎಂದು ಅವರು ತಿಳಿಸಿದರು.
ಶ್ರೀಮಠದಲ್ಲಿ ಶಾಂತಲಿಂಗೇಶ್ವರ ಪುರಾಣವನ್ನು ಐನಾಪೂರ ಮಲ್ಲಯ್ಯ ಶಾಸ್ತ್ರಿಗಳು ಮಂಗಳಗೊಳಿಸಿದರು. ಶಿವಶರಣಪ್ಪ ಪೂಜಾರಿ ಮತ್ತು ಮಹೇಶಕುಮಾರ ನರಿಬೋರ್ ಸಂಗೀತ ವ್ಯವಸ್ಥೆಯನ್ನು ನಡೆಸಿದರು.
ಕಾರ್ಯಕ್ರಮದಲ್ಲಿ ಕಡಗಂಚಿ ಸಂಸ್ಥಾನ ಮಠದ ಶ್ರೀ ವೀರಭದ್ರ ಶಿವಾಚಾರ್ಯರು, ಚಿಣಮಗೇರಾ ಮಹಾಂತೇಶ್ವರ ಮಠದ ಶ್ರೀ ಸಿದ್ದರಾಮ ಶಿವಾಚಾರ್ಯರು, ಆಳಂದ ಶ್ರೀ ಸಿದ್ದೇಶ್ವರ ಶಿವಾಚಾರ್ಯರು, ಶ್ರೀ ಶಾಂತಲಿಂಗ ಶಿವಾಚಾರ್ಯರು, ಬಂಗರಗಾ ಶ್ರೀ, ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ, ಜೆಡಿಎಸ್ ನಾಯಕಿ ಮಹೇಶ್ವರಿ ಎಸ್. ವಾಲಿ, ಪಂಚ ಗ್ಯಾರೆಂಟಿ ಅಧ್ಯಕ್ಷ ಶಿವುಪುತ್ರಪ್ಪ ಪಾಟೀಲ, ಬಿಜೆಪಿ ಮುಖಂಡ ಆನಂದ ಪಾಟೀಲ, ಜಿಪಂ ಎಇಇ ಸಂಗಮೇಶ ಬಿರಾದಾರ್, ಬಸವರಾಜ ವಾಲಿ, ಬಾಬುರಾವ್ ಫುಲಾರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಗ್ರಾಮದ ಹಿರಿಯ ಮುಖಂಡರು, ಶ್ರೀಮಠದ ಟ್ರಸ್ಟ್ ಕಮಿಟಿ ಸದಸ್ಯರು ಮತ್ತು ಗ್ರಾಮೀಣ ಭಕ್ತಾದಿಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.









