ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಶಿಕ್ಷಕರು ನಿರಂತರ ಕಲಿಯುವ ವಿದ್ಯಾರ್ಥಿಗಳಾದಾಗಲೇ ಶಾಲೆಗಳು ಕ್ರಿಯಾಶೀಲ: ಸತೀಶ ಸನ್ಮುಖ

On: December 27, 2025 7:48 PM

ಆಳಂದ: ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿನ ಮಕ್ಕಳಿಗೆ ಹೊಸ ಜ್ಞಾನಾನುಭವ, ಕೌಶಲ್ಯ ಹಾಗೂ ತಂತ್ರಜ್ಞಾನವನ್ನು ಬೋಧಿಸುವ ಶಿಕ್ಷಕರು ನಿರಂತರ ವಿದ್ಯಾರ್ಥಿಗಳಾಗಿದ್ದಾಗ ಮಾತ್ರ ಶಾಲೆಗಳು ಕ್ರಿಯಾಶೀಲವಾಗಲಿವೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕಾಧ್ಯಕ್ಷ ಸತೀಶ ಸನ್ಮುಖ ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣನಿಧಿ, ಬೆಂಗಳೂರು ಹಾಗೂ ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಏರ್ಪಡಿಸಿದ ತಾಲ್ಲೂಕು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ಸಹಪಠ್ಯ ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿಪತ್ರ ವಿತರಿಸಿ ಮಾತನಾಡಿದರು.

ಶಾಲೆಗಳಲ್ಲಿ ಶಿಕ್ಷಕರಿಗೆ ಕಾರ್ಯಭಾರದ ಒತ್ತಡ ಹೆಚ್ಚುತ್ತಿದೆ. ಸರ್ಕಾರದ ವಿವಿಧ ಹೊಸ ಕಾರ್ಯಕ್ರಮಗಳ ಅನುಷ್ಠಾನದ ಜವಾಬ್ದಾರಿಯಲ್ಲಿ ಶಿಕ್ಷಕರು ತಮ್ಮ ವೃತ್ತಿ ಕೌಶಲ್ಯವನ್ನು ನಿರ್ಲಕ್ಷಿಸಬಾರದು. ಪ್ರಸ್ತುತ ತಂತ್ರಜ್ಞಾನದ ಮಾಹಿತಿ, ತರಬೇತಿ ಜೊತೆಗೆ ವಿದ್ಯಾರ್ಥಿಗಳ ಬದುಕು ರೂಪಿಸುವ ನಿಟ್ಟಿನಲ್ಲಿ ಸದಾ ಉತ್ಸಾಹ ಹಾಗೂ ನೈಪುಣ್ಯತೆಗಳನ್ನು ಬೆಳೆಸಿಕೊಳ್ಳಲು ತಿಳಿಸಿದರು.

ಸಂಬುದ್ಧ ಪದವಿ ಕಾಲೇಜು ಪ್ರಾಂಶುಪಾಲ ಸಂಜಯ ಪಾಟೀಲ ಮಾತನಾಡಿ, ಶಿಕ್ಷಕರ ಸಾಮರ್ಥ್ಯ ಮತ್ತು ಸಹಭಾಗಿತ್ವದ ಮೇಲೆ ಶಾಲೆಗಳ ಪ್ರಗತಿ ಅಡಗಿದೆ. ಸೃಜನಶೀಲ ಶಿಕ್ಷಕರು ಮಾತ್ರ ವಿದ್ಯಾರ್ಥಿಗಳಲ್ಲಿ ಹೊಸ ಸಾಧನೆಗೆ ಪ್ರೇರಣೆ ನೀಡಬಲ್ಲರು. ಹೀಗಾಗಿ ಶಿಕ್ಷಕರು ಚಟುವಟಿಕೆದಾಯಕ ತರಗತಿ ರೂಪಿಸುವಲ್ಲಿ ಹೆಚ್ಚು ಮುತುವರ್ಜಿವಹಿಸಲು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಜಿ.ಜಿ. ವಣಿಕ್ಯಾಳ, ನೋಡಲ್ ಅಧಿಕಾರಿ ಪಂಕಜ್ ಪಾಟೀಲ ಮಾತನಾಡಿ, ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯಲ್ಲಿ ವಿಜೇತರಾದ ಶಿಕ್ಷಕರು ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿಯೂ ಸಾಧನೆ ಮಾಡಲು ತಿಳಿಸಿದರು.

ಮುಖ್ಯಶಿಕ್ಷಕ ತಾನಾಜಿ ಸೂರ್ಯವಂಶಿ ಅಧ್ಯಕ್ಷತೆ ವಹಿಸಿದರು. ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಅಣ್ಣಪ್ಪ ಹಾದಿಮನಿ, ಮುಖ್ಯಶಿಕ್ಷಕ ಮರಪ್ಪ ಬಡಿಗೇರ, ರಾಮಲಿಂಗಪ್ಪ ಖಂಡಾಳೆ, ಮಲ್ಲಿನಾಥ ಖಜೂರಿ, ಮಲ್ಲಿನಾಥ ಮುನ್ನೋಳ್ಳಿ, ಮನ್ಸೂರು ಮುಜಾವರ್, ಗೌತಮ ನೂಲಕರ್, ರಾಜೇಶ್ವರಿ, ದತ್ತಾ ಬಡಿಗೇರ, ಸಂತೋಷ ಕಲಶೆಟ್ಟಿ, ಬದ್ರಿನಾಥ ಮುಡಗಿ, ಪಂಡಿತರಾವ ಪಾಟೀಲ, ದಶರಥ ಕಠಾರ, ಧರ್ಮರಾಯ ಕೊರಳ್ಳಿ, ಸಿದ್ದರಾಮ ಶಹಾಪುರ, ವಿಜಯಲಕ್ಷ್ಮಿ ಉಪಸ್ಥಿತರಿದ್ದರು. ಶಂಕರ ಮೊಂಟಗಿ ನಿರೂಪಿಸಿದರು. ಅಂಬಾರಾಯ ಕಾಂಬಳ ಸ್ವಾಗತಿಸಿದರು. ಸಂತೋಷ ವೇದಪಾಠಕ ವಂದಿಸಿದರು.

ತಾಲ್ಲೂಕಿನ ವಿವಿಧ ಶಾಲೆಗಳ ಶಿಕ್ಷಕರಿಗಾಗಿ ಸಹಪಠ್ಯ ಚಟುವಟಿಕೆಗಳಾದ ಭಕ್ತಿಗೀತೆ, ಆಶುಭಾಷಣ, ಪ್ರಬಂಧ ರಚನೆ, ಕಲಿಕೋಪಕರಣ ತಯಾರಿ, ಚಿತ್ರಕಲೆ, ರಸಪ್ರಶ್ನೆ ಸ್ಪರ್ಧೆಗಳು ಆಯೋಜಿಸಲಾಗಿತ್ತು.

ವಿವಿಧ ಶಾಲೆಗಳ ಶಿಕ್ಷಕರು ಸ್ಪರ್ಧೆಯಲ್ಲಿ ಭಾಗವಹಿಸಿದರು. ವಿಜೇತ ಶಿಕ್ಷಕರಿಗೆ ಪ್ರಶಸ್ತಿ ಪತ್ರ ವಿತರಣೆ ಕೈಗೊಳ್ಳಲಾಯಿತು.

Join WhatsApp

Join Now

ಶಿಫಾರಸಿತ ಸುದ್ದಿಗಳು

Leave a Comment

error: Content is Protected!