ಆಳಂದ: “ಶಿಕ್ಷಕರು ನಮ್ಮ ಜೀವನದಲ್ಲಿ ಎರಡನೇ ಪೋಷಕರಷ್ಟೇ ಅಲ್ಲ, ದೀಪಸ್ತಂಭಗಳಂತೆ ಮಾರ್ಗದರ್ಶನ ನೀಡುವವರು” ಎಂದು ಮಾಡಿಯಾಳದ ವಪ್ಪತೇಶ್ವರ ವಿರಕ್ತಮಠದ ಶ್ರೀ ಮರುಳಸಿದ್ಧ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಧಂಗಾಪೂರದ ಇಂದಿರಾ ಕನ್ನಡ ಶಾಲೆಯಲ್ಲಿ ಶನಿವಾರ ಆಯೋಜಿಸಲಾದ ಶಿಕ್ಷಕರ ದಿನಾಚರಣೆ ಹಾಗೂ ತಾಲೂಕು ಮಟ್ಟದ ಉತ್ತಮ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಗುರುಕುಲ ಶಿಕ್ಷಣದಿಂದ ಇಂದಿನ ಆಧುನಿಕ ಶಿಕ್ಷಣದವರೆಗೂ ಗುರುಗಳು ಸಮಾಜ ನಿರ್ಮಾಣದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಆತ್ಮವಿಶ್ವಾಸ ವೃದ್ಧಿಸಲು ಶಿಕ್ಷಕರ ಸೇವೆ ಅನನ್ಯ” ಎಂದರು.
ನಿಂಬರ್ಗಾ ಸಿಆರ್‌ಪಿ ಅಶೋಕ ಗಾಯಕವಾಡ ಮಾತನಾಡಿ, “ಇಂದಿನ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಟಿವಿ ಪ್ರಭಾವದಿಂದ ಅಧ್ಯಯನದ ಕಡೆಗೆ ಆಸಕ್ತಿ ತೋರದಿರುವುದು ಫಲಿತಾಂಶ ಕುಸಿತಕ್ಕೆ ಕಾರಣವಾಗುತ್ತಿದೆ. ಆದರೆ ಇದರ ಹೊಣೆಗಾರಿಕೆ ಶಿಕ್ಷಕರಷ್ಟೇ ಅಲ್ಲ, ಪೋಷಕರದ್ದೂ ಸಹ. ಶಾಲೆಯ ಬಳಿಕ ಮಕ್ಕಳು ಮನೆಗೆ ಬಂದಾಗ ಅವರ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸುವುದು ಪೋಷಕರ ಜವಾಬ್ದಾರಿಯಾಗಿದೆ” ಎಂದರು.

ಈ ಸಂದರ್ಭದಲ್ಲಿ ಅನುದಾನ ರಹಿತ ಶಾಲೆಗಳಿಂದ ಆಯ್ಕೆಯಾದ ಉತ್ತಮ ಶಿಕ್ಷಕರಾದ ಆಳಂದದ ದ ಜ್ರೀಜ್ ಪ್ರೌಢಶಾಲೆಯ ಮುಖ್ಯಗುರು ಜಗದೀಶ ಕೋರೆ ನಿರಗುಡಿ, ಇಂದಿರಾ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಅಂಬಿಕಾ ಎಸ್. ಅಷ್ಟಗಿ, ಶಿಕ್ಷಕರಾದ ದಶರಥ ಕಾಂಬಳೆ, ಕೀರ್ತಿ ಸಾಹುಕಾರ, ಸರಸ್ವತಿ ಕೋರೆ, ಮಲ್ಲಮ್ಮಾ ಆಳಂದ, ಲಕ್ಷ್ಮೀ ಬಂದರವಾಡ ಹಾಗೂ ರಾಕೇಶ್ ರಾಠೋಡ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ವಿಶಾಲಾ ತೇಲ್ಕರ್, ಅಧ್ಯಕ್ಷ ಶಿವಲಿಂಗ ತೇಲ್ಕರ್, ಪಾಲಕರಾದ ಸುಮಂಗಲಾ ನಾಗೋಜಿ, ಮೋಹನಬಾಯಿ ಪೂಜಾರಿ, ಅಮೃತ ಮೇಲಕೇರಿ, ಕೃಷ್ಣಾ ಕಾಂಬಳೆ ಉಪಸ್ಥಿತರಿದ್ದರು. ವೇದಿಕೆಯ ಅಧ್ಯಕ್ಷತೆ ಶಿವಲಿಂಗ ತೇಲ್ಕರ್ ವಹಿಸಿದರು.
ವಿದ್ಯಾರ್ಥಿ ಸಮರ್ಥ ಪೂಜಾರಿ ಸ್ವಾಗತಿಸಿದರು, ತಾರಾ ನಾಗೋಜಿ ನಿರೂಪಿಸಿದರು ಮತ್ತು ಸಮರ್ಥ ಹಳ್ಳಿಮನಿ ವಂದನೆ ಸಲ್ಲಿಸಿದರು.
“ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಚಾರಿತ್ರ್ಯವುಳ್ಳವರಾಗಿರಬೇಕು. ದುಶ್ಚಟಗಳಿಂದ ದೂರವಿದ್ದು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಇತ್ತೀಚೆಗೆ ಕೆಲವು ಶಿಕ್ಷಕರು ಅಸಭ್ಯ ವರ್ತನೆ ತೋರಿರುವುದು ವಿಷಾದನೀಯ. ಇಂತಹವರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತದೆ” ಎಂದು ಶ್ರೀ ಮರುಳಸಿದ್ಧ ಮಹಾಸ್ವಾಮೀಜಿ ಸ್ಪಷ್ಟಪಡಿಸಿದರು.









