ಆಳಂದ: ಪಟ್ಟಣದ ಲಿಂಗಾಯತ್ ಭವನದಲ್ಲಿ ಶನಿವಾರ ಕಲಬುರಗಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರ ಸನ್ಮಾನ ಹಾಗೂ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭ ಅದ್ಧೂರಿಯಾಗಿ ನೆರವೇರಿತು.
ನೀತಿ ಆಯೋಗದ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ಆರ್. ಪಾಟೀಲ ಅವರು ಸಮಾರಂಭವನ್ನು ಉದ್ಘಾಟಿಸಿ, ಶಿಕ್ಷಕರ ತ್ಯಾಗ, ಸೇವೆ ಮತ್ತು ಸಮಾಜ ನಿರ್ಮಾಣದಲ್ಲಿ ಅವರ ಪಾತ್ರವನ್ನು ಶ್ಲಾಘಿಸಿದರು. “ಗುರುಗಳು ಕೇವಲ ಪಾಠ ಹೇಳುವವರು ಅಲ್ಲ, ಅವರು ಸಮಾಜದ ದಿಕ್ಕು ತೋರಿಸುವ ದೀಪಸ್ತಂಭರು. ನಿವೃತ್ತರಾದ ಗುರುಗಳು ತಮ್ಮ ಜೀವನವನ್ನು ವಿದ್ಯಾರ್ಥಿ ಅಭಿವೃದ್ಧಿಗೆ ಅರ್ಪಿಸಿದ್ದಾರೆ. ಇಂತಹವರನ್ನು ಗೌರವಿಸುವುದು ನಮ್ಮ ಕರ್ತವ್ಯ” ಎಂದು ಶಾಸಕರು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಿಗೆ ಪುಷ್ಪಹಾರ, ಗೌರವಪತ್ರ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಸ್ತುತ ಸಾಲಿನ ತಾಲೂಕು ಮಟ್ಟದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಗುರುಭವನ ಸ್ಥಳ ದಾನಿ ಶಂಕರರಾವ್ ಎಂ. ದೇಶಮುಖ ಅವರಿಗೆ ಗೌರವ ಸಲ್ಲಿಸಲಾಯಿತು.

ಸಮಾರಂಭದಲ್ಲಿ ಶಿಕ್ಷಣದ ಹಕ್ಕು, ಗುಣಮಟ್ಟದ ಶಾಲೆಗಳ ನಿರ್ಮಾಣ, ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿ ಹಾಗೂ ಡಿಜಿಟಲ್ ಯುಗದಲ್ಲಿ ಶಿಕ್ಷಕರ ಪಾತ್ರ ಕುರಿತ ಚರ್ಚೆ ನಡೆಯಿತು.
ಡಾ. ಸಂಜಯ ರೆಡ್ಡಿ, ಇಒ ಮಾನಪ್ಪ ಕಟ್ಟಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಕ ಅರವಿಂದ ಭಾಸಗಿ, ಕ್ಷೇತ್ರ ಸಮನ್ವಯಾಧಿಕಾರಿ ಅಣ್ಣಪ್ಪ ಕೆ. ಹಾದಿಮನಿ, ಅಕ್ಷರ ದಾಸೋಹ ಎಡಿ ಬಿನಾಜಿ ಸೂರ್ಯವಂಶಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸತೀಶ ಸನ್ಮುಖ, ಪ್ರೌಢ ಶಾಲೆ ಎಚ್‌ಎಂ ಸಂಘದ ಅಧ್ಯಕ್ಷ ಮರೆಪ್ಪ ಬಡಿಗೇರ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿನಾಥ ಖಜೂರಗಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ದತ್ತಾ ಬಡಗೇರ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ, ಎಚ್‌ಎಂ ಸಂಘದ ಅಧ್ಯಕ್ಷ ಶಿವಬಸಪ್ಪ ಟಕ್ಕಳಕಿ, ಪಟ್ಟಣ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಶಿಕ್ಷಕಿಯರ ಸಂಘದ ಅಧ್ಯಕ್ಷೆ ಶೈಲಜಾ ಪೋಮಾಜಿ ಸೇರಿದಂತೆ ಅನೇಕ ಗಣ್ಯರು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಶಿಕ್ಷಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು.









