ಆಳಂದ: ತಾಲೂಕು ಗಡಿ ಪ್ರದೇಶವಾಗಿರುವುದರಿಂದ ಮಹಾರಾಷ್ಟ್ರದ ಸೀಮೆಯಲ್ಲಿ ದಿನನಿತ್ಯ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಗಂಭೀರ ಚಿಂತೆಯ ವಿಷಯವಾಗಿದೆ ಎಂದು ಭ್ರಷ್ಟಾಚಾರ ಮುಕ್ತ ಆಂದೋಲನದ ಮೂಲಸ್ಥಾನಿಯಾಗಿರುವ ಜನತಾ ದಳ (ಜಾತ್ಯತೀತ) ಪಕ್ಷದ ನಾಯಕಿ ಮಹೇಶ್ವರಿ ಎಸ್. ವಾಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಆಳಂದ ಪೊಲೀಸ್ ಇಲಾಖೆ ಒಬ್ಬರಿಗೆ ಮಾತ್ರ ತಡಿಪಾರು ಆದೇಶ ಹೊರಡಿಸಿರುವುದು ಸ್ವಾಗತಾರ್ಹ. ಆದರೆ ತಾಲೂಕಿನಲ್ಲಿರುವ ಎಲ್ಲಾ ಗೂಂಡಾಗಳು ಮತ್ತು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವವರ ವಿರುದ್ಧ ಸಮಾನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪೊಲೀಸರ ಕಾರ್ಯವೈಖರಿಯ ಬಗ್ಗೆ ಜನರಲ್ಲಿ ಅನುಮಾನ ಹುಟ್ಟುವುದು ಸಹಜ,” ಎಂದು ಕಿಡಿಕಾರಿದರು.
ಅವರು ಮುಂದುವರಿದು, “ಆಳಂದ ಗಡಿತಾಲೂಕು ಎಂದು ಹೆಸರುವಾಸಿಯಾಗಿದ್ದರೂ ಇಲ್ಲಿ ಮಟ್ಟಕಾ, ಬಡ್ಡಿ ವ್ಯವಹಾರ, ಅಕ್ಕಿ ಹಾಗೂ ಗುಟ್ಕಾ ಸಾಗಾಟಣೆ, ಶಾಂತಿ ಭಂಗ ಚಟುವಟಿಕೆಗಳು ನಿರಂತರ ನಡೆಯುತ್ತಿವೆ. ಇಂತಹ ಚಟುವಟಿಕೆಯಲ್ಲಿ ತೊಡಗಿರುವವರ ವಿರುದ್ಧ ಹಲವು ದೂರುಗಳು ದಾಖಲಾಗಿದ್ದರೂ, ಪೊಲೀಸರು ಒಬ್ಬರ ಮೇಲೆ ಮಾತ್ರ ಕ್ರಮ ಕೈಗೊಂಡಿದ್ದಾರೆ. ಇದು ರಾಜಕೀಯ ಒತ್ತಡವೇ ಅಥವಾ ವೈಯಕ್ತಿಕ ದ್ವೇಷವೇ ಎಂಬ ಅನುಮಾನ ಮೂಡುತ್ತಿದೆ,” ಎಂದು ಪ್ರಶ್ನಿಸಿದರು.
ಬಡ್ಡಿ ವ್ಯವಹಾರದಿಂದ ಅನೇಕರ ಮನೆಗಳು ಹರಾಜಾಗಿವೆ, ಬಡವರ ಅಕ್ಕಿ ಸಾಗಾಟಣೆ ಮಾಡುವವರು ರಾಜಾರೋಷವಾಗಿ ಸಂಚರಿಸುತ್ತಿದ್ದಾರೆ, ಗುಟ್ಕಾ ಸಾಗಾಟಣೆಯ ವಾಹನಗಳು ನಿರ್ಬಂಧವಿಲ್ಲದೆ ಓಡಾಡುತ್ತಿವೆ ಎಂಬುದನ್ನು ಉದಾಹರಣೆಯಾಗಿ ಅವರು ಪ್ರಸ್ತಾಪಿಸಿದರು. “ಇಂತಹವರನ್ನು ಕಡೆಗಣಿಸಿ ಒಬ್ಬರ ಮೇಲೆ ಮಾತ್ರ ಕ್ರಮ ಕೈಗೊಳ್ಳುವುದು ಪೊಲೀಸರ ವೈಫಲ್ಯತೆಯನ್ನು ತೋರಿಸುತ್ತದೆ. ನಾನು ಹಲವು ಬಾರಿ ಕಳ್ಳ ಅಕ್ಕಿ ಮತ್ತು ಗುಟ್ಕಾ ಸಾಗಾಟಣೆ ವಾಹನಗಳನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದೇನೆ. ಆದರೆ ಅವರನ್ನು ಬಿಟ್ಟಿದ್ದಾರೆ. ಕೆಲವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಇಲಾಖೆಯವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ,” ಎಂದು ಆರೋಪಿಸಿದರು.
“ಕಾನೂನು ತಪ್ಪು ಮಾಡಿದ ಎಲ್ಲರಿಗೂ ಶಿಕ್ಷೆ ನೀಡಬೇಕು. ಒಬ್ಬರನ್ನು ಮಾತ್ರ ಗುರಿಮಾಡುವುದು ನ್ಯಾಯವಲ್ಲ. ಗಡಿಪಾರು ಮಾಡಬೇಕಾದರೆ ತಾಲೂಕಿನ ಎಲ್ಲಾ ಗೂಂಡಾಗಳು ಮತ್ತು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವವರನ್ನೂ ಗಡಿಪಾರು ಮಾಡಬೇಕು,” ಎಂದು ಅವರು ಆಗ್ರಹಿಸಿದರು.
ಸದ್ಯದ ಪರಿಸ್ಥಿತಿಯನ್ನು ಉಲ್ಲೇಖಿಸಿ ಅವರು, “ಪೊಲೀಸ್ ಇಲಾಖೆ ವೈಯಕ್ತಿಕ ಹಾಗೂ ರಾಜಕೀಯ ಒತ್ತಡಕ್ಕೆ ಒಳಗಾಗಿರುವಂತಿದೆ. ಇದು ಸರಿಯಲ್ಲ. ಸಾರ್ವಜನಿಕ ಹಿತಾಸಕ್ತಿಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜನರ ನಂಬಿಕೆ ಕುಸಿಯುತ್ತದೆ. ಇತ್ತೀಚೆಗೆ ತಾಲೂಕಿನಲ್ಲಿ ಕೊಲೆ, ದಾಳಿ ಪ್ರಕರಣಗಳು ಹೆಚ್ಚಾಗಿವೆ. ಪಟ್ಟಣದಲ್ಲಿಯೇ ನಿತ್ಯ ಗೂಂಡಾಗಳ ಹೊಡೆದಾಟಗಳು ನಡೆಯುತ್ತಿವೆ. ಇದನ್ನು ನಿಯಂತ್ರಿಸುವ ಬದಲು ಪೊಲೀಸ್ ಇಲಾಖೆಯ ಕಾರ್ಯಶೈಲಿಯೇ ಪ್ರಶ್ನೆಗೆ ಗುರಿಯಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣವೇ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಿ ಕಾನೂನು ಪಾಲನೆಗೆ ಮುಂದಾಗಬೇಕು,” ಎಂದು ಮಹೇಶ್ವರಿ ವಾಲಿ ಒತ್ತಾಯಿಸಿದರು.









