ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಶಾಶ್ವತ ನೀರಾವರಿಗಾಗಿ ಪಾದಯಾತ್ರೆ ಆರಂಭ-ಅಮರ್ಜಾ ಅಣೆಕಟ್ಟೆ ಕಾಲುವೆಯಲ್ಲಿ ಭೀಮಶೆಟ್ಟಿ ಮುಕ್ಕಾ ಪಾದಯಾತ್ರೆ ಅಧ್ಯಯನ ಶುರು.

On: January 11, 2026 4:47 PM

ಆಳಂದ: ಕರ್ನಾಟಕ ನೀರಾವರಿ ನಿಗಮದ ಅಡಿಯಲ್ಲಿನ ನೀರಾವರಿ ಯೋಜನೆಗಳಾದ ಏತ ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಹಾಗೂ ರೈತರಲ್ಲಿ ನೀರಿನ ಸದ್ಬಳಕೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಲಬುರ್ಗಿ–ಬೀದರ್–ಯಾದಗಿರಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ ಅವರು ಭೀಮಾ ಮಿಷನ್ ಘೋಷವಾಕ್ಯದೊಂದಿಗೆ ಮುಖ್ಯ ಕಾಲುವೆ ಮೇಲೆ ಪಾದಯಾತ್ರೆ ಮೂಲಕ ಅಧ್ಯಯನ ಆರಂಭಿಸಿದ್ದು, ಸೋಮವಾರ ಅಮರ್ಜಾ ಅಣೆಕಟ್ಟೆಯ ಬಲದಂಡೆ ಕಾಲುವೆಯಲ್ಲಿ ಪಾದಯಾತ್ರೆಯನ್ನು ಆರಂಭಿಸಿದರು.

ಜನವರಿ 1ರಿಂದ 30ರವರೆಗೆ ನಡೆಯಲಿರುವ ಈ ಅಧ್ಯಯನ ಪಾದಯಾತ್ರೆಯು ಕರ್ನಾಟಕ ನೀರಾವರಿ ನಿಗಮದ ಕಲಬುರ್ಗಿ ವಲಯದಡಿ ಬರುವ ಭೀಮಾ ಏತ ನೀರಾವರಿ ಯೋಜನೆಗಳಾದ ಅಮರ್ಜಾ, ಚುಳಕಿನಾಲ, ಕಾರಂಜಾ, ಚಂದ್ರಂಪಳ್ಳಿ, ಮಲ್ಲಮಾರಿ ಕೆಳದಂಡೆ, ಹತ್ತಿಕುಣಿ, ಸೌದಾಗರ್, ಮುಲ್ಲಮಾರಿ ಮೇಲ್ದಂಡೆ, ಗುಂಡೂರಿನಾಲ, ಬೆಣ್ಣಿತೋರ ಸೇರಿದಂತೆ ಹಲವು ಮಧ್ಯಮ ನೀರಾವರಿ ಯೋಜನೆಗಳ ಕಾಲುವೆಗಳ ಸ್ಥಿತಿಗತಿ, ನೀರಿನ ಸದ್ಬಳಕೆ ಮತ್ತು ಅಡೆತಡೆಗಳನ್ನು ಸಮಗ್ರವಾಗಿ ಅಧ್ಯಯನ ಕೈಗೊಳ್ಳಲು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ.

ಸೋಮವಾರ ಅಮರ್ಜಾ ಅಣೆಕಟ್ಟಿಗೆ ಆಗಮಿಸಿ ಬಳಿಕ ಪಾದಯಾತ್ರೆಯ ಆರಂಭದ ಮುನ್ನ ಮಾತನಾಡಿದ ಭೀಮಶೆಟ್ಟಿ ಮುಕ್ಕಾ ಅವರು,“ಜಲಾಶಯಗಳು ತುಂಬಿ ತುಳುಕುತ್ತಿದ್ದರೂ ಕಾಲುವೆಗಳ ಮೂಲಕ ನೀರು ಕ್ಷೇತ್ರಗಳಿಗೆ ತಲುಪುತ್ತಿಲ್ಲ. ಮುಖ್ಯ ಕಾಲುವೆಗಳು ಅಪೂರ್ಣವಾಗಿವೆ, ವಿತರಣಾ ಕಾಲುವೆಗಳು ಮಣ್ಣು–ಕಲ್ಲುಗಳಿಂದ ತುಂಬಿವೆ, ಮರಿ ಕಾಲುವೆಗಳು ಒಡೆದು ಹೋಗಿವೆ. ಅಧಿಕಾರಿಗಳ ಅಲಕ್ಷ್ಯದಿಂದ 11 ನೀರಾವರಿ ಯೋಜನೆಗಳನ್ನು ಪೂರ್ಣಗೊಂಡಿವೆ ಎಂದು ಘೋಷಿಸಲಾಗಿದೆ. ರೈತರು ನೀರನ್ನು ಸರಿಯಾಗಿ ಬಳಸಿಕೊಳ್ಳದೇ ಇರುವುದರಿಂದ ಜಾಗೃತಿ ಕೊರತೆ ಕಂಡುಬಂದಿದೆ. ಈ ಪಾದಯಾತ್ರೆಯ ಮೂಲಕ ಈ ಎಲ್ಲ ಸಮಸ್ಯೆಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು,” ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ ಆರ್ಥಿಕ ವಿಶ್ಲೇಷಕರಾದ ಕಾನೂನು ಕಾಲೇಜಿನ ನಿವೃತ್ತ ಪ್ರಾಚಾರ್ಯ ಬಸವರಾಜ್ ಕಮ್ನೂರ್ ಮಾತನಾಡಿ,“ರೈತರು ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಜಮೀನಿನ ಫಲವತ್ತತೆ ಕಾಪಾಡಬೇಕು, ಆರ್ಥಿಕವಾಗಿ ಸದೃಢರಾಗಬೇಕು. ಈ ನಿಟ್ಟಿನಲ್ಲಿ ಜಾಗೃತರಾಗಬೇಕು. ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ, ಕಾಲುವೆಗಳನ್ನು ಶುದ್ಧೀಕರಿಸಿ, ನೀರಿನ ಶೇ.100 ಬಳಕೆ ಖಾತ್ರಿಪಡಿಸಿ, ಕಾಲುವೆಗಳ ದೋಷಗಳನ್ನು ಸರಿಪಡಿಸಿ ಶಾಶ್ವತ ನೀರಾವರಿ ಕಾರ್ಯಯೋಜನೆಯನ್ನು ಜಾರಿಗೊಳಿಸಬೇಕು ಎಂಬುದು ನಮ್ಮ ಸ್ಪಷ್ಟ ಬೇಡಿಕೆ. ಈ ಪಾದಯಾತ್ರೆಯ ಮೂಲಕ ಭೀಮಶೆಟ್ಟಿ ಮುಕ್ಕಾ ಅವರು ಕೈಗೊಳ್ಳಲಿರುವ ಅಧ್ಯಯನ ವರದಿಯನ್ನು ಸಮಾರೋಪದ ಬಳಿಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು,” ಎಂದು ತಿಳಿಸಿದರು.

ಪಾದಯಾತ್ರೆಯಲ್ಲಿ ಮುಖಂಡ ಶಿವಲಿಂಗಪ್ಪ ಟೆಂಗಳಿ, ರಾಜ್ ಜೈನ್, ಶಿವಾನಂದ ಮಠಪತಿ, ಗಿರಿಷಗೌಡ ಇನಾಮದಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅಮರ್ಜಾ ಅಣೆಕಟ್ಟೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜಕುಮಾರ್ ಜಲ್ದೆ, ಎ.ಇ.ಇ. ಮೋನಪ್ಪ ಅನ್ವಾರ, ಜೆ.ಇ. ಶಂಭುಲಿಂಗ, ಮಲ್ಲಿಕಾರ್ಜುನ, ಸುನೀಲ್ ಕುಮಾರ್ ಆತ್ಮೀಯವಾಗಿ ಸ್ವಾಗತಿಸಿದರು. ರಾಜಕುಮಾರ್ ಜಲ್ದೆ ಅವರು ಯೋಜನೆಯ ಸಾಧಕ–ಬಾಧಕಗಳ ಕುರಿತು ತಂಡಕ್ಕೆ ಮಾಹಿತಿ ನೀಡಿದರು.

ಬಳಿಕ ಭೀಮಶೆಟ್ಟಿ ಮುಕ್ಕಾ ಅವರು ಬಲದಂಡೆ ಕಾಲುವೆಯ ಮೂಲಕ ಪಾದಯಾತ್ರೆ ಆರಂಭಿಸಿದರು. ಈ ಹಂತದ ಪಾದಯಾತ್ರೆ ಸೋಮವಾರದವರೆಗೆ ನಡೆಯಲಿದ್ದು, ನಂತರ ಎರಡೂ ಕಾಲುವೆಗಳಲ್ಲಿ ಸುಮಾರು 10 ದಿನಗಳ ಕಾಲ ಅಧ್ಯಯನ ಮುಂದುವರೆಯಲಿದೆ. ಈ ಪಾದಯಾತ್ರೆಯ ಮೂಲಕ ರೈತರ ಸಮಸ್ಯೆಗಳಿಗೆ ಧ್ವನಿ ಎತ್ತಿ, ನೀರಾವರಿ ಯೋಜನೆಗಳ ಸಮಗ್ರ ಅನುಷ್ಠಾನಕ್ಕೆ ಒತ್ತಡ ಹೇರಲು ಭೀಮಾ ಮಿಷನ್ ಉದ್ದೇಶಿಸಿದೆ.

Join WhatsApp

Join Now

Leave a Comment

error: Content is Protected!