ಆಳಂದ: ತಾಲೂಕಿನ ಸರ್ಕಾರಿ ಮತ್ತು ಅರೆ ಸರ್ಕಾರಿ ಪರಿಶಿಷ್ಟ ಜಾತಿ (ಎಸ್‍ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್‍ಟಿ) ನೌಕರರ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಒಗ್ಗಟ್ಟು ಸಾಧಿಸಬೇಕು ಎಂದು ಸಂಘದ ಜಿಲ್ಲಾ ಉಪಾಧ್ಯಕ್ಷ ಶ್ರೀಕಾಂತ್ ಕೆಂಗೇರಿ ಅವರು ಕರೆ ನೀಡಿದರು.
ಪಟ್ಟಣದ ತಾಲೂಕು ಆಡಳಿತಸೌಧ ಸಭಾಂಗಣದಲ್ಲಿ ನಡೆದ ತಾಲೂಕಿನ ಸರ್ಕಾರಿ ಮತ್ತು ಅರೆ ಸರ್ಕಾರಿ ಪರಿಶಿಷ್ಟ ಜಾತಿ (ಎಸ್‍ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್‍ಟಿ) ನೌಕರರ ಸಭೆಯಲ್ಲಿ ಸಂಘದ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಸಂಘಟನೆಯನ್ನು ಚುರುಕುಗೊಳಿಸಿ ಕೆಲಸ ನಿರ್ವಹಿಸುವ ಉದ್ದೇಶದಿಂದ ಹೊಸ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ತಮ್ಮ ಸಮಸ್ಯೆಗಳ ನಿವಾರಣೆ ಜೊತೆಗೆ ಇಲಾಖೆ ವಹಿಸುವ ಜವಾಬ್ದಾರಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಸಂತೋಷ ಶಿಂಧೆ ಮಾತನಾಡಿ, ಸಂಘಟನೆಯ ಈ ಹೊಸ ನಾಯಕತ್ವವು ನೌಕರರ ಹಕ್ಕುಗಳ ರಕ್ಷಣೆ, ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಸಾಮಾಜಿಕ ನ್ಯಾಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ತಾಲೂಕು ಸಂಘಕ್ಕೆ ಕಂದಾಯ ಇಲಾಖೆಯ ಹಿರಿಯ ಶಿರಸ್ತೇದಾರ್ ರಾಕೇಶ್ ಶೀಲವಂತ್ (ಗೌರವಾಧ್ಯಕ್ಷ), ರಮೇಶ್ ಪಾತ್ರೆ (ಅಧ್ಯಕ್ಷ), ಶಿಕ್ಷಣ ಇಲಾಖೆಯ ಲೋಕಪ್ಪ ಜಾಧವ (ಪ್ರಧಾನ ಕಾರ್ಯದರ್ಶಿ), ಆರೋಗ್ಯ ಇಲಾಖೆಯ ಸಿದ್ದರಾಮ ನಾಯ್ಕೋಡಿ (ಖಜಾಂಚಿ), ಉಪ ಖಜಾನೆಯ ರಾಜೇಶ್ ಶಾಖಾ (ಉಪಾಧ್ಯಕ್ಷ), ಆರೋಗ್ಯ ಇಲಾಖೆಯ ಶ್ರೀದೇವಿ ಕಾಳಕಿಂಗೆ (ಮಹಿಳಾ ಉಪಾಧ್ಯಕ್ಷೆ) ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಉಳಿದ ಹುದ್ದೆಗಳನ್ನು ಇಲಾಖೆವಾರು ಪರಿಗಣಿಸಿ ಮುಂದಿನ ಸಭೆಯಲ್ಲಿ ಚರ್ಚಿಸಿ ಆಯ್ಕೆ ಮಾಡಲು ಸಭೆಯಲ್ಲಿ ಸರ್ವರು ಒಪ್ಪಿಗೆ ಸೂಚಿಸಿದರು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಸಂಘದ ಅಧಿಕಾರ ವಹಿಸಲಾಯಿತು.









