ಆಳಂದ: ಪಟ್ಟಣದ ಶರಣ ನಗರದ ಶ್ರೀ ಸದ್ಗುರು ರೇವಣಸಿದ್ಧ ಶಿವಶರಣ ಮಂಟಪದಲ್ಲಿ ಈ ಬಾರಿ ಐತಿಹಾಸಿಕ ಆಧ್ಯಾತ್ಮಿಕ ಮಹಾಮೇಳ ನಡೆಯಲಿದೆ. ಸದ್ಗುರು ಶ್ರೀ ರೇವಣಸಿದ್ದ ಶಿವಶರಣ ಮಹಾಸ್ವಾಮಿಗಳವರ 75ನೇ ವರ್ಷದ ಅಮೃತ ಮಹೋತ್ಸವ, ತೀರ್ಥಲಿಂಗ ಪಟ್ಟದೇವರ 19ನೇ ವರ್ಷದ ಪುಣ್ಯಾರಾಧನೆ ಹಾಗೂ ಪ್ರಸ್ತುತ ಪೀಠಾಧಿಪತಿ ಚೆನ್ನಬಸವ ಪಟ್ಟದೇವರ 19ನೇ ಪಟ್ಟಾಭಿಷೇಕ ವಾರ್ಷಿಕ ಮಹೋತ್ಸವವು ಡಿ. 9 ರಿಂದ 14 ರವರೆಗೆ ಅದ್ಧೂರಿಯಾಗಿ ಜರಗಲಿದೆ.
ಈ ಕುರಿತು ಶರಣ ಮಂಟಪದ ಶ್ರೀ ಚೆನ್ನಬಸವ ಪಟ್ಟದೇವರು ಕಾರ್ಯಕ್ರಮ ಪತ್ರಿಕೆ ಬಿಡುಗಡೆಗೊಳಿಸಿ ಶನಿವಾರ ಮಾತನಾಡಿದ ಅವರು, ಬೀದರ್ ಚಿದಂಬರಾಶ್ರಮದ ಡಾ. ಶಿವಕುಮಾರ್ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಈಗಾಗಲೇ ಒಂದು ತಿಂಗಳಿನಿಂದ ಶರಣ ಮಂಟಪದಿಂದ ಭರದ ಸಿದ್ಧತೆ ನಡೆಯುತ್ತಿದೆ. ಸಾವಿರಾರು ಭಕ್ತರಿಗೆ ದಿನನಿತ್ಯ ಅನ್ನಪ್ರಸಾದ, ರೊಟ್ಟಿ–ಪಲ್ಯ ತಯಾರಿಕೆ, ಭಾರೀ ಪೆಂಡಾಲ್, ವೇದಿಕೆ ನಿರ್ಮಾಣ, ದೀಪಾಲಂಕಾರ, ಧ್ವಜಸ್ತಂಭ ಸ್ಥಾಪನೆ ಸೇರಿದಂತೆ ಎಲ್ಲ ವ್ಯವಸ್ಥೆಗಳು ಯುದ್ಧೋಪಾದಿಯಲ್ಲಿ ಸಾಗಿವೆ ಎಂದು ಅವರು ಹೇಳಿದರು.
ಕಾರ್ಯಕ್ರಮ ವಿವರ: ಡಿ. 9, ಸಂಜೆ 7 ಗಂಟೆ: 63 ಮಹಾಶರಣರ ಮಂಟಪಕ್ಕೆ ವಿಶೇಷ ಪೂಜೆ. ಕಾರ್ಯಕ್ರಮಕ್ಕೆ ಜಿಡಗಾ, ಮಗಳಕೋಡ ಮಠದ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಪ್ರವಚನಕಾರ ಮಲ್ಲಿಕಾರ್ಜುನ ಶಾಸ್ತ್ರಿ ಐನಾಪುರ ಅವರು ಐದು ದಿನಗಳ ಕಾಲ ಪ್ರವಚನ ನಡೆಸುವರು.
ಡಿ. 10, ಬೆಳಗ್ಗೆ 8 ಗಂಟೆ: ಪ್ರಣವ ಧ್ವಜಾರೋಹಣ – ಮೈಂದರಗಿ ಗೌರಿಕಟ್ಟಾ ಅಭಿನವ ರೇವಣಸಿದ್ದ ಪಟ್ಟದೇವರು (ಹಿರೇಮಠ) ನೆರವೇರಿಸುವರು. ಮಾದನಹಿಪ್ಪರಗಾ ಶ್ರೀ ಶಿವಲಿಂಗೇಶ್ವರ ಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಮೈಂದರಗಿ ಹಿರೇಮಠದ ಅಭಿನವ ರೇವಣಸಿದ್ದ ಪಟ್ಟದೇವರು, ನೀಲಕೇರಿಯ ಘನಲಿಂಗ ಸ್ವಾಮಿಗಳು ನೇತೃತ್ವ ವಹಿಸುವರು.
ಸಂಜೆ 7 ಗಂಟೆ: “ಸತ್ಯವಂತರ ಸಂಗವಿರಲು ತೀರ್ಥವೇ ತಕೆ” – ಪ್ರವಚನ. ಸಾನ್ನಿಧ್ಯ: ಗುಳೇದಗುಡ್ಡ ಮಠದ ಶ್ರೀ ಕಾಶಿನಾಥ ಮಹಾಸ್ವಾಮಿಗಳು, ಆಳಂದಿ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು, ಮೈಂದರಗಿ ಶ್ರೀ ಅಭಿನವ ರೇವಣಸಿದ್ಧ ಪಟ್ಟದೇವರು.
ಡಿ. 11, ಬೆಳಗ್ಗೆ 10:15 ಗಂಟೆ: “ಮನಯೇವ ಕಾರಣಂ ಬಂಧ ಮೋಕ್ಷಯೋ” – ಪ್ರವಚನ, ಸಾನ್ನಿಧ್ಯ: ಮಾದನಹಿಪ್ಪರಗ ಚಲಗೇರಾ ಮಠದ ಶಾಂತಿವೀರ ಶಿವಾಚಾರ್ಯರು.
ಮೈಂದರಗಿ ಸಿದ್ಧಾಶ್ರಮ ವಿರಕ್ತಮಠದ ಮೃತ್ಯುಂಜಯ ಮಹಾಸ್ವಾಮಿಗಳು, ಮುತ್ಯಾನ ಬಬಲಾದ, ಗಳಸಂಗಿ ಮಠದ ಗುರುಪಾದಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸುವರು.
ಸಂಜೆ 7:15 ಗಂಟೆ: “ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯ” – ಪ್ರವಚನ. ಸಾನ್ನಿಧ್ಯ: ಶಿರಹಟ್ಟಿ ಬಾಳೆಹೊಸೂರು ಸಂಸ್ಥಾನ ಪೀಠದ ಜಗದ್ಗುರು ಶ್ರೀ ಫಕೀರದಿಂಗಾಲೇಶ್ವರ ಮಹಾಸ್ವಾಮಿಗಳು.
ರಾವೂರ್ ಮಠದ ಸಿದ್ದಲಿಂಗ ಮಹಾಸ್ವಾಮಿಗಳು, ಹುಲ್ಯಾಳ ಆಶ್ರಮದ ಶರಣಿ ಜಯಶ್ರೀದೇವಿ ತಾಯಿ ನೇತೃತ್ವ ವಹಿಸುವರು.
ಡಿ. 12, ಬೆಳಗ್ಗೆ 10:15 ಗಂಟೆ: ಕಡಗಂಚಿ ಮಠದ ಶ್ರೀ ವೀರಭದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು.
ಯಳಸಂಗಿ ಸಿದ್ಧಾರೂಢ ಮಠದ ಪರಮಾನಂದ ಮಹಾಸ್ವಾಮಿಗಳು, ಕಿಣ್ಣಿಸುಲ್ತಾನ್ ಮಠದ ಶಿವಶಾಂತಲಿಂಗ ಶಿವಾಚಾರ್ಯರು ಆಗಮಿಸುವರು.
ಸಂಜೆ: ಬೀದರನ ಡಾ. ಶಿವಕುಮಾರ್ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ – ದೇವಂತಿಗೆ ಹಿರೇಮಠದ ಶ್ರೀ ರೇಣುಕಾ ಶಿವಾಚಾರ್ಯರು, ಬೀದರ್ ಶಿವಪ್ರಕಾಶನಂದಗಿರಿ ಸ್ವಾಮಿಗಳು ಆಗಮಿಸುವರು.
ಡಿ. 13, ಬೆಳಗಿನ ಧಾರ್ಮಿಕ ಸಮಾರಂಭ: ಇಂಚಲ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಕಲಬುರಗಿ ಸಿದ್ಧಾರೂಢ ಮಠದ ಲಕ್ಷ್ಮೀದೇವಿ ತಾಯಿ, ಚಳಕಾಪುರ ಶಂಕರಾನಂದ ಮಹಾಸ್ವಾಮಿಗಳು, ಬೀದರ್ ಗುರುದೇವ ಆಶ್ರಮದ ಗಣೇಶಾನಂದ ಮಹಾಸ್ವಾಮಿಗಳು, ನೀಲಾಂಬಿಕಾ ತಾಯಿ, ನಂದಾದೇವಿ ತಾಯಿ ಆಗಮಿಸುವರು.
ಸಂಜೆ: ಇಂಚಲ ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳು, ಚೋಡಕುರಳ್ಳಿ ಮಠದ ಚಿದಾನಂದ ಭಾರತಿ ಶ್ರೀ, ನಿಂಬರ್ಗಾ ವಿರಕ್ತಮಠದ ಶಿವಲಿಂಗ ಮಹಾಸ್ವಾಮಿಗಳು, ಸೊಲ್ಲಾಪುರ ಬಸವರೂಢ ಮಠದ ಶಿವಪುತ್ರ ಮಹಾಸ್ವಾಮಿಗಳು, ಅಕ್ಕಲಕೋಟ ವಿರಕ್ತಮಠದ ಬಸವಲಿಂಗ ಮಹಾಸ್ವಾಮಿಗಳು ಆಗಮಿಸುವರು.
ಡಿ. 14, ಬೆಳಗ್ಗೆ 10:15: ಸಮಾರೋಪ ಸಮಾರಂಭ – ಸಾನ್ನಿಧ್ಯ: ಗುಳೇದಗುಡ್ಡ ಗುರುಸಿದ್ಧೇಶ್ವರ ಮಠದ ಜಗದ್ಗುರು ಬಸವರಾಜ ಪಟ್ಟದೇವರು. ಸಸ್ತಾಪೂರದ ಸದಾನಂದ ಮಹಾಸ್ವಾಮಿಗಳು, ಮೈಂದರಗಿ ಹಿರೇಮಠದ ಅಭಿನವ ರೇವಣಸಿದ್ಧ ಪಟ್ಟದೇವರು, ನೀಲಕೇರಿ ಸಿದ್ಧಾರೂಢ ಮಠದ ಘನಲಿಂಗ ಶ್ರೀಗಳು, ಆಳಂದ ನಂದವಾಡಗಿ, ಚಾಲವಾದಿ ಶ್ರೀ ಮಹಂತೇಶ್ವರ ಸಂಸ್ಥಾನ ಹಿರೇಮಠದ ಹಿರಿಯ ಪೀಠಾಧಿಪತಿ ಶ್ರೀ ಮಹಾಂತಲಿಂಗ ಶಿವಾಚಾರ್ಯರು ಹೆಸರಾದವರು.
ಆರು ದಿನಗಳ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ರಾಜಕೀಯ ಗಣ್ಯರ ಆಗಮನ ಹಾಗೂ ನಾಡಿನ ಹಿರಿಯ ಗುರು ಚರಮೂರ್ತಿಗಳ ಉಪಸ್ಥಿತಿ ನಿಗದಿಯಾಗಿದೆ.
ಶರಣ ಮಂಟಪದ ಕಾರ್ಯಕರ್ತರು, ಸ್ವಯಂಸೇವಕರು ಹಾಗೂ ಭಕ್ತರು ದಿನರಾತ್ರಿ ಶ್ರಮ ವಹಿಸಿ ಸಿದ್ಧತೆ ಮಾಡುತ್ತಿದ್ದು, “ಎಂದಿನಂತೆ ಈ ಬಾರಿಯೂ ಸಾವಿರಾರು ಭಕ್ತರು ಆಗಮಿಸಿ ದಿವ್ಯ ದರ್ಶನ–ಆಶೀರ್ವಾದ ಪಡೆಯಲಿದ್ದಾರೆ” ಎಂದು ಮಂಟಪದ ಸಮಿತಿ ಅಧ್ಯಕ್ಷ ಸೂರ್ಯಕಾಂತ ತಟ್ಟಿ ಹಾಗೂ ಶ್ರೀಶೈಲ ಉಳ್ಳೆ ತಿಳಿಸಿದ್ದಾರೆ.









