ಆಳಂದ: ತಾಲೂಕಿನ ನಿಂಬರ್ಗಾ ಹೋಬಳಿ ಕೇಂದ್ರದಲ್ಲಿ ನಡೆದ ಹಲವು ಅಭಿವೃದ್ಧಿ ಕಾಮಗಾರಿಗಳು ಮೂರು–ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ. ಲಕ್ಷಾಂತರ ರೂಪಾಯಿಗಳ ವೆಚ್ಚದ ಬಳಿಕವೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸ್ಪಂದನೆ ಇಲ್ಲದೆ ಈ ಕಾಮಗಾರಿಗಳು ಅನಾಥರಂತಾಗಿವೆ.
ಈ ನಿರ್ಲಕ್ಷ್ಯದಿಂದ ಆಕ್ರೋಶಗೊಂಡ ಸ್ಥಳೀಯರು ಗ್ರಾಮ ಪಂಚಾಯಿತಿ ಕಚೇರಿ, ಬಸ್ ನಿಲ್ದಾಣ ಹಾಗೂ ಜಿಲ್ಲಾ ಆಡಳಿತದ ಎದುರು ಪ್ರತಿಭಟನೆ ನಡೆಸಿದರೂ ಫಲವಿಲ್ಲ. ಇದೀಗ ವಾರದೊಳಗೆ ಸ್ಪಂದನೆ ದೊರೆಯದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ನಿಂಬರ್ಗಾ ಗ್ರಾಮದಲ್ಲಿ ₹36 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ರೈತ ಸಂಪರ್ಕ ಕೇಂದ್ರ ಕಟ್ಟಡ ಎರಡು ವರ್ಷಗಳಿಂದ ಬಳಕೆಗೆ ಬಂದಿಲ್ಲ. ಕಟ್ಟಡ ಖಾಲಿಯಾಗಿರುವುದರಿಂದ ಶಿಥಿಲಾವಸ್ಥೆಗೆ ತಲುಪುತ್ತಿದೆ. ಸ್ಥಳೀಯ ಸಂಘಟಕರು “ಈ ಕಟ್ಟಡ ಬಳಕೆಯಾಗದೇ ಇರುವುದರಿಂದ ಅದರ ಮೌಲ್ಯ ಕಡಿಮೆಯಾಗುತ್ತಿದೆ. ಲಿಖಿತ ಮತ್ತು ಮೌಖಿಕ ಮನವಿಗಳನ್ನು ಹಲವು ಬಾರಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ” ಎಂದು ದೂರಿದ್ದಾರೆ.
ಅದೇ ರೀತಿ ಪಂಚಾಯತ್ ರಾಜ್ ಇಲಾಖೆಯಿಂದ ₹19 ಲಕ್ಷ ವೆಚ್ಚದಲ್ಲಿ ಆರಂಭವಾದ ಘನತ್ಯಾಜ್ಯ ಸಂಗ್ರಹ ಕಟ್ಟಡ ಕಾಮಗಾರಿ ಕೇವಲ ₹7 ಲಕ್ಷದಷ್ಟು ಕೆಲಸ ಮಾಡಿದ ಬಳಿಕ ನಿಂತುಹೋಗಿದೆ. ನಾಲ್ಕು ವರ್ಷಗಳ ಹಿಂದೆ ₹28 ಲಕ್ಷ ವೆಚ್ಚದಲ್ಲಿ ಆರಂಭಿಸಿದ ಗ್ರಾಮ ಪಂಚಾಯಿತಿ ಕಟ್ಟಡ ಕೂಡ ಕಳಪೆ ಗುಣಮಟ್ಟದಿಂದ ದುರ್ಬಲಗೊಂಡಿದೆ. “ಕಾಮಗಾರಿ ಮಧ್ಯದಲ್ಲೇ ಬಿಟ್ಟುಹೋದ ಅಧಿಕಾರಿಗಳ ವಿರುದ್ಧ ತನಿಖೆಯೇ ನಡೆದಿಲ್ಲ. ಈಗ ಕಟ್ಟಡದ ಕಿಟಕಿ–ಬಾಗಿಲುಗಳನ್ನು ಯಾರೋ ಕದ್ದುಕೊಂಡು ಹೋಗಿದ್ದಾರೆ” ಎಂದು ಸ್ಥಳೀಯರು ಹೇಳಿದ್ದಾರೆ.

ನಿಂಬರ್ಗಾ ವಲಯದ ಪ್ರಮುಖ ಯೋಜನೆಯಾದ ಕೆರೆ ನಿರ್ಮಾಣ ಕಾಮಗಾರಿಯೂ ಅಪೂರ್ಣವಾಗಿದೆ. ಕೆರೆ ಬಾಯಿಯಲ್ಲಿ ವೇಸ್ಟ್ ವೇರ್ ನಿರ್ಮಿಸಬೇಕಾಗಿದ್ದರೂ, ಕೇವಲ ಬಂದಾರಿ ಹಾಕಿ ಬಿಟ್ಟಿದ್ದಾರೆ. “ಈ ಕೆರೆ ಪೂರ್ಣಗೊಂಡರೆ ಧರ್ಮವಾಡಿ, ಬಸವಂತವಾಡಿ, ನಿಂಬರ್ಗಾ ತಾಂಡ, ನಿಂಬರ್ಗಾ ಮತ್ತು ಬೊಮ್ಮನಹಳ್ಳಿ ಸೇರಿದಂತೆ ವ್ಯಾಪಕ ಪ್ರದೇಶಗಳ ರೈತರಿಗೆ ನೀರಿನ ಸಮೃದ್ಧಿ ಲಭ್ಯವಾಗುತ್ತದೆ. ಬಾವಿ–ಕೊಳಗಳ ನೀರು ಇಳಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಈ ಕೆರೆಯು ಜೀವಾಳವಾಗಿರಲಿದೆ. ಆದರೆ ಮೂರು–ನಾಲ್ಕು ವರ್ಷಗಳಿಂದ ಯಾವುದೇ ಸ್ಪಂದನೆ ಇಲ್ಲ” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಮಸ್ಯೆಗಳನ್ನು ಎತ್ತಿ ತೋರಿಸಲು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಫಲ ಕಾಣದ ಹಿನ್ನೆಲೆಯಲ್ಲಿ ಸ್ಥಳೀಯರು ಮತ್ತೆ ಪ್ರತಿಭಟನೆ ನಡೆಸಿದ್ದಾರೆ. “ಆಡಳಿತ ನಿಜವಾಗಿಯೂ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ. ವಾರದೊಳಗೆ ಸ್ಪಂದನೆ ದೊರೆಯದಿದ್ದರೆ, ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ದೀರ್ಘಕಾಲ ಹೋರಾಟಕ್ಕೆ ಇಳಿಯುತ್ತೇವೆ” ಎಂದು ಸರ್ವಸಮಾಜ ಸಂಘಟನೆಯ ಅಧ್ಯಕ್ಷ ವಿಠ್ಠಲ್ ಕೋಣೇಕರ್ ಮತ್ತು ಕಾರ್ಯದರ್ಶಿ ಚಂದ್ರಕಾಂತ ದೊಗೊಂಡ ಎಚ್ಚರಿಕೆ ನೀಡಿದ್ದಾರೆ.









