ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ರಸ್ತೆ ಮಧ್ಯಭಾಗದಿಂದ ತಲಾ 20 ಅಡಿ ಅಗಲೀಕರಣ: ಗೊಂದಲ ಬೇಡ – ಪುರಸಭೆ ಸ್ಪಷ್ಟನೆ

On: December 27, 2025 7:30 PM

ಆಳಂದ: ಪಟ್ಟಣದಲ್ಲಿ ಬುಧವಾರ ಸಾಂಕೇತಿಕವಾಗಿ ರಸ್ತೆ ಅಗಲೀಕರಣ ಆರಂಭಿಸಿ ಜ. 5ರವರೆಗೆ ಸ್ವಯಂ ತೆರವುಗೊಳಿಸಿಕೊಳ್ಳಲು ಆಡಳಿತ ನೀಡಿದ ಅವಕಾಶದ ಮಧ್ಯೆಯೂ ಅಂಗಡಿ ಮುಗ್ಗಂಟುಗಳು ಸ್ವಯಂಪ್ರೇರಿತವಾಗಿ ತೆರವುಗೊಳಿಸುವ ಕಾರ್ಯ ಶನಿವಾರ ನಾಲ್ಕನೇ ದಿನವೂ ಮುಂದುವರೆದಿದೆ.

ಈ ನಡುವೆ ಪುರಸಭೆ ಆಡಳಿತ ಮೂಲಗಳು ಜನರ ಗೊಂದಲ ನಿವಾರಣೆಗೆ ಸ್ಪಷ್ಟನೆ ನೀಡಿವೆ.

ಪಟ್ಟಣದ ಮುಖ್ಯ ರಸ್ತೆಯ ಅಗಲೀಕರಣದ ವಿಷಯದಲ್ಲಿ ಯಾವುದೇ ಗೊಂದಲವಿಲ್ಲದೆ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದೆ ಎಂದು ಆಳಂದ ಪುರಸಭೆ ಆಡಳಿತ ಮೂಲಗಳು ಸ್ಪಷ್ಟನೆ ನೀಡಿವೆ.

ಮುಖ್ಯ ರಸ್ತೆ ಅಗಲೀಕರಣ ವ್ಯಾಪ್ತಿಯಲ್ಲಿ ಒಟ್ಟು 579 ಆಸ್ತಿ ಸಂಖ್ಯೆಗಳಿದ್ದು, ಈಗಾಗಲೇ ಮೂರು ಹಂತದ ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿವೆ.

ಈ ಪೈಕಿ 144 ಮಂದಿ ಆಸ್ತಿ ಮಾಲೀಕರು ನೋಟಿಸ್‌ಗೆ ಉತ್ತರ ನೀಡಿ ಕೆಲವು ದಾಖಲೆಗಳನ್ನು ಸಲ್ಲಿಸಿದ್ದಾರೆ. ಸಲ್ಲಿಸಲಾದ ಪ್ರಕರಣಗಳಲ್ಲಿ ಸುಮಾರು 80 ಶೇಕಡಾ ಆಸ್ತಿ ಸಂಖ್ಯೆಗಳ ಕುರಿತು ವಿಚಾರಣೆ (ಹೇರಿಂಗ್) ಪೂರ್ಣಗೊಂಡಿದ್ದು, ವಿಚಾರಣೆಯಲ್ಲಿ ಭಾಗವಹಿಸಿದ ಎಲ್ಲರೂ ರಸ್ತೆ ಅಗಲೀಕರಣಕ್ಕಾಗಿ ತೆರವಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಪುರಸಭೆ ಮೂಲಗಳು ತಿಳಿಸಿವೆ.

ಈಗಾಗಲೇ ಸಾಕಷ್ಟು ಮಂದಿ ಸ್ವಯಂಪ್ರೇರಿತವಾಗಿ ತಮ್ಮ ಆಸ್ತಿಗಳನ್ನು ತೆರವುಗೊಳಿಸುತ್ತಿದ್ದು, ಆಡಳಿತದಿಂದಲೂ ತೆರವಿಗೆ ಅಗತ್ಯ ಯಂತ್ರೋಪಕರಣಗಳು ಸೇರಿದಂತೆ ಬೇಕಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ತೆರವಿಗೆ ಮೊದಲು ಆಸ್ತಿಯ ಅಳತೆ ಹಾಗೂ ಗುರುತಿಸುವಿಕೆ ಕಾರ್ಯವನ್ನು ಪುರಸಭೆ ವತಿಯಿಂದಲೇ ಮಾಡಿಕೊಡಲಾಗುತ್ತಿದೆ ಎಂದು ಹೇಳಲಾಗಿದೆ.

ರಸ್ತೆ ಅಗಲೀಕರಣದ ಬಳಿಕ ಮಾಲೀಕರಿಗೆ ಮುಂದಿನ ಕಟ್ಟಡ ನಿರ್ಮಾಣಕ್ಕೆ ತಕ್ಷಣವೇ ಪುರಸಭೆಯಿಂದ ಅನುಮತಿ ನೀಡಲಾಗುವುದು. ಅಲ್ಲದೆ, ಹಲವಾರು ಆಸ್ತಿಗಳು ಹಿರಿಯರ ಹೆಸರಿನಲ್ಲಿರುವುದರಿಂದ, ಆಸ್ತಿ ವರ್ಗಾವಣೆ ಪ್ರಕ್ರಿಯೆಗೂ ಸಹ ತ್ವರಿತವಾಗಿ ಅನುಕೂಲ ಮಾಡಿಕೊಡಲಾಗುವುದು ಎಂದು ಪುರಸಭೆ ಆಡಳಿತ ಭರವಸೆ ನೀಡಿದೆ.

ಕಡುಬಡ ಕುಟುಂಬಗಳಿಗೆ ಅಗತ್ಯ ನೆರವು ನೀಡುವ ಉದ್ದೇಶವೂ ಆಡಳಿತಕ್ಕಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಒಟ್ಟಾರೆ, ಮುಖ್ಯ ರಸ್ತೆ ಅಗಲೀಕರಣ ಕಾರ್ಯ ಜನಸಹಕಾರದೊಂದಿಗೆ ಹಂತ ಹಂತವಾಗಿ ಮುಂದುವರಿಯುತ್ತಿದ್ದು, ರಸ್ತೆ ಮಧ್ಯಭಾಗದಿಂದ ಎರಡು ಬದಿಗಳಲ್ಲಿ ತಲಾ 20 ಅಡಿ ಅಗಲೀಕರಣ ಕಾರ್ಯ ಯಾವುದೇ ಬಲವಂತದ ಕ್ರಮವಿಲ್ಲದೆ ಕಾನೂನುಬದ್ಧವಾಗಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಪುರಸಭೆ ರಸ್ತೆ ಅಗಲೀಕರಣದ ಆಡಳಿತ ಮೂಲಗಳು ತಿಳಿಸಿವೆ.

ಗೊಂದಲ ಬೇಡ: ಮುಖ್ಯ ಅಗಲೀಕರಣ ರಸ್ತೆ ಮಧ್ಯಭಾಗದಿಂದ ತಲಾ 20 ಅಡಿ ವಿಸ್ತರಣೆ ನಡೆಯಲಿದೆ. ಆದರೆ ನಾಗರಿಕರು ತಮ್ಮ ಕಟ್ಟಡ ಸಜ್ಜಾ ಮೆಟ್ಟಿಲುಗಳನ್ನು ಮಾಡಿಕೊಳ್ಳಲು 5 ಅಡಿ ಇಟ್ಟುಕೊಳ್ಳಬಹುದು. ರಸ್ತೆ ಮಧ್ಯಭಾಗದಿಂದ ಎರಡೂ ಬದಿಗಳಿಗೆ ತಲಾ 20 ಅಡಿಯಲ್ಲಿ ಒಟ್ಟು 40 ಅಡಿ ಮಾತ್ರ ಅಗಲೀಕರಣವಿದ್ದು, ಗೊಂದಲ ಬೇಡ. ಎಂದಿನಂತೆ ಸಹಕಾರವಿರಲಿ, ಭವಿಷ್ಯದಲ್ಲಿ ಅನುಕೂಲವಾಗಲಿದೆ ಎಂದು ಮೂಲಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿವೆ.

Join WhatsApp

Join Now

ಶಿಫಾರಸಿತ ಸುದ್ದಿಗಳು

Leave a Comment

error: Content is Protected!