ಕಲ್ಬುರ್ಗಿ: ಕಲ್ಬುರ್ಗಿಯ ಇಎಸ್ಐ ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಜಿಲ್ಲಾ ಸಮಿತಿ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ತಂದೆಯು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದಾಗ, ತಂದೆಯನ್ನು ನೋಡಿಕೊಳ್ಳಲು ಜೊತೆಯಾಗಿ ಬಂದಿದ್ದ ಬಾಲಕಿಯನ್ನು ಪರಿಚಿತನಾದ ಯುವಕನೊಬ್ಬ ಆಸ್ಪತ್ರೆಯ ಸಮೀಪದ ಡೆಂಟಲ್ ಕಾಲೇಜಿನ ವಿಶ್ರಾಂತಿ ಗೃಹಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಈ ಕ್ರೂರ ಕೃತ್ಯವನ್ನು ಸಂಘಟನೆ ಘೋರವಾಗಿ ಖಂಡಿಸಿದೆ.
“ಇಂತಹ ಪ್ರಕರಣಗಳು ಸಾಲುಸಾಲಾಗಿ ನಡೆಯುತ್ತಿರುವುದು ಆತಂಕದ ವಿಷಯ. ಅತ್ಯಾಚಾರಿಗಳಿಗೆ ಯಾವುದೇ ಕಾನೂನು ಅಥವಾ ಶಿಕ್ಷೆಯ ಭಯ ಉಳಿದಿಲ್ಲ. ಈ ಕಾಮುಕರ ಕ್ರೌರ್ಯಕ್ಕೆ ಕಡಿವಾಣ ಬೀಳುವುದು ಯಾವಾಗ?” ಎಂದು ಸಂಘಟನೆಯ ಅಧ್ಯಕ್ಷೆ ಚಂದಮ್ಮ ಗೋಳಾ ಅವರು ಪ್ರಶ್ನಿಸಿದ್ದಾರೆ.
ಸಂಘಟನೆ ಪ್ರಧಾನ ಕಾರ್ಯದರ್ಶಿ ಪದ್ಮಿನಿ ಕಿರಣಗಿ ಅವರು ಮಾತನಾಡುತ್ತಾ, “ಅತ್ಯಾಚಾರಿಯ ಮೇಲೆ ಫೊಕ್ಸೋ ಕಾಯ್ದೆಯಡಿ ಕಠಿಣ ಶಿಕ್ಷೆ ವಿಧಿಸಿ, ಇಂತಹ ದುಷ್ಕೃತ್ಯಗಳು ಪುನರಾವೃತ್ತಿಯಾಗದಂತೆ ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಕೇವಲ ಬಂಧನೆ ಸಾಕಾಗದು, ಆರೋಪಿಗೆ ನ್ಯಾಯೋಚಿತವಾಗಿ ಶಿಕ್ಷೆ ನೀಡಬೇಕು ಹಾಗೂ ಬಾಲಕಿಗೆ ನ್ಯಾಯ ದೊರಕಬೇಕು,” ಎಂದು ಒತ್ತಾಯಿಸಿದರು.