ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಆಳಂದದಲ್ಲಿ ಡಾ. ಅಂಬೇಡ್ಕರ್ 69ನೇ ಮಹಾಪರಿನಿರ್ವಾಣ ದಿನಾಚರಣೆ: ಸಂವಿಧಾನ ಶಿಲ್ಪಿಗೆ ಗೌರವ ಸಮರ್ಪಣೆ.

On: December 6, 2025 3:56 PM

ಆಳಂದ: ಭಾರತದ ಸಂವಿಧಾನದ ಮಹಾನ್ ಶಿಲ್ಪಿ, ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನವನ್ನು ಆಳಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಭಕ್ತಿ ಭಾವದಿಂದ ಆಚರಿಸಲಾಯಿತು.

ತಾಲೂಕು ಆಡಳಿತದಿಂದ ಹಿಡಿದು ಸ್ಥಳೀಯ ಸಂಘಟನೆಗಳೆಲ್ಲೆಡೆ ಬಾಬಾಸಾಹೇಬ್ ಅವರ ಭಾವಚಿತ್ರ ಮತ್ತು ಪ್ರತಿಮೆಗಳಿಗೆ ಪೂಜೆ, ಪುಷ್ಪಾರ್ಚನೆ, ಮಾಲಾರ್ಪಣೆ ನೆರವೇರಿಸಿ ಗೌರವ ಸಲ್ಲಿಸಲಾಯಿತು.

ತಾಲೂಕು ಆಡಳಿತ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಅಣ್ಣಾರಾವ್ ಪಾಟೀಲ್ ಅವರು ಡಾ. ಅಂಬೇಡ್ಕರ್ ಹಾಗೂ ಜಗಜ್ಯೋತಿ ಬಸವಣ್ಣನವರ ಪ್ರತಿಮೆಗಳಿಗೆ ಪುಷ್ಪಮಾಲೆ ಸಮರ್ಪಿಸಿ, ಭಾವಚಿತ್ರಕ್ಕೆ ದೀಪ ಬೆಳಗಿಸಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಲಕ್ಷ್ಮೀ ಹೋಲ್ಕರ್, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ್ ಪನಶೆಟ್ಟಿ, ತೋಟಗಾರಿಕೆ ಇಲಾಖೆ ಅಧಿಕಾರಿ ಸುರೇಂದ್ರನಾಥ್ ಹೊನ್ನಪ್ಪಗೋಳ, ಕ್ಷೇತ್ರ ಶಿಕ್ಷಣ ಅಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದು, ಮೌನ ಪ್ರಾರ್ಥನೆ ಸಲ್ಲಿಸಿ ನಮನ ಮಾಡಿದರು.

ಬಿಜೆಪಿಯಿಂದ ನಮನ:
ತಾಲೂಕು ಆಡಳಿತ ಆವರಣದಲ್ಲಿ ನೆಲೆಗೊಂಡಿರುವ ಡಾ. ಅಂಬೇಡ್ಕರ್ ಮತ್ತು ಬಸವಣ್ಣನವರ ಪ್ರತಿಮೆಗಳಿಗೆ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರು ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮುಖಂಡ ಸಂತೋಷ ಹಾದಿಮನಿ, ಮಲ್ಲಣ್ಣಾ ನಾಗೂರೆ, ಬಿಜೆಪಿ ಪಂಚಾಯತ್ ರಾಜ್ಯ ಪ್ರಕೋಷ್ಟದ ಹಣಮಂತ ಜವಳಿ, ಶಿವುಪುತ್ರ ನಡಗೇರಿ, ಆನಂದ ಗಾಯಕವಾಡ, ಪ್ರಕಾಶ ಮಾನೆ, ಸುನೀಲ ಹಿರೋಳಿಕರ್, ಸೀತಾರಾಮ ಜಮಾದಾರ ಸೇರಿ ಮುಖಂಡರು ಮತ್ತು ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಪುರಸಭೆ ಕಚೇರಿಯಲ್ಲಿ ಮುಖ್ಯಾಧಿಕಾರಿ ಸಂಗಮೇಶ್ ಪನಶೆಟ್ಟಿ ಅವರು ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಬಳಿಕ ಹಳೆ ತಹಸೀಲ್ದಾರ ಕಚೇರಿ ಚೌಕದಲ್ಲಿ ಪೂಜೆ ನೆರವೇರಿಸಿ ಪುಷ್ಪ ನಮನ ಸಲ್ಲಿಸಿದರು.

ಪೌರ ಕಾರ್ಮಿಕರು ಮತ್ತು ನೌಕರರ ಸಂಘದ ಅಧ್ಯಕ್ಷ ಸಿದ್ದರಾಮ ಬಟಗೇರಿ, ಎಸ್‌ಐ ಲಕ್ಷ್ಮಣ ತಳವಾರ್ ನೇತೃತ್ವದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮನ ಮಾಡಿದರು.

ಪಟ್ಟಣದ ಬಸ್ ನಿಲ್ದಾಣದ ಬಳಿ ಕರ್ನಾಟಕ ದಲಿತ ಸೇನೆಯ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿ, ದೀಪ ಬೆಳಗಿಸಲಾಯಿತು. ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಂದೇಶವನ್ನು ಪುನಶ್ಚೇತನಗೊಳಿಸುವ ಈ ಕಾರ್ಯಕ್ರಮದಲ್ಲಿ ದಲಿತ ಸಮುದಾಯದ ಸಾವಿರಾರು ಮಂದಿ ಭಾಗವಹಿಸಿದ್ದರು.

ಆಳಂದ ತಾಲೂಕಿನಲ್ಲಿ ಸರಕಾರಿ, ಅರೆ ಸರಕಾರಿ ಮತ್ತು ಸ್ವಯಂಸೇವಾ ಸಂಘಟನೆಗಳ ಸಹಭಾಗಿತ್ವದಲ್ಲಿ ಡಾ. ಅಂಬೇಡ್ಕರ್ ಅವರ ಸ್ಮರಣಾರ್ಥ ಕಾರ್ಯಕ್ರಮಗಳು ಶಾಂತಿಯುತವಾಗಿ ಮತ್ತು ಭಾವುಕ ವಾತಾವರಣದಲ್ಲಿ ನಡೆದು ಮುಗಿದವು.

ಸಂವಿಧಾನದ ರಕ್ಷಕನ ಸಂದೇಶವನ್ನು ಎಲ್ಲರೂ ಮನದಟ್ಟು ಮಾಡಿಕೊಳ್ಳಬೇಕು ಎಂಬುದು ಈ ದಿನದ ಮುಖ್ಯ ಸಂದೇಶವಾಗಿ ಸಾಗಿತು.

Join WhatsApp

Join Now

ಶಿಫಾರಸಿತ ಸುದ್ದಿಗಳು

Leave a Comment

error: Content is Protected!