ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಆಳಂದ ಸೇರಿ ನಾಲ್ಕು ಜಿಲ್ಲೆಗಳಲ್ಲಿ ಲೋಕಾಯುಕ್ತರ ಮಿಂಚಿನ ದಾಳಿ.

On: January 3, 2026 7:43 PM

ಆಳಂದ: ಭ್ರಷ್ಟಾಚಾರ, ಲೋಪದೋಷಗಳು ಹಾಗೂ ಸಾರ್ವಜನಿಕ ಸೇವೆಗಳಲ್ಲಿನ ವಿಳಂಬದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಲೋಕಾಯುಕ್ತರ ತಂಡವು ಶನಿವಾರ ಆಳಂದ ಸೇರಿದಂತೆ ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಬೀದರ್ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಮಿಂಚಿನ ಕಾರ್ಯಾಚರಣೆ ನಡೆಸಿ, ಆಡಳಿತ ವ್ಯವಸ್ಥೆಗೆ ಬಿಸಿಮುಟ್ಟಿಸುವಂತ ಎಚ್ಚರಿಕೆ ನೀಡಿದೆ.

ಲೋಕಾಯುಕ್ತ ನ್ಯಾಯಾಧೀಶ ವಿಜಯನಂದ ಅವರ ನೇತೃತ್ವದಲ್ಲಿ, ರಾಜ್ಯ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ನ್ಯಾಯಾಧೀಶ ಶ್ರೀನಾಥ, ಲೋಕಾಯುಕ್ತ ಎಸ್ಪಿ ಸಿದ್ಧರಾಜ, ಡಿವೈಎಸ್‌ಪಿಗಳಾದ ಬಸವರಾಜ, ಪೊಟೆಬಾರೆಡ್ಡಿ, ವಸಂತ, ವಿಜಯ ಬಿರಾದಾರ, ಬಿ.ಎಸ್. ಪಾಟೀಲ, ಇನ್ಸ್‌ಪೆಕ್ಟರ್ ಸಲಂ ಸೇರಿದಂತೆ ಅಧಿಕಾರಿಗಳ 8 ತಂಡಗಳು ಪಟ್ಟಣದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದರೆ, ಸ್ಥಳೀಯವಾಗಿ ತಹಸೀಲ್ದಾರ ಅಣ್ಣಾರಾವ್ ಪಾಟೀಲ ತಂಡದೊಂದಿಗೆ ಇದ್ದರು. ನಾಲ್ಕು ಜಿಲ್ಲೆಗಳಲ್ಲೂ ಸುಮಾರು 150ಕ್ಕೂ ಅಧಿಕ ಅಧಿಕಾರಿಗಳನ್ನೊಳಗೊಂಡ ಹಲವು ತಂಡಗಳು ವಿವಿಧ ಸರ್ಕಾರಿ ಕಚೇರಿಗಳಿಗೆ ಹಠಾತ್ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದವು.

ಆಳಂದ ಚೆಕ್‍ಪೋಸ್ಟ್‌ನಲ್ಲಿ ಖುಲಂಖುಲ್ಲಾ ಲಂಚಾವತಾರ : ಆಳಂದದ ಆರ್‌ಟಿಒ ಚೆಕ್‍ಪೋಸ್ಟ್‌ಗೆ ಹಠಾತ್ ಭೇಟಿ ನೀಡಿದ ಲೋಕಾಯುಕ್ತರ ತಂಡ, ವಾಹನಗಳಿಂದ ಅಕ್ರಮವಾಗಿ ಹಣ ವಸೂಲಿಸುತ್ತಿದ್ದ ಪ್ರಕರಣವನ್ನು ಸ್ವತಃ ಕಣ್ಣಾರೆ ಕಂಡು ಬೆಚ್ಚಿಬಿದ್ದಿತು. ಆರ್‌ಟಿಒ ಅಧಿಕಾರಿ ಇಕ್ರಂ ಪಾಶಾ ಲಂಚಾವತಾರದಲ್ಲಿ ತೊಡಗಿದ್ದರೆಂಬ ಆರೋಪದಡಿ ಈಗಾಗಲೇ ತನಿಖೆ ನಡೆಯುತ್ತಿರುವ ನಡುವೆಯೇ, ಮತ್ತೆ ಲಂಚ ವಸೂಲಾತಿ ಮುಂದುವರಿದಿರುವುದು ಬೆಳಕಿಗೆ ಬಂದಿದೆ.

ಲಾರಿ ಚಾಲಕರು ಲೋಕಾಯುಕ್ತ ಅಧಿಕಾರಿಗಳ ಎದುರಲ್ಲೇ ಹಣ ನೀಡಲು ಮುಂದಾದ ಘಟನೆ ತಂಡವನ್ನು ಬೆರಗುಗೊಳಿಸಿತು. ಸುಮಾರು 8 ವಾಹನಗಳಿಂದ ಹಣ ವಸೂಲಿಸಲು ಯತ್ನ ನಡೆದಿದ್ದು, ಚಾಲಕರನ್ನು ವಾಪಸ್ ಕಳುಹಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗೆ ಸ್ಪಷ್ಟನೆ ಕೇಳಿದ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಂಬಂಧಪಟ್ಟ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಸಾರ್ವಜನಿಕ ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ: ಕಂದಾಯ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿದ ಲೋಕಾಯುಕ್ತರ ತಂಡ, ಖಾತಾ ಪೆಂಡಿಂಗ್, ಆಧಾರ್ ಕಾರ್ಡ್ ಸಂಬಂಧಿತ ಸಮಸ್ಯೆಗಳು ಸೇರಿದಂತೆ ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಿಸಿ ಜನರಿಗೆ ನ್ಯಾಯ ಒದಗಿಸಿತು. ಇದರಿಂದ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.

ಅಧಿಕಾರಿ ಗೈರು – ನ್ಯಾಯಾಧೀಶರ ಆಕ್ರೋಶ: ಬಿಸಿಎಂ ಇಲಾಖೆ ಪರಿಶೀಲನೆ ವೇಳೆ ಸಂಬಂಧಪಟ್ಟ ಅಧಿಕಾರಿ ಗೈರಾಗಿದ್ದ ಹಿನ್ನೆಲೆಯಲ್ಲಿ, ಎಸ್‌ಡಿಸಿ ಸುನಿತಾ ರೆಡ್ಡಿ ಅವರು ಇಲಾಖೆಯ ಮಾಹಿತಿ ಒದಗಿಸಿದರು. ಶಿಕ್ಷಣ ಇಲಾಖೆಗೆ ಭೇಟಿ ನೀಡಿದಾಗ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ ದಾಖಲೆಗಳನ್ನು ಸಲ್ಲಿಸಿದರು. ಭೂ ನೋಂದಣಿ, ಆಹಾರ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಕಡತಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಗಂಭೀರ ಲೋಪ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭಾಗ್ಯಲಕ್ಷ್ಮೀ ಬಾಂಡ್‌ಗಳಿಗೆ ಸಂಬಂಧಿಸಿದ ನೂರಾರು ಅರ್ಜಿಗಳನ್ನು ವಿಲೇವಾರಿ ಮಾಡದೆ ಬಾಕಿ ಇಟ್ಟುಕೊಂಡಿರುವುದಕ್ಕೆ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗೈರಾಗಿದ್ದ ಸಿಡಿಪಿಒಗೆ ದೂರವಾಣಿ ಮೂಲಕ ಕಾರಣ ಸೂಚಿಸಲು ಸೂಚನೆ ನೀಡಿ, ದಾಖಲೆಗಳನ್ನು ಜಪ್ತಿ ಮಾಡುವ ಎಚ್ಚರಿಕೆ ನೀಡಿದರು.

ಅಲ್ಲದೆ, ಅಂಗನವಾಡಿಗಳಿಗೆ ತಿಂಗಳಿಗೆ ಪೂರೈಕೆಯಾಗುವ ಮೊಟ್ಟೆ ಹಾಗೂ ಹಾಲಿನ ಪೌಡರ್‌ಗೆ ಸುಮಾರು 52 ಲಕ್ಷ ರೂಪಾಯಿ ವೆಚ್ಚವಾಗುತ್ತಿರುವುದರ ವಿತರಣಾ ವಿವರಗಳ ಕುರಿತು ಸಿಬ್ಬಂದಿಯನ್ನು ಪ್ರಶ್ನಿಸಿ ಕಠಿಣ ತರಾಟೆಗೆ ತೆಗೆದುಕೊಂಡರು.

ಎಂಟು ತಂಡಗಳಿಂದ ವ್ಯಾಪಕ ಪರಿಶೀಲನೆ: ಸಾರ್ವಜನಿಕ ಆಸ್ಪತ್ರೆ, ಅಬಕಾರಿ ಇಲಾಖೆ, ತಾಲೂಕು ಪಂಚಾಯತ್, ಲೋಕೋಪಯೋಗಿ ಇಲಾಖೆ, ಪುರಸಭೆ, ಅಗ್ನಿಶಾಮಕ ಠಾಣೆ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳಿಗೆ 8 ತಂಡಗಳ ಮೂಲಕ ದಾಳಿ ನಡೆಸಿ, ಯೋಜನೆಗಳ ಅನುಷ್ಠಾನ, ಹಣಕಾಸು ವ್ಯವಹಾರ, ಅರ್ಜಿಗಳ ವಿಲೇವಾರಿ ಹಾಗೂ ದಾಖಲೆಗಳ ನಿಖರತೆಯನ್ನು ಪರಿಶೀಲಿಸಲಾಯಿತು.

ಭ್ರಷ್ಟಾಚಾರ ಕಂಡಲ್ಲಿ ಕಠಿಣ ಕ್ರಮ: ಲೋಕಾಯುಕ್ತ ಅಧಿಕಾರಿಗಳು, ಲೋಪದೋಷಗಳು ಕಂಡುಬಂದಲ್ಲಿ ಇಲಾಖೆ ಮಟ್ಟದ ವಿಚಾರಣೆ ನಡೆಸಲಾಗುವುದು. ಭ್ರಷ್ಟಾಚಾರ ಪತ್ತೆಯಾದಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮಕ್ಕೆ ವರದಿ ಸಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಒಟ್ಟಾರೆ, ಲೋಕಾಯುಕ್ತರ ಈ ಮಿಂಚಿನ ಕಾರ್ಯಾಚರಣೆ ಆಡಳಿತ ವ್ಯವಸ್ಥೆಗೆ ಕಠಿಣ ಎಚ್ಚರಿಕೆಯಾಗಿ ಪರಿಣಮಿಸಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Join WhatsApp

Join Now

ಶಿಫಾರಸಿತ ಸುದ್ದಿಗಳು

Leave a Comment

error: Content is Protected!