ಆಳಂದ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‍ಟಿಸಿ)ಯ ಆಳಂದ ಘಟಕದಲ್ಲಿ ಎಕ್ಸ್‍ಪ್ರೆಸ್ ಬಸ್‍ಗಳು ಹೆಸರಿಗೆ ಮಾತ್ರ ಎಕ್ಸ್‍ಪ್ರೆಸ್ ಆಗಿದ್ದು, ಪ್ರಯಾಣಿಕರಿಗೆ ಹೆಚ್ಚಿನ ದರದ ಜೊತೆಗೆ ಸಮಯ ವ್ಯರ್ಥವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಘಟಕ ವ್ಯವಸ್ಥಾಪಕರು ಎಲ್ಲಾ ಬಸ್‍ಗಳು ಎಲ್ಲಾ ನಿಲುಗಡೆಗಳಲ್ಲಿ ನಿಲ್ಲುವಂತೆ ಸೂಚಿಸಿದ್ದರಿಂದ, ಎಕ್ಸ್‍ಪ್ರೆಸ್ ಬಸ್‍ಗಳು ಸಾಮಾನ್ಯ ಬಸ್‍ಗಳಂತೆ ಕಾರ್ಯನಿರ್ವಹಿಸುತ್ತಿರುವುದು ಬಸ್ ಚಾಲಕ, ನಿರ್ವಹಕರ ನಡುವೆ ಪ್ರಯಾಣಿಕರ ಕಿರಿಕಿರಿ ಅಸಮಾಧಾನಕ್ಕೆ ಕಾರಣವಾಗಿದೆ.
ಆಳಂದದಿಂದ ಕಲಬುರಗಿಗೆ ಪ್ರಯಾಣಿಸುವ ಸಾರಿಗೆ ಬಸ್‍ಗಳಲ್ಲಿ ಸಾಮಾನ್ಯ ಬಸ್‍ಗಳ ದರ (ಎಲ್ಲಾಕಡೆ ನಿಲ್ಲುಗಡೆ) ಕೇವಲ 49 ರೂಪಾಯಿಗಳಾಗಿದ್ದರೆ, ಎಕ್ಸ್‍ಪ್ರೆಸ್ ಬಸ್‍ಗಳು 65 ರೂಪಾಯಿಗಳಾಗಿದ್ದು, ಆದರೆ ಎಕ್ರಪ್ರೇಸ್ ಬಸ್‍ಗಳು ಎಲ್ಲಾ ಕಡೆ ನಿಲ್ಲುವುದಾದರೆ ದರದಲ್ಲಿ ಟಿಕೆಟ್ ದರದಲ್ಲಿ ಕಡಿಮೆಯಾದರು ಮಾಡಬೇಕು. ಏಕೆ 16 ರೂ.ಗಳು ಹೆಚ್ಚಿಗೆ ವಸೂಲಿ ಮಾಡುತ್ತಿವೆ ಎಂಬ ಪ್ರಯಾಣಿಕರ ಪ್ರಶ್ನೆಗೆ ಅಧಿಕಾರಿಗಳೆ ಉತ್ತರಿಸಬೇಕಾಗಿದೆ.
ಸದ್ಯ ಘಟಕದಾಧಿಕಾರಿಗಳ ಸೂಚನೆಯಂತೆ ಎಕ್ಸ್‍ಪ್ರೆಸ್ ಬಸ್‍ಗಳು ಕೊಡಲಹಂಗರಗಾ, ಕೇಂದ್ರೀಯ ವಿಶ್ವವಿದ್ಯಾಲಯ, ಸುಂಟನೂರ್ ಕ್ರಾಸ್, ಪಟ್ಟಣ ಕ್ರಾಸ್ ಮುಂತಾದ ಎಲ್ಲಾ ನಿಲುಗಡೆಗಳಲ್ಲಿ ಪ್ರಯಾಣಿಕರ ಬೇಡಿಕೆಯಂತೆ ನಿಲ್ಲುವಂತೆ ಸೂಚನೆ ನೀಡಿದ್ದರಿಂದ, ಪ್ರಯಾಣ ಸಮಯ ಹೆಚ್ಚಾಗಿ ವಿಳಂಬವಾಗುತ್ತಿದೆ. ಇದರಿಂದ ಪ್ರಯಾಣಿಕರು ಸಕಾಲಕ್ಕೆ ತಲುಪಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕುವುದು ಸಾಮಾನ್ಯವಾಗಿದೆ.
ಘಟಕದಿಂದ ಹೊರಡಿಸಲಾದ ಸೂಚನೆಯಲ್ಲಿ, ಚಾಲಕರು ಮತ್ತು ನಿರ್ವಾಹಕರಿಗೆ ಕಡ್ಡಾಯವಾಗಿ ಈ ನಿಲುಗಡೆಗಳಲ್ಲಿ ಬಸ್ ನಿಲ್ಲಿಸುವಂತೆ ತಿಳಿಸಲಾಗಿದೆ. ನಿಲ್ಲದಿದ್ದರೆ ಪ್ರಯಾಣಿಕರ ದೂರುಗಳ ಆಧಾರದಲ್ಲಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಘಟಕಾಧಿಕಾರಿಗಳು ಎಚ್ಚರಿಕೆ ನೀಡಲಾಗಿದೆ. ಈ ಸೂಚನೆಯು 10/11, 59/60, 06, 97/98, 51/52, 66/67, 919, 124, 49ತಿತಿ, 100, 38/39, 81/82, 75/76, 33/34, 29/30, 3789, 129/130, 14/15/14, 87/88, 61/62, 89/90, 10189ತಿ, 7129ತಿ ಮುಂತಾದ ಅನುಸೂಚಿಗಳಿಗೆ ಅನ್ವಯಿಸುತ್ತದೆ ಎಂದು ಚಾಲಕ, ನಿರ್ವಾಹಕರಿಗೆ ನೋಟಿಸ್‍ನಿಂದ ಎಚ್ಚರಿಸಿದ್ದಾರೆ.
ಪ್ರಯಾಣಿಕರ ಪ್ರಕಾರ, ಎಕ್ಸ್‍ಪ್ರೆಸ್ ಬಸ್‍ಗಳು ವೇಗವಾಗಿ ಮತ್ತು ಕಡಿಮೆ ನಿಲುಗಡೆಗಳೊಂದಿಗೆ ಪ್ರಯಾಣಿಸಬೇಕು ಎಂಬ ನಿರೀಕ್ಷೆಯಿದೆ. ಆದರೆ ಪ್ರಸ್ತುತ ಸ್ಥಿತಿಯಲ್ಲಿ ಅವು ಸಾಮಾನ್ಯ ಬಸ್‍ಗಳಂತೆಯೇ ಕಾರ್ಯ ನಿರ್ವಹಿಸುತ್ತಿರುವುದರಿಂದ, ಹೆಚ್ಚಿನ ದರ ಪಾವತಿಸಿದರೂ ಸೇವೆಯಲ್ಲಿ ವ್ಯತ್ಯಾಸವಿಲ್ಲದಂತಾಗಿದೆ. “ಎಕ್ಸ್‍ಪ್ರೆಸ್ ಟಿಕೆಟ್ ಪಡೆದರೂ ಸಾಮಾನ್ಯ ಪ್ರಯಾಣದಂತೆಯೇ ಆಗುತ್ತಿದೆ. ಹೆಚ್ಚುವರಿ ಹಣ ಮತ್ತು ಸಮಯ ನಷ್ಟದಿಂದ ನಾವು ಬೇಸತ್ತಿದ್ದೇವೆ” ಎಂದು ಕೆಲವು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಕೆಆರ್‍ಟಿಸಿ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಿ, ಪ್ರಯಾಣಿಕರ ಬೇಡಿಕೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಆದರೆ, ದರದ ವ್ಯತ್ಯಾಸವನ್ನು ಪರಿಗಣಿಸಿ ಸೇವೆಯಲ್ಲಿ ಸೂಕ್ತ ಬದಲಾವಣೆ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸದಿದ್ದರೆ ಪ್ರಯಾಣಿಕರಿಂದ ಹೆಚ್ಚಿನ ದೂರುಗಳು ಬರಬಹುದು ಎಂಬ ಆತಂಕವಿದೆ.
ಈ ವಿಷಯದ ಬಗ್ಗೆ ಸಂಸ್ಥೆಯ ಮೇಲಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.









