ಕಲಬುರಗಿ: ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದ ಮುಂದೆ ನಡೆಸಿದ ಪ್ರತಿಭಟನೆಯ ವೇಳೆ ಅಧಿಕಾರಿಯೊಬ್ಬರ ಮೇಲೆ ಮಸಿ ಬಳಿದ ಘಟನೆ ನಡೆದಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಆರಂಭಿಸಿದರು. ಈ ವೇಳೆ ಪ್ರಾಧಿಕಾರದ ಅಧಿಕಾರಿ ಗಂಗಾಧರ ಶಿವನಂದ ಮಳಗಿ (57) ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳು ಸ್ಥಳಕ್ಕೆ ತೆರಳಿ ಪ್ರತಿಭಟನಾಕಾರರೊಂದಿಗೆ ಚರ್ಚೆಗೆ ಮುಂದಾದರು. ಆದರೆ, ಎಂ.ಎಸ್.ಕೆ. ಮಿಲ್ ಕಣ್ಣಿ ಮಾರುಕಟ್ಟೆಯ ಫಲಕಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೇಳಿದ ಪ್ರತಿಭಟನಾಕಾರರು, ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಉತ್ತರ ನೀಡುವಂತೆ ಒತ್ತಾಯಿಸಿದರು.

ಪಿಡಬ್ಲ್ಯೂಡಿ ಕಲಬುರಗಿಯ ಸುಪರಿಂಟೆಂಡೆಂಟ್ ಇಂಜಿನಿಯರ್ ಸ್ಥಳಕ್ಕೆ ಬಂದು ವಿವರಣೆ ನೀಡುತ್ತಿದ್ದಾಗ, ಪ್ರತಿಭಟನಾಕಾರರಲ್ಲಿ ಒಬ್ಬರಾದ ವಿಲಾಸ ಬಾಳಿರಾಮ ರಾಠೋಡ ಅಧಿಕಾರಿಗಳ ಮೇಲೆ ಮಸಿ ಬಳಿದರು. ಈ ಕೃತ್ಯದಿಂದ ಪ್ರಾಧಿಕಾರದ ಕಾರ್ಯನಿರ್ವಹಣೆಗೆ ಅಡಚಣೆ ಉಂಟಾಗಿದ್ದು, ಅಧಿಕಾರಿಗಳಿಗೆ ಮಾನಹಾನಿಯಾಗಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ವಿಲಾಸ ಬಾಳಿರಾಮ ರಾಠೋಡ ಸೇರಿದಂತೆ ಕರ್ನಾಟಕ ರಕ್ಷಣಾ ವೇದಿಕೆಯ ಇತರ ಸದಸ್ಯರ ವಿರುದ್ಧ ಕಲಬುರಗಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ಸಂಖ್ಯೆ 148/2025ರಡಿ ಐಪಿಸಿ ಕಲಂ 189(2), 191(2), 126(2), 132, 221, 190 ಅಡಿಯಲ್ಲಿ ದೂರು ದಾಖಲಾಗಿದೆ.
ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.









