ಆಳಂದ: ತಾಲೂಕಿನ ವಿವಿಧ ಭಾಗಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ರೈತರ ಬಿತ್ತನೆಯ ಹಂಗಾಮೇ ನಷ್ಟದ ದಿಕ್ಕಿನಲ್ಲಿ ಸಾಗುತ್ತಿದೆ. ಕಳೆದ ಎರಡು ದಿನಗಳಿಂದ ನಿರಂತರ ಸುರಿದ ಅತಿವೃಷ್ಟಿಯ ಪರಿಣಾಮವಾಗಿ ನಿಂಬರಗಾ, ಆಳಂದ, ಖಜೂರಿ, ಸಾಲೇಗಾಂವ, ಸಾವಳೇಶ್ವರ, ಸರಸಂಬಾ, ಮಾದನಹಿಪ್ಪರಗಾ, ನರೋಣಾ ಸೇರಿ ಹಲವಾರು ವಲಯಗಳಲ್ಲಿ ಹೊಲಗಳಲ್ಲಿ ನೀರು ನಿಂತು ಬೆಳೆ ಹಾನಿ ಭಾರೀ ಪ್ರಮಾಣದಲ್ಲಿ ವರದಿಯಾಗಿದೆ.

ತಹಸೀಲ್ದಾರ ಅಣ್ಣಾರಾವ್ ಪಾಟೀಲ ಅವರು ಹೇಳಿದ ಪ್ರಕಾರ, ಸಾಲೇಗಾಂವ, ಖಜೂರಿ, ಸರಸಂಬಾ, ಸಾವಳೇಶ್ವರ ಸೇತುವೆಗಳಲ್ಲಿ ನೀರು ಉಕ್ಕಿ ಹರಿದ ಪರಿಣಾಮ ಗ್ರಾಮೀಣ ಸಂಚಾರ ಅಸ್ತವ್ಯಸ್ತವಾಗಿದೆ. “ಬೆಳೆ ಹಾನಿ ಕುರಿತು ಸರ್ವೆ ಮುಂದುವರೆದಿದ್ದು, ಪ್ರಾಥಮಿಕ ಅಂದಾಜಿನಲ್ಲಿ 15.521 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ” ಎಂದರು.
ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಮೂಲಕ ನಡೆಸಲಾಗುತ್ತಿರುವ ಜಂಟಿ ಸರ್ವೆಯ ಪ್ರಾಥಮಿಕ ವರದಿಯ ಪ್ರಕಾರ 15 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ. ಆದರೆ ಗುರುವಾರ ಮತ್ತೆ ಸುರಿದ ಭಾರೀ ಮಳೆಯಿಂದಾಗಿ ಹಾನಿಯ ಅಂಕಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ರೈತರು ಕೂಡಲೇ ಸಂಪೂರ್ಣ ವರದಿಯನ್ನು ಕ್ರೂಡಿಕರಿಸಿ ಸರ್ಕಾರಕ್ಕೆ ಕಳುಹಿಸುವಂತೆ ಒತ್ತಾಯಿಸುತ್ತಿದ್ದಾರೆ.

ಹೆಚ್ಚು ಹಾನಿ ವರದಿಯಾದ ವಲಯಗಳು:ನಿಂಬರಗಾ ವಲಯ: 3560 ಹೆಕ್ಟೇರ್, ಆಳಂದ ವಲಯ: 3400 ಹೆಕ್ಟೇರ್, ಖಜೂರಿ ವಲಯ: 3181 ಹೆಕ್ಟೇರ್, ಮಾದನಹಿಪ್ಪರಗಾ ವಲಯ: 3109 ಹೆಕ್ಟೇರ್, ನರೋಣಾ ವಲಯ: 2271 ಹೆಕ್ಟೇರ್. ಒಟ್ಟಾರೆ ಮುಂಗಾರು ಹಂಗಾಮಿನಲ್ಲಿ 1.41 ಲಕ್ಷ ಹೆಕ್ಟೇರ್ ಬಿತ್ತನೆ ನಡೆದಿದ್ದು, ಅದರಲ್ಲಿ ಪ್ರಮುಖವಾಗಿ ತೊಗರಿ, ಹೆಸರು, ಉದ್ದು ಹಾಗೂ ಸೋಯಾಬಿನ್ ಬೆಳೆಗಳು ಹಾನಿಗೆ ಗುರಿಯಾಗಿವೆ ಎಂದು ಸಹಾಯಕ ಪ್ರಭಾರಿ ಕೃಷಿ ನಿರ್ದೇಶಕ ಬಿರಾದಾರ ಬನಸಿದ್ದಪ್ಪ ತಿಳಿಸಿದ್ದಾರೆ.
ಹೊಲಗಳಲ್ಲಿ ನೀರು ನಿಂತು ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿರುವುದರಿಂದ ರೈತರ ಆತಂಕ ಇನ್ನಷ್ಟು ಹೆಚ್ಚಾಗಿದೆ.

ರೈತರ ಅಳಲು: ರೈತರು ತಮ್ಮ ಅಳಲನ್ನು ಹೊರಹಾಕುತ್ತಾ, “ಸಾಲ ತೆಗೆದುಕೊಂಡು ಬಿತ್ತನೆ ಮಾಡಿದ್ದೇವೆ, ಬೆಳೆ ನಾಶವಾಗಿ ಬಿಟ್ಟರೆ ಬದುಕೇ ದುಸ್ತರ. ತಕ್ಷಣವೇ ಸರ್ಕಾರ ಪರಿಹಾರ ನೀಡದಿದ್ದರೆ ಹೊಲವನ್ನು ಬಿಟ್ಟು ಊರನ್ನೇ ಬಿಟ್ಟು ಹೋಗುವ ಪರಿಸ್ಥಿತಿ ಬರುವುದು” ಎಂದು ಕಣ್ಣೀರಿಡುತ್ತಿದ್ದಾರೆ.
ಅಧಿಕಾರಿಗಳ ಎಚ್ಚರಿಕೆ: ಇನ್ನೂ ಮಳೆ ಮುಂದುವರಿದರೆ ಬೆಳೆ ಹಾನಿಯ ಅಂಕಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಪ್ರಸ್ತುತ ಹಾನಿ ವರದಿ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ಪುರಸಭೆ ಜಾಕ್‍ವೇಲ್‍ಗೆ ನೀರು:ಪಟ್ಟಣಕ್ಕೆ ಮತ್ತು ಕೇಂದ್ರೀಯ ವಿವಿಗೆ ನೀರು ಪೂರೈಕೆ ಪಂಪ್‍ಹೌಸ್‍ಗೆ ನೀರು ನುಗ್ಗಿ ಅಪಾಯದ ಅಂಚಿಗೆ ತಲುಪಿದೆ.









