ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಆಳಂದದಲ್ಲಿ ಹೊಸ ಬಸ್ ನಿಲ್ದಾಣ ಶಂಕುಸ್ಥಾಪನೆ.

On: September 7, 2025 1:18 PM

ಆಳಂದ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ತನ್ನ ಕಾರ್ಯಾಚರಣೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಹೊಸ ವಾಹನಗಳ ಸೇರ್ಪಡೆ, ನೇಮಕಾತಿ ಪ್ರಕ್ರಿಯೆ ಮತ್ತು ಸಿಬ್ಬಂದಿ ಕಲ್ಯಾಣ ಯೋಜನೆಗಳ ಮೂಲಕ ನಿಗಮವು ಗ್ರಾಮೀಣ ಮತ್ತು ನಗರ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ಗುರಿ ಹೊಂದಿದೆ ಎಂದು ರಾಜ್ಯದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಸಾರಿಗೆ ಇಲಾಖೆಯ ಬೆಳವಣಿಗೆಗಳನ್ನು ಘೋಷಿಸುವ ಮೂಲಕ ತಮ್ಮ ನಿಗಮದ ಸಾಧನೆಗಳನ್ನು ಇಂದಿಲ್ಲಿ ಶ್ಲಾಘಿಸಿದ್ದಾರೆ. ಪಟ್ಟಣದಲ್ಲಿನ ಬಸ್ ನಿಲ್ದಾಣ 5 ಕೋಟಿ ವೆಚ್ಚದಲ್ಲಿ ಪುನರ ನಿರ್ಮಾಣ ನೂತನ ಕಟ್ಟಡ ನಿರ್ಮಾಣಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಹೊಸ ವಾಹನಗಳ ಸೇರ್ಪಡೆ:ಕಳೆದ ಕೆಲವು ವರ್ಷಗಳಲ್ಲಿ ಕೆಕೆಆರ್‍ಟಿಸಿ ಯು 1031 ಹೊಸ ವಾಹನಗಳನ್ನು ಸೇರ್ಪಡೆಗೊಳಿಸಿದೆ. 2023-24ನೇ ಸಾಲಿನಲ್ಲಿ 720 ವಾಹನಗಳು, 2024-25ನೇ ಸಾಲಿನಲ್ಲಿ 307 ವಾಹನಗಳು ಮತ್ತು 2025-26ನೇ ಸಾಲಿನ ಆಗಸ್ಟ್ ಅಂತ್ಯಕ್ಕೆ 4 ವಾಹನಗಳು ಸೇರ್ಪಡೆಯಾಗಿವೆ. ಇವುಗಳಲ್ಲಿ 985 ಗ್ರಾಮಾಂತರ ವಾಹನಗಳು, 6 ವೋಲ್ವೋ ವಾಹನಗಳು, 4 ಎಸಿ ಸ್ಲೀಪರ್ ವಾಹನಗಳು ಮತ್ತು 36 ನಾನ್ ಎಸಿ ಸ್ಲೀಪರ್ ವಾಹನಗಳು ಸೇರಿವೆ ಎಂದು ಹೇಳಿದರು. ಇದಲ್ಲದೆ, ನಗರ ಭೂ ಸಾರಿಗೆ ನಿರ್ದೇಶನಾಲಯ ಸಹಯೋಗದೊಂದಿಗೆ 123 ನಗರ ಸಾರಿಗೆ ವಾಹನಗಳನ್ನು ಖರೀದಿಸಲು ಕಾರ್ಯಾದೇಶ ಹೊರಡಿಸಲಾಗಿದ್ದು, ಇವುಗಳು ಅಕ್ಟೋಬರ್ 2025 ಅಂತ್ಯಕ್ಕೆ ನಿಗಮದ ವಾಹನ ಬಲಕ್ಕೆ ಸೇರಿಕೊಳ್ಳಲಿವೆ. ಅಲ್ಲದೇ, 20 ನಾನ್ ಎಸಿ ಸ್ಲೀಪರ್, 20 ಎಸಿ ಸ್ಲೀಪರ್ ಮತ್ತು 16 ಎಸಿ ಸೀಟರ್ ಸೇರಿದಂತೆ ಒಟ್ಟು 56 ಹೊಸ ವಾಹನಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಕ್ರಮಗಳು ನಿಗಮದ ಸಾರಿಗೆ ಸಾಮಥ್ರ್ಯವನ್ನು ಹೆಚ್ಚಿಸಿ, ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಒದಗಿಸಲಿವೆ ಎಂದು ಸಚಿವರು ಹೇಳಿದರು.

ನೇಮಕಾತಿ ಪ್ರಕ್ರಿಯೆ:ನಿಗಮದಲ್ಲಿ ಸಿಬ್ಬಂದಿ ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳು ಕೈಗೊಳ್ಳಲಾಗಿದೆ. 2023-24ನೇ ಸಾಲಿನಲ್ಲಿ ನೇರ ನೇಮಕಾತಿ ಮೂಲಕ 1583 ಚಾಲಕ ಮತ್ತು ಚಾಲಕ-ಕಮ್-ನಿರ್ವಾಹಕ ಹುದ್ದೆಗಳು ಹಾಗೂ ಅನುಕಂಪದ ಆಧಾರದಲ್ಲಿ 123 ಹುದ್ದೆಗಳು ಸೇರಿದಂತೆ ಒಟ್ಟು 1706 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. 2024-25ನೇ ಸಾಲಿನಲ್ಲಿ 26 ಹಿಂಬಾಕಿ ಹುದ್ದೆಗಳು ಮತ್ತು ಅನುಕಂಪದ 110 ಹುದ್ದೆಗಳು ಸೇರಿ 136 ಹುದ್ದೆಗಳು ಭರ್ತಿಯಾಗಿವೆ. 2025-26ನೇ ಸಾಲಿನ ಜುಲೈ ಅಂತ್ಯಕ್ಕೆ ಅನುಕಂಪದ ಆಧಾರದಲ್ಲಿ 31 ಹುದ್ದೆಗಳು ಭರ್ತಿಯಾಗಿವೆ ಎಂದು ಅವರು ಹೇಳಿದರು.

ಸಿಬ್ಬಂದಿ ಕಲ್ಯಾಣ – ವಿಮಾ ಯೋಜನೆ:ನಿಗಮದ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಆಂತರಿಕ ಗುಂಪು ವಿಮಾ ಯೋಜನೆಯಡಿ ಅಕಾಲಿಕ ಮರಣಕ್ಕೆ ಸಂಬಂಧಿಸಿದ ಮೊತ್ತವನ್ನು ರೂ. 3 ಲಕ್ಷದಿಂದ ರೂ. 10 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಪಘಾತ ಮರಣಕ್ಕೆ ರೂ. 1 ಕೋಟಿ ಮತ್ತು ಸ್ವಾಭಾವಿಕ ಮರಣಕ್ಕೆ ರೂ. 5 ಲಕ್ಷ ಒದಗಿಸಲಾಗಿದೆ. ಈಗಾಗಲೇ 14 ಸದಸ್ಯರ ಮೃತಾವಲಂಬಿತರಿಗೆ ರೂ. 7 ಕೋಟಿ ವಿತರಿಸಲಾಗಿದೆ ಎಂದರು.

ಆರೋಗ್ಯ ಮತ್ತು ತರಬೇತಿ:19,428 ನೌಕರರಿಗೆ ನಗದುರಹಿತ ಹೃದಯ ತಪಾಸಣೆ ವ್ಯವಸ್ಥೆ ಮಾಡಲಾಗಿದೆ. ಕಲಬುರಗಿಯಲ್ಲಿ ಭಾರಿ ವಾಹನ ಚಾಲಕರ ತರಬೇತಿ ಕೇಂದ್ರ ಸ್ಥಾಪಿಸಲಾಗಿದ್ದು, ಹೊಸ ಚಾಲಕರಿಗೆ ಮತ್ತು ಮನಶ್ಚೇತನ ತರಬೇತಿಗೆ ಅನುಕೂಲವಾಗಲಿದೆ. ಸೇಡಂ ತಾಲೂಕಿನ ತೇಲ್ಲೂರದಲ್ಲಿ 20 ಎಕರೆಯಲ್ಲಿ ರೂ. 15 ಕೋಟಿ ವೆಚ್ಚದ ಭಾರಿ ವಾಹನ ಚಾಲನಾ ಮತ್ತು ತಾಂತ್ರಿಕ ತರಬೇತಿ ಕೇಂದ್ರ ನಿರ್ಮಾಣ ಪೂರ್ಣಗೊಳ್ಳುವ ಹಂತದಲ್ಲಿದ್ದು, ಶೀಘ್ರ ಉದ್ಘಾಟನೆಯಾಗಲಿದೆ ಎಂದು ಹೇಳಿದರು.

ಸಾರಿಗೆ ನಿಗಮದ ಆಳಂದ ಘಟಕದ ವ್ಯಾಪ್ತಿಯಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣವಾಗಲಿರುವ ನೂತನ ಬಸ್ ನಿಲ್ದಾಣದ ಈ ಭಾಗದ ಜನತೆಗೆ ಅನುಕೂಲವಾಗಲಿದೆ. ಇದು ಸಾರಿಗೆ ಸೌಲಭ್ಯಗಳನ್ನು ಇನ್ನಷ್ಟು ಸುಧಾರಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದರು.

“ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಆಳಂದ ಘಟಕದ ಮೂಲಕ ಗ್ರಾಮೀಣ ಜನರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸುತ್ತಿದೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಸಾಧಿಸಲಾಗಿದೆ. ಈ ನೂತನ ಬಸ್ ನಿಲ್ದಾಣವು ಆಳಂದದ ಜನರಿಗೆ ಆಧುನಿಕ ಮತ್ತು ಸುರಕ್ಷಿತ ಸಾರಿಗೆ ಸೌಕರ್ಯವನ್ನು ಒದಗಿಸಲಿದೆ,” ಎಂದು ಸಚಿವರು ಹೇಳಿದರು.

ಶಾಸಕ ಬಿ.ಆರ್. ಪಾಟೀಲ, ಎಂಎಲ್‍ಸಿ ತಿಪ್ಪಣ್ಣಪ್ಪ ಕಮಕನೂರ ಹಾಗೂ ಸಾರಿಗೆ ನಿಗಮ ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ. ಸುಶೀಲಾ ಇದ್ದರು.

Join WhatsApp

Join Now

Leave a Comment

error: Content is Protected!