ಆಳಂದ: ತಾಲೂಕಿನ ಧಂಗಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಪರೂಪದ ಮತ್ತು ಹೃದಯಸ್ಪರ್ಶಿ ಶಿಕ್ಷಕರ ದಿನಾಚರಣೆ ನಡೆಯಿತು.
ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಬಸವರಾಜ್ ಅಂಗಡಿ ಮತ್ತು ಉಪಾಧ್ಯಕ್ಷೆ ಭಾಗ್ಯಶ್ರೀ ದಳಪತಿ ಸೇರಿದಂತೆ ಸಮಿತಿಯ ಸರ್ವ ಸದಸ್ಯರ ಸಮ್ಮುಖದಲ್ಲಿ ಶಾಲೆಯ ಶಿಕ್ಷಕರನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಸಮಿತಿಯ ಅಧ್ಯಕ್ಷ ಬಸವರಾಜ್ ಅಂಗಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ –”ಶಿಕ್ಷಕರು ನಮ್ಮ ಸಮಾಜದ ಬೆಳಕು. ಅವರ ಕೊಡುಗೆಯನ್ನು ಗೌರವಿಸುವುದು ನಮ್ಮ ಕರ್ತವ್ಯ. ಈ ಸನ್ಮಾನವು ಗ್ರಾಮದ ಶಿಕ್ಷಣ ಪ್ರಗತಿಗೆ ಹೊಸ ಉತ್ಸಾಹ ನೀಡಲಿದೆ” ಎಂದು ಹೇಳಿದರು.
ಉಪಾಧ್ಯಕ್ಷೆ ಭಾಗ್ಯಶ್ರೀ ದಳಪತಿ ಅವರು –”ಶಾಲೆಯ ಸುಧಾರಣೆಗೆ ಶಿಕ್ಷಕರ ಪಾತ್ರ ಅಪಾರ. ಈ ದಿನ ನಮ್ಮ ಗ್ರಾಮದ ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದ್ದು, ಸಮಿತಿಯ ಸದಸ್ಯರೆಲ್ಲರೂ ಇದರಲ್ಲಿ ಭಾಗಿಯಾಗಿರುವುದು ಹೆಮ್ಮೆಯ ವಿಷಯ” ಎಂದು ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕ ಆನಂದ ಕುಂಬಾರ, ಶಿಕ್ಷಕಿಯರಾದ ಸಿದ್ಧಮ್ಮ ಪೂಜಾರಿ, ಶರಣಮ್ಮ ಮುಗಳಿ, ರೇವಣಸಿದ್ಧಪ್ಪ ಸೇರಿದಂತೆ ಇತರ ಶಿಕ್ಷಕರನ್ನು ಶಾಲು, ಪುಷ್ಪಗುಚ್ಛ ಹಾಗೂ ಸ್ಮರಣಿಕೆಗಳೊಂದಿಗೆ ಸನ್ಮಾನಿಸಲಾಯಿತು.
ಎಸ್.ಡಿ.ಎಂ.ಸಿ ಸದಸ್ಯರು ಲಿಂಗಣ್ಣ ಫುಲಾರ, ಭಾಗ್ಯಶ್ರೀ ಎಲ್. ಹೂಗಾರ, ರೂಪ ಆರ್. ಕಲಶೆಟ್ಟಿ, ಶಿವಾಜಿ ಕಸಗಿ, ಬಂದೇನವಾಜ್ ಪಟೇಲ್, ಸಿದ್ಧಮ್ಮ ಡಿ. ಪರಿಟ, ಅಶ್ವೀನಿ ಬಿ. ಕಲ್ಯಾಣಿ, ವೈಶಾಲಿ ಆಳಂದ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಸಣ್ಣ ನೃತ್ಯ ಮತ್ತು ಭಾಷಣಗಳನ್ನು ಪ್ರಸ್ತುತಪಡಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.









