ಆಳಂದ: ಧರ್ಮದ ಹೆಸರಿನಲ್ಲಿ ಇತರರನ್ನು ಕೊಂದವರು ಜಿಹಾದಿಗಳೆಂದರೆ, ಜಾತಿಯ ಕಾರಣಕ್ಕೆ ಮಗಳನ್ನೇ ಕೊಲ್ಲುವವರು ಯಾರು? ಮನುಷ್ಯತ್ವವಿಲ್ಲದ ಮೃಗಗಳನ್ನು ಸೃಷ್ಟಿಸುವ ಧರ್ಮ–ದೇವರರ ಸಂಖ್ಯೆ ಎಷ್ಟು? ಇಂತಹ ಪ್ರಶ್ನೆಗಳೊಂದಿಗೆ ಧ್ವನಿ ಎತ್ತಿರುವ ಅಖಿಲ ಕರ್ನಾಟಕ ದಲಿತ ಸೇನೆ ರಾಜ್ಯಾಧ್ಯಕ್ಷ ದತ್ತಾತ್ರೆಯ ಕುಡಕಿ, ಮರ್ಯಾದೆಗೇಡು ಹತ್ಯೆಗಳು ಸಂಭವಿಸದಂತೆ ಕಠಿಣ ಕಾನೂನು ರೂಪಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪಟ್ಟಣದಲ್ಲಿ ಹೇಳಿಕೆ ನೀಡಿರುವ ಅವರು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಸಮುದಾಯಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಬಲಪಡಿಸುವಂತೆ ಆಗ್ರಹಿಸಿದರು. ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರದಲ್ಲಿ ನಡೆದ ಘಟನೆಯಲ್ಲಿ, ದಲಿತ ಯುವಕ ವಿವೇಕಾನಂದ ಅವರು ಲಿಂಗಾಯತ ಜಾತಿಯ ಹುಡುಗಿ ಮಾನ್ಯಕಾ ಅವರೊಂದಿಗೆ ಜಾತಿಬಾಹ್ಯ ಮದುವೆ ಮಾಡಿಕೊಂಡಿದ್ದ ಕಾರಣಕ್ಕೆ, ಹುಡುಗಿಯ ತಂದೆ ಪ್ರಕಾಶ್ ಅವರು ಗರ್ಭಿಣಿ ಮಗಳನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾರೆ. ಈ ಘಟನೆ ಸಮಾಜದಲ್ಲಿ ಜಾತಿ ಆಧಾರಿತ ಹಿಂಸೆಯ ಭೀತಿಯನ್ನು ಬಹಿರಂಗಪಡಿಸಿದ್ದು, ದಲಿತ ಸೇನೆಯವರು ಇದನ್ನು “ಅಮಾನವೀಯ ಕೃತ್ಯ” ಎಂದು ಖಂಡಿಸಿದ್ದಾರೆ ಎಂದರು.
“ಜಾತಿ ಹೆಸರಿನಲ್ಲಿ ನಡೆಯುವ ಎಲ್ಲ ರೀತಿಯ ಹತ್ಯೆ–ದಾಳಿಗಳನ್ನು ತಡೆಯಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಇಂತಹ ಸಮಾಜಘಾತಕ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಪರಿಶಿಷ್ಟ ಜಾತಿ/ಪಂಗಡ ಕಾಯ್ದೆಯನ್ನು ಇನ್ನಷ್ಟು ಬಲಗೊಳಿಸಿ, ಮೌಲ್ಯಗಳ ಜಾಗೃತಿ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಬೇಕು” ಎಂದು ಸಂಘಟನೆಯ ಗೌರವಾಧ್ಯಕ್ಷ ಆನಂದರಾಯ ಗಾಯಕವಾಡ ಅವರು ಹೇಳಿದರು.
ಸಂಘಟನೆಯ ತಾಲೂಕು ಅಧ್ಯಕ್ಷ ಭೋಜರಾಜ್ ಜುಭ್ರೆ ಅವರು ಬಸವಣ್ಣರ ಸಮಾನತೆಯ ಸಂದೇಶವನ್ನು ಉಲ್ಲೇಖಿಸಿ ಮಾತನಾಡಿ, “ಬಸವಣ್ಣನವರು ಅಂತರ್ಜಾತಿ ಮದುವೆಗಳಿಗೆ ಮುನ್ನುಡಿ ಬರೆದು, ವಧು–ವರಸರ ಮಕ್ಕಳನ್ನು ಮದುವೆಯಾಗಿಸಿದರು. ಆದರೆ ಸಮಾಜಘಾತಕ ವರ್ಗಗಳು ಅವರ ಕಣ್ಣುಗಳನ್ನು ಕಿತ್ತಿ, ಆನೆಕಾಲಿಗೆ ಕಟ್ಟಿ ಎಳೆದು ಅಟ್ಟಹಾಸ ಮೆರೆದವು. ಇಂದು ಚಾತುರ್ವರ್ಣ ವ್ಯವಸ್ಥೆಯ ಕಡೆಗೆ ಲಿಂಗಾಯತ ಸಮುದಾಯವನ್ನು ಎಳೆಯುತ್ತಿರುವ ಈ ಶಕ್ತಿಗಳು ನೋವಿನ ಸಂಗತಿಯಾಗಿವೆ” ಎಂದು ಆಕ್ಷೇಪಿಸಿದರು.
ಜಯಕಾಂತ್ ವಾಘಮೋರೆ, ಬಸವರಾಜ್ ಕಾಂಬಳೆ, ದತ್ತಾ ಕೋಚಿ, ದೇವೇಂದ್ರ ಹಂಗರಗಿ, ಲಕ್ಷ್ಮಣ ಕೊಂಡಲಹಂಗರಗಿ, ದೀಪಕ್ ಬಂಡಾರೆ, ರಾಜಕುಮಾರ್ ಸಿಂಗೆ, ಶರಣು ಜಿಡಗಾ, ಪ್ರವೀಣ್ ಕಾಂಬಳೆ, ಬಾಳಪ್ಪ ತಳೇಕರ್, ಮಹಾಂತೇಶ ಬನ್ನಿಗಿಡ ಮತ್ತು ರವಿ ಮೇಲಿನಕೇರಿ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿ ಘಟನೆಯನ್ನು ಖಂಡಿಸಿದರು.









