ಆಳಂದ: ಪಟ್ಟಣದ ಮುಖ್ಯರಸ್ತೆಯಲ್ಲಿರುವ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಕಳೆದ ಕೆಲವು ದಿನಗಳಿಂದ ಗ್ರಾಹಕರ ಅಪಾರ ದಟ್ಟಣೆಯಿಂದಾಗಿ ವಹಿವಾಟು ಸಂಪೂರ್ಣ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ವಿಶೇಷವಾಗಿ ವಯೋವೃದ್ಧರು ಮತ್ತು ಮಹಿಳಾ ಗ್ರಾಹಕರು ದಿನವಿಡೀ ಸರಣಿಯಲ್ಲಿ ನಿಂತು ಸುಸ್ತಾಗುತ್ತಿರುವ ಸ್ಥಿತಿ ಎದುರಾಗಿದೆ.
ಕಳೆದ ಸಾಲಿನ ಬಾಕಿ ಬೆಳೆಹಣ ಮತ್ತು ಎರಡನೇ ಕಂತಿನ ವಿಮಾ ಮೊತ್ತ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಿಂದ ರೈತರು ಮುಂಜಾನೆ ಬ್ಯಾಂಕ್ ಮುಂಭಾಗ ಸೇರಿಕೊಳ್ಳುತ್ತಿದ್ದಾರೆ. ಈ ವೇಳೆ ಬ್ಯಾಂಕ್‍ನಲ್ಲಿ ಕೇವಲ ಒಂದೇ ಕ್ಯಾಶಿಯರ್ ಕೌಂಟರ್ ಇರುವುದರಿಂದ ದಿನದ ಕೊನೆಯವರೆಗೂ ಹಣ ಪಡೆಯದೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.
ಗ್ರಾಹಕರ ಹೇಳಿಕೆಯ ಪ್ರಕಾರ, ಎಸ್‍ಬಿಐ, ಕೇನರಾ, ಕರ್ನಾಟಕ ಬ್ಯಾಂಕ್‍ಗಳಲ್ಲಿ ಖಾತೆ ಹೊಂದಿರುವ ಹಲವರು ಸಹ ತಮ್ಮ ಡಿಸಿಸಿ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿರುವುದರಿಂದ, ಇತ್ತೀಚಿನ ವಿಮಾ ಮೊತ್ತ ನೇರವಾಗಿ ಡಿಸಿಸಿ ಬ್ಯಾಂಕ್‍ನಲ್ಲೇ ಜಮಾ ಆಗುತ್ತಿದೆ. ಇದೂ ದಟ್ಟಣೆಗೆ ಪ್ರಮುಖ ಕಾರಣವಾಗಿದೆ.

ರೈತರು ತಮ್ಮ ಊರಿಗೆ ಹಿಂತಿರುಗಲು ಬಸ್ ಸಿಗದೇ ಮಧ್ಯಾಹ್ನದ ಬಿಸಿಲಿನಲ್ಲಿ ಗಂಟೆಗಟ್ಟಲೆ ಕಾಯಬೇಕಾಗುತ್ತಿದೆ. ಹಿರಿಯ ನಾಗರಿಕರು ಮತ್ತು ಮಹಿಳೆಯರು ನಿಂತುಕೊಂಡೇ ಕಾದುಕುಳಿತು ದಣಿದ ಸ್ಥಿತಿಯಲ್ಲಿ ವಹಿವಾಟು ಮುಗಿಯುವವರೆಗೆ ಕಾಯುತ್ತಿದ್ದಾರೆ.
ರೈತ ಸಂಘದ ಕಾರ್ಯಾಧ್ಯಕ್ಷ ಸಿದ್ದು ವೇದಶೆಟ್ಟಿ ಅವರು ಹೇಳಿದರು – “ಎಲ್ಲ ರೈತರು ವಿಮೆಯ ಎರಡನೇ ಕಂತಿನ ಹಣ ಪಡೆಯಲು ಒಮ್ಮೆಗೆ ಬಂದಿರುವುದರಿಂದ ದಟ್ಟಣೆ ಹೆಚ್ಚಾಗಿದೆ. ಜಿಲ್ಲಾಧ್ಯಕ್ಷರು ತಕ್ಷಣ ಕ್ರಮ ಕೈಗೊಂಡು ಇಲ್ಲಿ ಕ್ಯಾಶಿಯರ್ ಕೌಂಟರ್‍ಗಳನ್ನು ಕನಿಷ್ಠ ಎರಡುಗೊಳಿಸಬೇಕು, ಆಗ ರೈತರಿಗೆ ಹಾಗೂ ವಯೋವೃದ್ಧ ಗ್ರಾಹಕರಿಗೆ ಅನುಕೂಲವಾಗುತ್ತದೆ” ಎಂದು ಒತ್ತಾಯಿಸಿದರು.
ಡಿಸಿಸಿ ಬ್ಯಾಂಕ್ ಆಳಂದ ಶಾಖೆಯ ವ್ಯವಸ್ಥಾಪಕ ಶರಣಬಸಪ್ಪ ಕನಗುಂಡ ಅವರು ಪತ್ರಕರ್ತರೊಂದಿಗೆ ಮಾತನಾಡಿ, “ಕಳೆದ ಸಾಲಿನ ವಿಮಾ ಹಣವಾಗಿ 16 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಎರಡು ದಿನಗಳಲ್ಲಿ ಸುಮಾರು 2 ಕೋಟಿ ರೂಪಾಯಿ ಗ್ರಾಹಕರ ಖಾತೆಗೆ ಜಮಾ ಮಾಡಲಾಗಿದೆ. ಶಾಖೆಯಲ್ಲಿ ಒಟ್ಟು 38 ಸಾವಿರ ಗ್ರಾಹಕರು ಇದ್ದು, 1.45 ಕೋಟಿ ರೂಪಾಯಿ ಬೆಳೆಸಾಲು ನೀಡಲಾಗಿದೆ. ಸಿಬ್ಬಂದಿ ಕೊರತೆ ನಡುವೆಯೇ ಕೆಲಸ ನಿರ್ವಹಿಸಲಾಗುತ್ತಿದೆ. ಗ್ರಾಹಕರು ಎನ್‍ಇಎಫ್‍ಟಿ ಅಥವಾ ಆರ್‍ಟಿಜಿಎಸ್ ಫಾರಂಗಳನ್ನು ಮುಂಚಿತವಾಗಿ ಸಲ್ಲಿಸಿದರೆ, ಹಣವನ್ನು ಎರಡು ದಿನಗಳೊಳಗೆ ಅವರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ; ಪುನಃ ಬ್ಯಾಂಕ್‍ಗೆ ಬರಬೇಕಾಗಿಲ್ಲ,” ಎಂದು ತಿಳಿಸಿದ್ದಾರೆ.
ಸಿಬ್ಬಂದಿ ಕೊರತೆಯ ನಡುವೆ ಗ್ರಾಹಕರ ಸೇವೆಯಲ್ಲಿ ತೊಡಗಿರುವ ಬ್ಯಾಂಕ್ ಸಿಬ್ಬಂದಿಯು ಸಹ ಒತ್ತಡದಲ್ಲಿದ್ದು, ನಿರ್ವಹಣಾ ಮಂಡಳಿಯು ತಕ್ಷಣ ಕ್ರಮ ಕೈಗೊಂಡರೆ ಮಾತ್ರ ಈ ಸಮಸ್ಯೆ ಶಮನಗೊಳ್ಳಲಿದೆ ಎಂದು ಗ್ರಾಹಕರು ಅಭಿಪ್ರಾಯಪಟ್ಟಿದ್ದಾರೆ.









