ದೀಪದಂತೆ ಬೆಳಗಿದ ದೀವಟಿಗೆ: ಕಲ್ಯಾಣ ನಾಡಿನ ಶೈಕ್ಷಣಿಕ ಕಿರೀಟ.
ಕಲ್ಯಾಣ ನಾಡಿನ ಹೆಬ್ಬಾಗಿಲಾದ ಕಲಬುರ್ಗಿಯ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾಗಿದ್ದ ಡಾ. ಪೂಜ್ಯ ಶರಣಬಸಪ್ಪ ಅಪ್ಪಾಜಿಯವರ ಲಿಂಗೈಕ್ಯದ ಸುದ್ದಿ, ಗುರುವಾರದಂದು ರಾತ್ರಿ 10:30ರ ಸುಮಾರಿಗೆ ನನ್ನ ಪತ್ನಿ ಮೊಬೈಲ್ ಕರೆ ಮಾಡಿ ತಿಳಿಸಿದಾಗ ಅದು ಒಂದು ಭರಿಸಲಾಗದ ನಷ್ಟವೆಂಬ ನೋವು ಹೃದಯವನ್ನು ಕಾಡಿತು.
ಅವರೊಂದಿಗಿನ ಭಕ್ತಿಯ ಸಂಬಂಧ ಅಥವಾ ಚಿರಪರಿತವೂ ನಾನಗಾಗಿರಲಿಲ. ಆದರೂ ನಾನು ಕಂಡಂತೆ ಅವರ ಜೀವನವು ಕೇವಲ ಒಬ್ಬ ಧಾರ್ಮಿಕ ವ್ಯಕ್ತಿಯನದ್ದಾಗಿರಲಿಲ್ಲ; ಅದೊಂದು ಶೈಕ್ಷಣಿಕ ಕ್ರಾಂತಿಯ, ಸಾಮಾಜಿಕ ಸುಧಾರಣೆಯ, ಮತ್ತು ಸಾಂಸ್ಕøತಿಕ ಜಾಗೃತಿಯ ಜೊತೆಗೆ ಸಾಹಿತ್ಯದ ಈ ಭಾಗದ ದೀವಿಗೆಯಾಗಿತ್ತು.
ಕಲ್ಯಾಣ ನಾಡಿನಲ್ಲಿ ಶಿಕ್ಷಣ, ಸಾಹಿತ್ಯ, ಧರ್ಮ, ಮತ್ತು ಸಾಮಾಜಿಕ ಸೇವೆಯ ಮೂಲಕ ಅವರು ನೀಡಿದ ಕೊಡುಗೆಯು ಅವರನ್ನು ಒಂದು ದಂತಕಥೆಯಾಗಿಸಿದೆ. ನಾನು, ಒಬ್ಬ ಪತ್ರಕರ್ತನಾಗಿ ಮತ್ತು ಧಾರ್ಮಿಕ, ಸಾಮಾಜಿಕ ಕಾರ್ಯಕರ್ತನಾಗಿ ಮತ್ತು ತಂದೆಯಾಗಿ, 9ವರ್ಷದ ಹಿಂದೆ ಕೇವಲ ಅವರನ್ನು ಮೂರು ಬಾರಿ ಭೇಟಿಯಾದ ಅನುಭವವು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣಗಳಾಗಿ ಉಳಿದಿವೆ.
ಶಿಕ್ಷಣ ಮತ್ತು ಸಾಮಾಜಿಕ ಕ್ರಾಂತಿಯ ದೀವಟಿಗೆ:
ಡಾ. ಶರಣಬಸಪ್ಪ ಅಪ್ಪಾಜಿಯವರು ಕಲಬುರ್ಗಿಯ ಶರಣಬಸವೇಶ್ವರ ಸಂಸ್ಥಾನವನ್ನು ಶಿಕ್ಷಣ, ಧರ್ಮ, ಮತ್ತು ಸಂಸ್ಕೃತಿಯ ತಾಣವಾಗಿ ಪರಿವರ್ತಿಸಿದವರು. ಬಸವಣ್ಣನವರ ತತ್ವಗಳನ್ನು ಆಧರಿಸಿ, ಸಮಾನತೆ, ಶಿಕ್ಷಣ, ಮತ್ತು ದಾಸೋಹದ ಮೂಲಕ ಸಮಾಜದ ಉದ್ಧಾರಕ್ಕಾಗಿ ಅವರು ಶ್ರಮಿಸಿದರು. ಅವರ ನಾಯಕತ್ವದಲ್ಲಿ ಸಂಸ್ಥಾನದ ಶಿಕ್ಷಣ ಸಂಸ್ಥೆಗಳು ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಿದವು, ಕನ್ನಡ ಸಂಸ್ಕೃತಿಯನ್ನು ಉಳಿಸುವ ಜೊತೆಗೆ ಆಧುನಿಕತೆಯನ್ನು ಅಳವಡಿಸಿಕೊಂಡವು. ಅವರ ಸಾಹಿತ್ಯಿಕ ಮತ್ತು ಧಾರ್ಮಿಕ ಕೊಡುಗೆಗಳು ಕಲಬುರ್ಗಿಯನ್ನು ಒಂದು ಜ್ಞಾನ ಮತ್ತು ಆಧ್ಯಾತ್ಮಿಕ ಕೇಂದ್ರವನ್ನಾಗಿ ರೂಪಿಸಿದವು.
ಮೂರು ಭೇಟಿಗಳ ಮರೆಯಲಾಗದ ನೆನಪುಗಳು:
ನನ್ನ ಮೊದಲ ಭೇಟಿಯು ಒಂಬತ್ತು ವರ್ಷಗಳ ಹಿಂದೆ, ನನ್ನ ಮಕ್ಕಳಾದ ಮಗ ಕಾಯಕ ಮತ್ತು ಮಗಳು ಶಿಲ್ಪಾಳಿಗೆ ಆಳಂದನಿಂದ ಕಲಬುರಗಿಯ ಶರಣಬಸವೇಶ್ವರ (ಎಸ್ಬಿಆರ್) ಶಾಲೆಯಲ್ಲಿ ಪ್ರವೇಶ ಪಡೆಯಲು ಉದ್ದೇಶಿಸಿ ನಡೆದಿತ್ತು.
ಒಬ್ಬ ಗೆಳೆಯನೊಂದಿಗೆ ರಾತ್ರಿ 9:00 ಗಂಟೆಯ ಸುಮಾರಿಗೆ ಸರದಿಯಲ್ಲಿ ಕಾಯುತ್ತಿದ್ದೆ. ಬಳಿಕ ಸರಣಿ ಬಂದಾಗ ಅವರೊಂದಿಗೆ ಒಂದೆರಡು ನಿಮಿಷಗಳ ಚರ್ಚೆಗೆ ಸೀಮಿತವಾಗಿರುತ್ತದೆ ಎಂದು ಭಾವಿಸಿದ್ದ ನನಗೆ, ಅಪ್ಪಾಜಿಯವರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತನಾಡಿದರು. ಶಾಲಾ ಪ್ರವೇಶದ ವಿಷಯವನ್ನು ಬದಿಗಿಟ್ಟು, ಅವರು ನನ್ನ ಪತ್ರಕರ್ತನ ಕೆಲಸ, ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳ ಬಗ್ಗೆ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿ ಮಹತ್ವದ ವಿಷಯಗಳ ಮೆಲುಕು ಹಾಕುತ್ತಿದ್ದಾಗ ಹಾಜರಿದ್ದ ಸಂಸ್ಥೆಯ ಮುಖ್ಯಸ್ಥರೊಬ್ಬರನ್ನು ನನ್ನತ್ತ ನೋಡಿ ಅವರು ಹೇಳುತ್ತಿರುವುದು ಗಮನಿಸಿಕೊಳ್ಳಿ ಎಂದಿದ್ದರು.
ಆ ಸಂದರ್ಬದಲ್ಲೂ ನನಗೇ ಹೊಳೆದ ಆಲೋಚನೆಯಂತೆ ಅವರೊಂದಿಗೆ ಮಾತನಾಡುವಾಗ, ಈಗಾಗಲೇ ಆಳಂದನಲ್ಲಿ ಗದಗಿನ ಜಗದ್ಗುರು ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ಮಾರ್ಗದರ್ಶನದಲ್ಲಿ ಸೇವಾ ಭಾವದಲ್ಲಿ ಉಚಿತವಾಗಿ ನನ್ನ ಉಸ್ತುವಾರಿಯಲ್ಲೇ ಸಿಬಿಎಸ್ಸಿ ಶಾಲೆ ತೆರೆಯುವ ಉದ್ದೇಶದಿಂದ ನಿವೇಶನ ಖರೀದಿಸಿ ಅನುಭವ ಮಂಟಪ ಕಟ್ಟಡ ಹಾಗೂ ಶಾಲಾ ಕಟ್ಟಡಕ್ಕೆ ಚಾಲನೆ ನೀಡಲಾಗಿದೆ. ತಮ್ಮ ಎಸ್ಬಿಆರ್ನಂತ ಶಿಕ್ಷಣ ಸಂಸ್ಥೆಯ ಶಾಖೆಯನ್ನು ಆಳಂದನ ಭಾಗದಲ್ಲಿ ಆರಂಭಿಸಿದರೆ ಐದು ಎಕರೆ ನಿವೇಶನವೂ ದಾನಿಗಳ ಮೂಲಕ ಉಚಿತವಾಗಿ ಒದಗಿಸಲಾಗುವುದು. ಆ ಭಾಗದ ಮಕ್ಕಳಿಗೂ ಅನುಕೂಲವಾಗುತ್ತದೆ ಎಂದು ಡಾ. ಶರಣಬಸಪ್ಪ ಅಪ್ಪ ಅವರ ಮುಂದೆ ಪ್ರಸ್ತಾಪಿಸಿದೆ.
ಆಗ ಅವರು ಇದನ್ನೇ ಇನ್ನಷ್ಟು ಉತ್ತಮವಾಗಿ ನಿರ್ವಹಿಸಿಕೊಳ್ಳಬೇಕಾಗಿದೆ. ಅಲ್ಲಿಗೆ ವಿಸ್ತರಿಸಲು ಆಗದು ಎಂದ ಅವರ ಈ ಮಾತು ಹೆಚ್ಚು ಶಾಖೆಗಳನ್ನು ವಿಸ್ತರಿಸುವ ಬದಲು ಇರುವುದನ್ನೇ ಗುಣಮಟ್ಟದ ಗಟ್ಟಿಯಾಗಿಸುವ ಅವರ ಛಲ ಸಾಮಾಜಿಕ ಕಳಕಳಿಯಾಗಿ ಕಂಡಿತ್ತಾದರು. ಮಾತುಮುಗಿಯುತ್ತಿದ್ದಂತೆ ನಮ್ಮನ್ನು “ಮಕ್ಕಳೊಂದಿಗೆ ಮತ್ತೊಮ್ಮೆ ಬನ್ನಿ,” ಎಂದು ಆದರದಿಂದ ಕರೆದ ಆ ಆಹ್ವಾನವು ವೈಯಕ್ತಿಕವಾಗಿತ್ತು.
2ನೇ ಭೇಟಿಯು ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಸಿದ್ಧತೆಯ ಗದ್ದಲದ ನಡುವೆ ನಡೆಯಿತು. ನೂರಾರು ಪಾಲಕರು ಮತ್ತು ಮಕ್ಕಳ ಜೊತೆ ಸರದಿಯಲ್ಲಿ ಕುಳಿತ್ತಿದ್ದೆ. ಕೆಲವರು ಪ್ರವೇಶದ ಶುಕ್ಲದ ಚೀಟಿಗಳು, ದಾಸೋಹಕ್ಕೆ ಕಾಣಿಕೆಯ ಬಗ್ಗೆ ಮಾತನಾಡುತ್ತಿದ್ದರು. ಆದರೆ ಅಪ್ಪಾಜಿಯವರು ನನ್ನ ಕುಟುಂಬವನ್ನು ನನ್ನ ಪತ್ನಿ, ಇಬ್ಬರು ಮಕ್ಕಳು, ಮತ್ತು ತಂದೆಯವರನ್ನು—ಆತ್ಮೀಯವಾಗಿ ಕಂಡು ಅವರು ತುಂಬಿದ ಉಡುಗೊರೆ ನೀಡಿ, ಆಶೀರ್ವದಿಸಿದರು, ಆದರೆ ಪ್ರವೇಶದ ವಿಷಯವನ್ನು ಈ ಬಾರಿಯೂ ಚಕಾರವಿಲ್ಲದೆ ಬಿಟ್ಟರು. “ಜಾತ್ರೆ ಮುಗಿದ ಮೇಲೆ ಮತ್ತೆ ಬನ್ನಿ,” ಎಂದು ಹೇಳಿದ ಅವರ ಮಾತು ಒಂದು ಭರವಸೆಯಂತಿತ್ತು.
ಮೂರನೇ ಭೇಟಿಯಲ್ಲಿ, ಜಾತ್ರೆಯ ನಂತರ, ಅವರು ನನ್ನ ಹಿಂದಿನ ಭೇಟಿಗಳನ್ನು ಸ್ಪಷ್ಟವಾಗಿ ನೆನಪಿಸಿಕೊಂಡಿದ್ದರು. ನಾನು ನನ್ನ ಮಗ ಕಾಯಕನಿಗೆ ಇಂಗ್ಲೀಷ್ ಮಾಧ್ಯಮದ 3ನೇ ತರಗತಿಗೆ ಮತ್ತು ಮಗಳು ಶಿಲ್ಪಾಗೆ ಕನ್ನಡ ಮಾಧ್ಯಮದ 2ನೇ ತರಗತಿಗೆ ಪ್ರವೇಶ ಕೇಳಿದೆ. ಆಗ ಅಪ್ಪಾಜಿಯವರು, “ಮಗಳಿಗೆ ಏಕೆ ಕನ್ನಡ? ದೊಡ್ಡವಳಾದಾಗ ಇಂಗ್ಲಿಷ್ನಲ್ಲಿ ಮಾತನಾಡುವ ಗೆಳತಿಯರ ನಡುವೆ ಇವಳು ಹಿಂದೆ ಉಳಿಯಬಾರದು,” ಎಂದು ದೂರದೃಷ್ಟಿಯಿಂದ ಪ್ರಶ್ನಿಸಿದರು. ಅವರ ಈ ಸಲಹೆಯು ಶಿಕ್ಷಣ ತಜ್ಞರಾದ ಅವರ ದೃಷ್ಟಿಕೋನವನ್ನು ಬಿಂಬಿಸಿತು.
ಇಬ್ಬರಿಗೂ ಇಂಗ್ಲೀಷ್ ಮಾಧ್ಯಮದಲ್ಲಿ ಪ್ರವೇಶ ನೀಡಿದರು, ಆದರೆ ಶುಲ್ಕದ ವಿಷಯದಲ್ಲಿ ಅವರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು. “ಎಷ್ಟು ಶುಲ್ಕ ಭರಿಸಬಹುದು?” ಎಂದು ಪದೇ ಪದೇ ಕೇಳಿದಾಗ ನನಗೇ ಈ ಬಗ್ಗೆ ಗೊತ್ತಾಗುವುದಿಲ್ಲ ನೀವೆ ಹೇಳಿ, ನಾನು ಕಡಿಮೆ ಮಾಡಿ ಎಂದು ಹೇಳಲಿಲ್ಲ. ಕೊನೆಗೂ ತಕ್ಕಂತೆ ಶುಲ್ಕವನ್ನು ಅವರೇ ನಿಗದಿಪಡಿಸಿದರು. ಇದು ಕೇವಲ ಶುಲ್ಕದ ವಿಷಯವಾಗಿರಲಿಲ್ಲ; ಇದು ಶಿಕ್ಷಣವನ್ನು ಎಲ್ಲರಿಗೂ ಸುಲಭವಾಗಿಸುವ ಅವರ ದೊಡ್ಡ ಗುಣವಾಗಿತ್ತು.
ಜೀವನದಲ್ಲಿ ಪರಿವರ್ತನೆಯ ದೀವಿಗೆ:
ಡಾ. ಶರಣಬಸಪ್ಪ ಅಪ್ಪಾಜಿ ಅವರ ದೂರದೃಷ್ಟಿಯ ಪರಿಣಾಮವು ಕೆಲವೇ ತಿಂಗಳಲ್ಲಿ ಸ್ಪಷ್ಟವಾಯಿತು. ಕನ್ನಡ ಮಾಧ್ಯಮದಿಂದ ಇಂಗ್ಲೀಷ್ ಮಾಧ್ಯಮದ 2ನೇ ತರಗತಿಗೆ ಸೇರಿದ ನನ್ನ ಮಗಳು ಶಿಲ್ಪ, ಎರಡೇ ತಿಂಗಳಲ್ಲಿ ಕನ್ನಡದಲ್ಲಿ ಟಾಪರ್ ಆದಳು ಮಾತ್ರವಲ್ಲ, ಇಂಗ್ಲೀಷ್ ವಿಷಯಗಳಲ್ಲಿಯೂ ಶಿಕ್ಷಕರ ಮೆಚ್ಚುಗೆಗೆ ಪಾತ್ರಳಾದಳು. ಇದು ಕೇವಲ ಒಂದು ಸಾಧನೆಯಾಗಿರಲಿಲ್ಲ; ಇದು ಅಪ್ಪಾಜಿಯವರ ದೃಷ್ಟಿಯ ಜೀವಂತ ಸಾಕ್ಷಿಯಾಗಿತ್ತು. ಅವರು ನನ್ನ ಮಗಳ ಭವಿಷ್ಯವನ್ನು ನಾನು ಕಾಣದಿದ್ದನ್ನು ಕಂಡಿದ್ದರು. ಇಂಗ್ಲೀಷ್ ಮಾಧ್ಯಮದ ಆಯ್ಕೆಯು ಕೇವಲ ಭಾಷಾಯ ಬಗ್ಗೆ ಅಲ್ಲ; ಆತ್ಮವಿಶ್ವಾಸದೊಂದಿಗೆ ಜಗತ್ತನ್ನು ಎದುರಿಸುವ ಶಕ್ತಿಯ ಬಗ್ಗೆ ಆಯಿತ್ತೆಂಬ ಅರಿವಾಯಿತು.
ಅಪ್ಪಾಜಿಯವರೊಂದಿಗಿನ ಪ್ರತಿ ಭೇಟಿಯು ವೈಯಕ್ತಿಕವಾಗಿತ್ತು. ತಮ್ಮ ಅಗಾಧ ಜವಾಬ್ದಾರಿಗಳ ನಡುವೆಯೂ ಅವರು ಒಬ್ಬೊಬ್ಬರೊಂದಿಗೆ ಮಾತನಾಡುವಾಗ ತೋರಿದ ಆತ್ಮೀಯತೆ ಅಪೂರ್ವವಾಗಿತ್ತು. ನನ್ನನ್ನು ಪತ್ರಿಕೆಯ ವೃತ್ತಿಯನ್ನು ಸಂಸ್ಥಾನದಲ್ಲೇ ಮಾಡುವಂತೆ ಕೆಲಸಕ್ಕೆ ಸೇರಿಕೊಳ್ಳಲು ಒತ್ತಾಯಿಸಿದ್ದರಿಂದ ಹಿಡಿದು, ಮಕ್ಕಳ ಶಿಕ್ಷಣದ ಬಗ್ಗೆ ತೋರಿದ ಕಾಳಜಿಯವರೆಗೆ, ಎಲ್ಲವೂ ಅವರ ದಯೆ ಮತ್ತು ದೂರದೃಷ್ಟಿಯನ್ನು ಪ್ರತಿಬಿಂಬಿಸಿತು.
ನಷ್ಟದ ನೋವು, ಶಾಶ್ವತ ಕೊಡುಗೆ:
ಡಾ. ಶರಣಬಸಪ್ಪ ಅಪ್ಪಾಜಿಯವರ ಲಿಂಗೈಕ್ಯವು ಕೇವಲ ನನಗೆ ಮಾತ್ರವಲ್ಲ, ಅವರು ಸ್ಪರ್ಶಿಸಿದ ಲಕ್ಷಾಂತರ ಜೀವನಗಳಿಗೆ ಒಂದು ದೊಡ್ಡ ನಷ್ಟವಾಗಿದೆ. ಅವರು ಒಬ್ಬ ಮಹಾದಾಸೋಹಿಯಾಗಿದ್ದರು—ದೇಹ, ಮನಸ್ಸು, ಮತ್ತು ಆತ್ಮವನ್ನು ಪೋಷಿಸಿದವರು. ಕನ್ನಡ ಸಂಸ್ಕೃತಿಯ ಉಳಿವಿನ ಜೊತೆಗೆ ಆಧುನಿಕ ಶಿಕ್ಷಣವನ್ನು ಸಮನ್ವಯಗೊಳಿಸಿದ ಅವರ ಕೊಡುಗೆಯು ಅವರನ್ನು ಶಾಶ್ವತವಾಗಿ ಜೀವಂತವಾಗಿರಿಸುತ್ತದೆ.
ನನ್ನ ಮೂರು ಭೇಟಿಗಳು ಕೇವಲ ಶಾಲಾ ಪ್ರವೇಶದ ಬಗ್ಗೆ ಇರಲಿಲ್ಲ; ಅವು ಒಬ್ಬ ದಾರ್ಶನಿಕನ ಜೊತೆಗಿನ ಸಂವಾದವಾಗಿತ್ತು, ಶಿಕ್ಷಣವನ್ನು ಸಾಮಥ್ರ್ಯವಾಗಿ, ಕರುಣೆಯನ್ನು ಶಕ್ತಿಯಾಗಿ, ಮತ್ತು ಸೇವೆಯನ್ನು ದೈವಿಕವಾಗಿ ಕಂಡವರ ಜೊತೆಗಿನ ಕ್ಷಣಗಳಾಗಿತ್ತು. ಡಾ. ಶರಣಬಸಪ್ಪ ಅಪ್ಪಾಜಿಯವರ ಜೀವನವು ಶಿಕ್ಷಣ ಮತ್ತು ಕರುಣೆಯ ಶಕ್ತಿಯ ಒಂದು ಜೀವಂತ ಸಾಕ್ಷಿಯಾಗಿದೆ. ಅವರ ಆತ್ಮಕ್ಕೆ ಶಾಂತಿಯೂ, ಅವರ ದೃಷ್ಟಿಯು ನಮ್ಮೆಲ್ಲರಿಗೂ ಮಾರ್ಗದರ್ಶಿಯೂ ಆಗಲಿ.









