ಆಳಂದ: ಶಿಕ್ಷಣ ಇಲಾಖೆಗೆ ನೂತನವಾಗಿ ನೇಮಕಗೊಂಡಿರುವ ಸರ್ಕಾರಿ ಪ್ರಾಥಮಿಕ ಟಿಇಟಿ 120 ಶಿಕ್ಷಕರಿಗೆ “T-ALIP (Technology Assisted Learning Improvement Program)” ತರಬೇತಿ ಶುಕ್ರವಾರ ಸಂಪನ್ನಗೊಂಡಿತು.
ತರಗತಿಯಲ್ಲಿ ತಂತ್ರಜ್ಞಾನದ ಸದ್ಬಳಕೆಯ ಮೂಲಕ ಮಕ್ಕಳ ಕಲಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವುದು ಮತ್ತು ಶಿಕ್ಷಕರ ವೃತ್ತಿಪರ ದಕ್ಷತೆಯನ್ನು ಹೆಚ್ಚಿಸುವುದು ಈ ತರಬೇತಿಯ ಮುಖ್ಯ ಉದ್ದೇಶವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ ಅವರು ಸಮಾರೋಪ ಸಮಾರಂಭದಲ್ಲಿ ಹೇಳಿದರು.
“ತಂತ್ರಜ್ಞಾನ ಎಂಬುದು ಎರಡು ಧಾರಿಯ ಕತ್ತಿ. ಸದ್ಬಳಕೆ ಮಾಡಿದರೆ ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತ ಫಲಿತಾಂಶ ಬರುತ್ತದೆ, ದುರ್ಬಳಕೆಯಾದರೆ ಮಕ್ಕಳ ಮೇಲೆ ವಿಪರೀತ ಪರಿಣಾಮ ಬೀರುತ್ತದೆ. ಈ ತರಬೇತಿಯ ಮೂಲಕ ಶಿಕ್ಷಕರು ತಾಂತ್ರಿಕ ನೈಪುಣ್ಯತಾ ಜೊತೆಗೆ ಸದ್ಗುಣ, ನಿಯಂತ್ರಣ ಮತ್ತು ಸದ್ಬಳಕೆಯ ಮನೋಭಾವವನ್ನೂ ಬೆಳೆಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
T-ALIP ತರಬೇತಿಯ ಮುಖ್ಯ ಗುರಿಯ ಕುರಿತು ವಿವರಿಸಿದ ವಿ. ರಂಗಸ್ವಾಮಿ ಶೆಟ್ಟಿ ಅವರು, ಶಿಕ್ಷಕರಲ್ಲಿ ಕಂಪ್ಯೂಟರ್ ಮತ್ತು ಡಿಜಿಟಲ್ ಸಾಧನಗಳ ಬುನಾದಿ ಜ್ಞಾನವನ್ನು ಬಲಪಡಿಸುವುದು, ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ತರಗತಿಯಲ್ಲಿ GPT, ಡಿಜಿಟಲ್ ಬೋರ್ಡ್, ಆನ್‌ಲೈನ್ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸುವಂತೆ ಸಜ್ಜುಗೊಳಿಸುವುದು, ಮಕ್ಕಳಲ್ಲಿ ತಾಂತ್ರಿಕ ಅರಿವು ಮೂಡಿಸಿ, ಡಿಜಿಟಲ್ ಯುಗಕ್ಕೆ ಸಿದ್ಧರಾಗುವಂತೆ ಮಾಡುವುದು, ಶಿಕ್ಷಕರ ವೃತ್ತಿಪರ ಕೌಶಲ್ಯ ಹೆಚ್ಚಿಸಿ, ಕಾಲಕ್ಕೆ ತಕ್ಕಂತೆ ವಿನೂತನ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವುದಾಗಿದೆ. ಇದರ ಸದ್ಬಳಕೆಯನ್ನಾಗಿಸುವ ಮೂಲಕ ಶಿಕ್ಷಣದ ಕುರಿತು ಇಲಾಖೆಯ ಕಂಡುಕೊಂಡ ಯೋಜನೆಯ ಸದ್ಬಳಕೆಗೊಳಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣದ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ, ನೋಡಲ್ ಅಧಿಕಾರಿ ಪಂಕಜ್ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ, ಉಪಾಧ್ಯಕ್ಷ ಶ್ರೀಶೈಲ ಮಾಡಿಯಾಳೆ, ಕಾರ್ಯದರ್ಶಿ ಮನ್ಸೂರ ಮುಜಾವರ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.









