ಆಳಂದ: ರಾಜ್ಯ ಆಹಾರ ಆಯೋಗದ ಸದಸ್ಯ ಸುಮಂತರಾವ್ ಅವರ ಎರಡು ದಿನಗಳ ದಿಢೀರ್ ತಪಾಸಣೆಯಲ್ಲಿ ವಸತಿನಿಲಯಗಳು, ಆಸ್ಪತ್ರೆ, ನ್ಯಾಯಬೆಲೆ ಅಂಗಡಿ, ಮಧ್ಯಾಹ್ನದ ಊಟ ಯೋಜನೆಗಳಲ್ಲಿ ಗಂಭೀರ ಅವ್ಯವಸ್ಥೆಗಳು ಬಯಲಾಗಿರುವ ಬೆನ್ನಲ್ಲೇ, ಜಿಲ್ಲಾಧಿಕಾರಿ ಡಾ. ಬಿ. ಫೌಜಿಯಾ ಟಿ. ಅವರು ಮಂಗಳವಾರ ಆಳಂದ ತಾಲೂಕಿಗೆ ಹಠಾತ್ ಭೇಟಿ ನೀಡಿ ಸ್ಥಳೀಯ ಅಧಿಕಾರಿಗಳ ಮೇಲೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಆಹಾರ ಆಯೋಗದ ಸದಸ್ಯರು ಗಂಭೀರ ನ್ಯೂನತೆಗಳ ವರದಿಯನ್ನು ಜಿಲ್ಲಾ ಮಟ್ಟದ ಸಭೆಯಲ್ಲಿ ಮಂಡಿಸಿದ ಮೂರು–ನಾಲ್ಕು ದಿನಗಳಲ್ಲೇ, ಡಿಸಿ ಅವರು ತಕ್ಷಣವೇ ಆಳಂದಕ್ಕೆ ಧಾವಿಸಿ ವಸತಿ ನಿಲಯಗಳು ಹಾಗೂ ಕಡಗಂಚಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ನ್ಯಾಯಬೆಲೆ ಅಂಗಡಿಗಳು ಹಾಗೂ ಆಹಾರ ಧಾನ್ಯ ಗೋದಾಮುಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಕಲೆಹಾಕಿ, ಸ್ಥಳದಲ್ಲಿ ಕಂಡುಬಂದ ಲೋಪಗಳು ಮತ್ತು ಸೋರಿಕೆಯ ಸಾಧ್ಯತೆಗಳ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ನೇರವಾಗಿ ಪ್ರಶ್ನಿಸಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
“ನಿಮ್ಮ ಮೇಲುಸ್ತುವಾರಿ ಸಂಪೂರ್ಣ ವಿಫಲವಾಗಿದೆ. ಆಹಾರ ಆಯೋಗದ ಸದಸ್ಯರು ಇಷ್ಟು ಗಂಭೀರ ವಿಷಯಗಳನ್ನು ಪತ್ತೆ ಮಾಡಬೇಕಾಯಿತೇ? ಇದು ತಾಲೂಕಿನ ಆಡಳಿತದ ಸಂಪೂರ್ಣ ವೈಫಲ್ಯ,” ಎಂದು ಡಿಸಿ ಫೌಜಿಯಾ ಅವರು ಅಧಿಕಾರಿಗಳನ್ನು ಗದರಿಸಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಆಗಸ್ಟ್‌ನಿಂದ ಗೋಧಿ ಪೂರೈಕೆ ಇಲ್ಲದ ಹಿಂದುಳಿದ ವರ್ಗಗಳ ಹೆಣ್ಣುಮಕ್ಕಳ ವಸತಿ ನಿಲಯ, ಸಿಪಿಎಸ್ ಶಾಲೆಯ ಮಕ್ಕಳಿಗೆ ಐದು ದಿನಗಳಿಂದ ಮೊಟ್ಟೆ ಸಿಗದಿರುವುದು, ಆಸ್ಪತ್ರೆಯಲ್ಲಿ ರೋಗಿಗಳ ಊಟದ ದಾಖಲೆಗಳೇ ಇಲ್ಲದಿರುವುದು, ನ್ಯಾಯಬೆಲೆ ಅಂಗಡಿಯಲ್ಲಿ 6 ಕ್ವಿಂಟಲ್ ಹೆಚ್ಚುವರಿ ದಾಸ್ತಾನು, ವಿದ್ಯುತ್ ಇಲ್ಲದ ಸಮಯದಲ್ಲಿ ಬ್ಯಾಟರಿ ಬ್ಯಾಕಪ್ ಇಲ್ಲದ ವಸತಿ ನಿಲಯಗಳು—ಈ ಎಲ್ಲ ಸಮಸ್ಯೆಗಳ ಕುರಿತು ತಕ್ಷಣ ವರದಿ ಕಲೆಹಾಕಿ, ಎಲ್ಲಾ ಕೊರತೆಗಳನ್ನು ಸರಿಪಡಿಸುವಂತೆ ಸೂಚಿಸಲಾಗಿದೆ.
ಆಹಾರ ಆಯೋಗದ ಎಚ್ಚರಿಕೆಯ ಬೆನ್ನಲ್ಲೇ ಜಿಲ್ಲಾಧಿಕಾರಿಗಳ ಆಗಮನದಿಂದ ಆಳಂದ ತಾಲೂಕಿನ ಆಡಳಿತದಲ್ಲಿ ಬೆವರಿಳಿಸುವ ವಾತಾವರಣ ನಿರ್ಮಾಣವಾಗಿದೆ. ಇನ್ನು ಮುಂದೆ ಯಾವುದೇ ಲೋಪಕ್ಕೆ ಸ್ಥಳವಿಲ್ಲ ಎಂಬ ಸಂದೇಶವನ್ನು ಜಿಲ್ಲಾಡಳಿತ ಮತ್ತೊಮ್ಮೆ ಸ್ಪಷ್ಟವಾಗಿ ನೀಡಿದೆ. ಆದಾಗ್ಯೂ, “ತುಕ್ಕು ಹಿಡಿದ ಆಡಳಿತವನ್ನು ಸರಿಗೊಳಿಸುವ ಬಾಕಿ ಕೆಲಸ” ವಿದ್ಯಾರ್ಥಿಗಳು ಮತ್ತು ಸರ್ಕಾರಿ ಯೋಜನೆಯ ಫಲಾನುಭವಿಗಳು ಕಾಯಬೇಕಾದ ಪರಿಸ್ಥಿತಿ ಮುಂದುವರಿದಿದೆ.
ಜಿರೋಳಿ ರಸ್ತೆಯ ಸರ್ಕಾರಿ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ, ಹಾಜರಿದ್ದ ಸಿಬ್ಬಂದಿಗಳಿಂದ ಮಾಹಿತಿ ಆಲಿಸಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ ಹಾಗೂ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಿದರು.
ಪಟ್ಟಣದ ಫಿಲ್ಟರ್‌ಬೇಡ್ ಪ್ರದೇಶಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ನೀರು ಸರಬರಾಜಿಗೆ ಪ್ರತ್ಯೇಕ ಟ್ಯಾಂಕ್ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು.
ಬಡಾವಣೆಯಲ್ಲಿ ಪುರಸಭೆಯಿಂದ ಕೈಗೊಂಡ ಸಿಮೆಂಟ್ ರಸ್ತೆಯ ಅಳತೆಗೆ ಸಂಬಂಧಿಸಿದ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಹಾಜರಿದ್ದ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಅವರಿಂದ ಮಾಹಿತಿ ಪಡೆದುಕೊಂಡರು.
ಅಲ್ಲದೆ, ಆಳಂದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಬೀಜ ಹಾಗೂ ಪರಿಕರ ವಿತರಣೆ ಮತ್ತು ರಿಜಿಸ್ಟರ್‌ಗಳನ್ನು ಪರಿಶೀಲಿಸಿದರು. ಜೆಡಿ ಸಹಮದ ಪಟೇಲ್ ಹಾಜರಿದ್ದರು.
ಕಡಗಂಚಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಂಬಂಧಿತ ವೈದ್ಯರಿಲ್ಲದೆ ಆಯುಷ್ಯ ವೈದ್ಯರ ಮೂಲಕ ರೋಗಿಗಳ ತಪಾಸಣೆ ನಡೆಯುತ್ತಿರುವುದು ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದೆ. ರೋಗಿಗಳೊಂದಿಗೆ ಮಾತನಾಡಿದಾಗ ಕೆಲವರು “ಸರಿಯಾಗಿಯೇ ಇದೆ” ಎಂದರೆ, ಒಬ್ಬಿಬ್ಬರು “ಅವ್ಯವಸ್ಥೆ ಇದೆ” ಎಂದು ಬಯಲಿಗೆಳೆದ ಹಿನ್ನೆಲೆಯಲ್ಲಿ, ಹಾಜರಿದ್ದ ಆರೋಗ್ಯ ಅಧಿಕಾರಿ ಶುಶೀಲಕುಮಾರ ಅಂಬೂರೆ ಅವರಿಗೆ ವ್ಯವಸ್ಥೆ ಸರಿಪಡಿಸುವಂತೆ ಸೂಚಿಸಲಾಗಿದೆ.









