ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಜನಸಹಕಾರದೊಂದಿಗೆ ಮುಂದುವರಿದ ಆಳಂದ ಮುಖ್ಯ ರಸ್ತೆ ಅಗಲೀಕರಣ ಕಾರ್ಯ; ಎರಡನೇ ದಿನವೂ ಶಾಂತಿ, ಶಿಸ್ತು.

On: December 24, 2025 9:57 PM

ಆಳಂದ: ಪಟ್ಟಣದ ಹೃದಯಭಾಗದ ಹಳೆಯ ತಹಸೀಲ್ದಾರ ಕಚೇರಿಯಿಂದ ರ್ಗಾ ಚೌಕ್‌ವರೆಗಿನ ಮುಖ್ಯ ರಸ್ತೆ ಅಗಲೀಕರಣ ಕಾರ್ಯವು ಎರಡನೇ ದಿನವಾದ ಬುಧವಾರವೂ ಯಾವುದೇ ಅಡೆತಡೆ, ಉದ್ವಿಗ್ನತೆ ಅಥವಾ ಭಾರೀ ಪೊಲೀಸ್ ಬಂದೋಬಸ್ತ್ ಇಲ್ಲದೆ ಶಾಂತ ಹಾಗೂ ಸುವ್ಯವಸ್ಥಿತವಾಗಿ ಮುಂದುವರಿಯಿತು. ಸಾರ್ವಜನಿಕ ಶಾಂತಿ ಕಾಪಾಡಿಕೊಂಡೇ ನಡೆಯುತ್ತಿರುವ ಈ ಕಾರ್ಯಾಚರಣೆ, ಆಡಳಿತದ ದೃಢ ನಿರ್ಧಾರ ಮತ್ತು ನಾಗರಿಕರ ಸಹಕಾರದ ಸ್ಪಷ್ಟ ಪ್ರತಿಬಿಂಬವಾಗಿ ಕಂಡುಬಂದಿದೆ.

ಜ.5ರ ಗಡುವು ಇರುವ ನಡುವೆಯೇ ಪಟ್ಟಣದ ವಿವಿಧ ಭಾಗಗಳಲ್ಲಿ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದ ಅಳತೆ ಮತ್ತು ತೆರವು ಕಾರ್ಯಾಚರಣೆಗಳು ಚುರುಕುಗೊಂಡಿದ್ದು, “ಈ ಬಾರಿ ಅಗಲೀಕರಣ ನಡೆಯದೇ ಉಳಿಯದು” ಎಂಬ ದೃಢ ವಿಶ್ವಾಸವನ್ನು ಸಾರ್ವಜನಿಕರಲ್ಲಿ ಮೂಡಿಸಿದೆ. ಬಹುಕಾಲದ ನಿರೀಕ್ಷೆಯಾದ ಈ ಯೋಜನೆ ಈಗ ಕಾರ್ಯರೂಪಕ್ಕೆ ಬರುತ್ತಿರುವುದನ್ನು ಕಂಡು, ಪಟ್ಟಣದ ಅಭಿವೃದ್ಧಿಯ ಕುರಿತ ನಿರೀಕ್ಷೆಗಳು ಮತ್ತಷ್ಟು ಗಟ್ಟಿಯಾಗುತ್ತಿವೆ.

ಕೆಲವರ ಮುಖಗಳಲ್ಲಿ ನಷ್ಟದ ಆತಂಕ ಮತ್ತು ಅನಿಶ್ಚಿತತೆಯ ಭಾವನೆ ಸ್ಪಷ್ಟವಾಗಿದ್ದರೂ, ಇನ್ನೂ ಹಲವರು “ವರ್ಷಗಳಿಂದ ಬಾಕಿ ಉಳಿದ ಕೆಲಸ ಇವಾಗಾದರೂ ಆಗಲಿ” ಎಂಬ ಮನೋಭಾವದಲ್ಲಿ ಆಡಳಿತಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಸಾಮಾನ್ಯವಾಗಿ ರಸ್ತೆ ಅಗಲೀಕರಣ ಎಂದರೆ ಗಲಾಟೆ, ಜನಜಂಗುಳಿ ಮತ್ತು ಭಾರೀ ಪೊಲೀಸ್ ಭದ್ರತೆ ಎಂಬ ಚಿತ್ರಣ ಮೂಡುತ್ತಿದ್ದರೆ, ಆಳಂದದಲ್ಲಿ ಇದಕ್ಕೆ ವಿರುದ್ಧವಾಗಿ ನಿರಾತಂಕ ಮತ್ತು ಶಾಂತ ವಾತಾವರಣದಲ್ಲಿ ಕಾರ್ಯಾಚರಣೆ ನಡೆಯುತ್ತಿರುವುದು ಗಮನಾರ್ಹವಾಗಿದೆ.

ಬುಧವಾರ ಪುರಸಭೆಯ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಅವರ ನೇತೃತ್ವದಲ್ಲಿ ಪುರಸಭೆ ಸಿಬ್ಬಂದಿ ರಸ್ತೆ ಬದಿಯ ಆಸ್ತಿಗಳ ಅಳತೆ ಹಾಗೂ ತೆರವು ಕಾರ್ಯಕ್ಕೆ ಮುಂದಾದರು. ಯಾವುದೇ ತಡೆಯಿಲ್ಲದೆ, ಭಯವಿಲ್ಲದೆ ಕಾರ್ಯನಿರ್ವಹಿಸಿದ ಅಧಿಕಾರಿಗಳ ಚುರುಕಿಗೆ ಬಹುತೇಕ ರಸ್ತೆ ಬದಿಯ ಆಸ್ತಿ ಮಾಲೀಕರ ಸ್ವಯಂ ಒಪ್ಪಿಗೆ ಹಾಗೂ ಸಾರ್ವಜನಿಕರ ಸಹಕಾರವೇ ಮುಖ್ಯ ಬಲವಾಗಿತ್ತು.

ಮುಖ್ಯ ರಸ್ತೆಯ ವಿಶಾಲ ಗಾಂಧಿ ಅಂಗಡಿ, ಮನೋಹರ ದಳವಿ ಗ್ಯಾರೇಜ್, ಮಹಮ್ಮದ್ ಬಿಲಾಲ್ ಸನ್ಮಾನ ಬುಕ್ ಅಂಗಡಿ ಸೇರಿದಂತೆ ಹಲವು ವ್ಯಾಪಾರಸ್ಥರು ತಮ್ಮ ಅಂಗಡಿಗಳಲ್ಲಿದ್ದ ಸಾಮಗ್ರಿಗಳನ್ನು ತಾವೇ ತೆಗೆದು ಸ್ವಯಂ ಖಾಲಿ ಮಾಡಲಾರಂಭಿಸಿದ್ದಾರೆ. ವ್ಯಾಪಾರ ನಷ್ಟದ ನಡುವೆಯೂ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಬಾರದೆಂಬ ಉದ್ದೇಶದಿಂದ ತೋರಿಸುತ್ತಿರುವ ಈ ಸಹಕಾರವು ಆಡಳಿತಕ್ಕೆ ಮತ್ತಷ್ಟು ಹುರಿದುಂಬನೆ ನೀಡುತ್ತಿದೆ. ಇದೇ ವೇಳೆ, “ಬಂದಾಗ ನೋಡೋಣ” ಎಂಬ ನಿರೀಕ್ಷೆಯಲ್ಲಿ ಇನ್ನೂ ಕೆಲವರು ಅಂಗಡಿಗಳನ್ನು ತೆರೆದು ವ್ಯಾಪಾರ ವಹಿವಾಟು ಮುಂದುವರಿಸಿಕೊಂಡಿದ್ದಾರೆ. ಆದರೆ ಅಗಲೀಕರಣ ಯಂತ್ರಗಳ ನಿರಂತರ ಓಡಾಟದ ಕಾರಣ ಗ್ರಾಮೀಣ ಭಾಗಗಳಿಂದ ಬರುವ ಗ್ರಾಹಕರು ಈ ರಸ್ತೆಯನ್ನು ತಾತ್ಕಾಲಿಕವಾಗಿ ದೂರವಿಟ್ಟಿರುವುದು ಬುಧವಾರ ಸ್ಪಷ್ಟವಾಗಿ ಗೋಚರಿಸಿತು.

ಸ್ವಯಂ ತೆರವುಗೆ ಮುಂದಾದ ವ್ಯಾಪಾರಸ್ಥರ ಮಾತು:
ಮನೋಹರ ದಳವಿ ಗ್ಯಾರೇಜ್ ಅಂಗಡಿ ಮಾಲೀಕರು, “ನಮ್ಮ ಅಂಗಡಿಯನ್ನು ಖಾಲಿ ಮಾಡಲು ಯಾರಿಂದಲೂ ಒತ್ತಡವಿಲ್ಲ. ನಾವು ಸ್ವಯಂ ಇಚ್ಛೆಯಿಂದ ರಸ್ತೆ ಅಗಲೀಕರಣಕ್ಕೆ ಸಹಕಾರ ನೀಡುತ್ತಿದ್ದೇವೆ. ಇದು ಪಟ್ಟಣದ ಹಿತಕ್ಕಾಗಿ ನಡೆಯುತ್ತಿರುವ ಒಳ್ಳೆಯ ಕೆಲಸ,” ಎಂದು ಅಭಿಪ್ರಾಯಪಟ್ಟರು.

ಸನ್ಮಾನ ಬುಕ್ ಅಂಗಡಿ ಮಾಲೀಕ ಮಹಮ್ಮದ್ ಬಿಲಾಲ್ ಮಾತನಾಡಿ, “ನಾವೇ ನಮ್ಮ ಸಾಮಾನುಗಳನ್ನು ತೆಗೆದು ಅಂಗಡಿ ಖಾಲಿ ಮಾಡುತ್ತಿದ್ದೇವೆ. ಮಧ್ಯಭಾಗದಿಂದ 25 ಅಡಿ ವಿಸ್ತರಣೆ ಎಂದು ಹೇಳಲಾಗುತ್ತಿದೆ, ಆದರೆ ನಿಖರ ಅಳತೆ ಎಷ್ಟು ಎಂಬುದು ನಮಗೆ ತಿಳಿದಿಲ್ಲ. ಆದರೂ ಅಭಿವೃದ್ಧಿಗೆ ನಮ್ಮಿಂದ ಯಾವುದೇ ಅಡ್ಡಿ ಇಲ್ಲ,” ಎಂದು ಹೇಳಿದರು.

ಇದುವರೆಗೆ ಮಾಧ್ಯಮದ ಎದುರು ರಸ್ತೆ ಬದಿಯ ಯಾವುದೇ ಆಸ್ತಿ ಮಾಲೀಕರು ತೆರವು ಕಾರ್ಯಕ್ಕೆ ಸಂಬಂಧಿಸಿದಂತೆ ತೀವ್ರ ವಿರೋಧ ವ್ಯಕ್ತಪಡಿಸಿಲ್ಲ. ಆದರೆ, “ಅಕ್ರಮವಲ್ಲದ ಕಟ್ಟಡಗಳು ಹಾಗೂ ನಿವೇಶನಗಳಿಗೆ ಸರ್ಕಾರ ನ್ಯಾಯಯುತ ಪರಿಹಾರ ನೀಡಬೇಕು. ರಸ್ತೆ ಅಗಲೀಕರಣಕ್ಕೆ ನಮ್ಮ ವಿರೋಧವಿಲ್ಲ, ಆದರೆ ಪರಿಹಾರ ವಿಚಾರದಲ್ಲಿ ನ್ಯಾಯ ಅಗತ್ಯ,” ಎಂದು ಮಹಾದೇವ ಮಂದಿರ ರಸ್ತೆಯ ಬಳಿಯ ನಿವಾಸಿ ಹಾಗೂ ಆಸ್ತಿಯ ವಾರಸುದಾರ ಸಂಗಮೇಶ ಸಜ್ಜನಶೆಟ್ಟಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಆಡಳಿತದ ನಿಲುವು: ಪುರಸಭೆ ಅಧಿಕಾರಿಗಳ ಪ್ರಕಾರ, ಹೆಚ್ಚಿನ ಸಂಖ್ಯೆಯ ಆಸ್ತಿ ಮಾಲೀಕರು ಸ್ವಯಂಪ್ರೇರಿತವಾಗಿ ತೆರವುಗೆ ಮುಂದಾಗಿರುವುದರಿಂದ ಕಾರ್ಯಾಚರಣೆ ನಿರೀಕ್ಷೆಗಿಂತ ವೇಗ ಪಡೆದುಕೊಂಡಿದೆ. ಉಳಿದ ಕೆಲ ಪ್ರಕರಣಗಳನ್ನು ಸಂವಾದ ಹಾಗೂ ಹೇರಿಂಗ್ ಮೂಲಕ ಬಗೆಹರಿಸುವ ಪ್ರಕ್ರಿಯೆ ಮುಂದುವರಿಯುತ್ತಿದ್ದು, ಯಾವುದೇ ಹಂತದಲ್ಲೂ ಬಲವಂತದ ಕ್ರಮಕ್ಕೆ ಅವಕಾಶ ನೀಡದಂತೆ ಆಡಳಿತ ಎಚ್ಚರಿಕೆ ವಹಿಸಿದೆ.

ಒಟ್ಟಾರೆ, ಆಳಂದ ಪಟ್ಟಣದ ಬಹುದಿನಗಳ ಬೇಡಿಕೆಯಾದ ಮುಖ್ಯ ರಸ್ತೆ ಅಗಲೀಕರಣ ಕಾರ್ಯ ಎರಡನೇ ದಿನವೂ ಶಾಂತಿ, ಶಿಸ್ತು ಮತ್ತು ಜನಸ್ಪಂದನೆಯೊಂದಿಗೆ ಮುಂದುವರಿದಿದ್ದು, ಅಭಿವೃದ್ಧಿ ಕಾರ್ಯಗಳಿಗೆ ನಾಗರಿಕರ ಸಹಭಾಗಿತ್ವವೇ ಯಶಸ್ಸಿನ ಮೂಲ ಎಂಬ ಸಂದೇಶವನ್ನು ಈ ಕಾರ್ಯಾಚರಣೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

Join WhatsApp

Join Now

ಶಿಫಾರಸಿತ ಸುದ್ದಿಗಳು

Leave a Comment

error: Content is Protected!