ಆಳಂದ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (ಸಿಯುಕೆ)ಯಲ್ಲಿ ಕೇರಳ ಮೂಲದ ವಿದ್ಯಾರ್ಥಿನಿ ಮತ್ತು ಒಡಿಶಾದ ಜಯಶ್ರೀ ನಾಯಕ್ ಎಂಬ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣಗಳನ್ನು ಅಖಿಲ ಕರ್ನಾಟಕ ದಲಿತ ಸೇನೆ ತೀವ್ರವಾಗಿ ಖಂಡಿಸಿದೆ.
ಈ ಘಟನೆಗಳಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದಲ್ಲಿ ವ್ಯಾಪಕವಾದ ತಾರತಮ್ಯ, ಕಿರುಕುಳ ಮತ್ತು ಆಡಳಿತದ ನಿರ್ಲಕ್ಷ್ಯದ ಆರೋಪಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಕೈಗೊಳ್ಳಬೇಕು ಎಂದು ಸೇನೆಯ ರಾಜ್ಯಾಧ್ಯಕ್ಷ ದತ್ತಾತ್ರೇಯ ಕುಡಕಿ ಅವರು ಪ್ರಕಟಣೆಯ ಮೂಲಕ ಒತ್ತಾಯಿಸಿ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಮಾನಸಿಕ ಕ್ಷೇಮವನ್ನು ಖಾತ್ರಿಪಡಿಸುವಲ್ಲಿ ವಿಶ್ವವಿದ್ಯಾಲಯದ ಆಡಳಿತ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.
ಕುಲಪತಿ ಬಟ್ಟು ಸತ್ಯನಾರಾಯಣ ಅವರ ನೇತೃತ್ವದಲ್ಲಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳನ್ನು ಪ್ರಶ್ನಿಸದಂತೆ ಒತ್ತಾಯಿಸುವ, ಗುಲಾಮಗಿರಿಯಂತಹ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರಾಮನವಮಿ, ಗಣೇಶೋತ್ಸವ, ಸರಸ್ವತಿ ಪೂಜೆಯಂತಹ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಲಾಗುತ್ತಿದೆಯಾದರೂ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಸ್ಮಾರಕಕ್ಕೆ ಗೌರವ ಸಲ್ಲಿಸಲು ಅವಕಾಶ ನೀಡದಿರುವ ಕುಲಪತಿಗಳ ನಡೆಯನ್ನು ಸಂಘಟನೆ ಖಂಡಿಸಿದೆ.
ಜಯಶ್ರೀ ನಾಯಕ್, ದಲಿತ ವಿದ್ಯಾರ್ಥಿನಿಯಾಗಿದ್ದು, ಜುಲೈ 31, 2025 ರಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆಯ ಆತ್ಮಹತ್ಯೆಗೆ ಬಿಜೆಪಿಗೆ ಸಂಬಂಧಿಸಿದ ಕ್ಯಾಂಟೀನ್ ಗುತ್ತಿಗೆದಾರನಿಂದ ಲೈಂಗಿಕ ಕಿರುಕುಳವೇ ಕಾರಣ ಎಂದು ಆರೋಪಿಸಲಾಗಿದೆ. ಈ ಕಿರುಕುಳದ ಬಗ್ಗೆ ಜಯಶ್ರೀ ಅವರು ವಿದ್ಯಾರ್ಥಿಗಳ ಕಲ್ಯಾಣಾಧಿಕಾರಿ ಡಾ. ಬಸವರಾಜ ಕುಬಕಡ್ಡಿಯವರಿಗೆ ದೂರು ನೀಡಿದ್ದರೂ, ಕಾನೂನು ಕ್ರಮದ ಬದಲು ಸಂಧಾನದ ಮೂಲಕ ಪ್ರಕರಣವನ್ನು ಮುಚ್ಚಿಹಾಕಲಾಗಿತ್ತು ಎಂದು ಆರೋಪವಿದೆ. ಇದೇ ರೀತಿ, ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಾಧ್ಯಾಪಕರ ಸಹೋದರನೊಬ್ಬನಿಂದ ನಡೆಸಲ್ಪಡುವ ನಂದಿನಿ ಹಾಲಿನ ಅಂಗಡಿಯಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನಡೆದಿದೆ ಎಂಬ ದೂರನ್ನೂ ಆಡಳಿತವು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕುಡಕಿ ಆರೋಪಿಸಿದರು.
ವಿದ್ಯಾರ್ಥಿನಿಯ ಆತ್ಮಹತ್ಯೆಗೂ ಮುನ್ನ ಆಕೆ ಡಾ. ಬಸವರಾಜ ಕುಬಕಡ್ಡಿಯವರೊಂದಿಗೆ ಮಾತನಾಡಿದ್ದಳು. ಆದರೆ, ವಸತಿ ಪಾಲಕರು, ವಿಭಾಗದ ಮುಖ್ಯಸ್ಥರು, ಕುಲಸಚಿವರು, ಕುಲಪತಿಗಳು ಮತ್ತು ವಿದ್ಯಾರ್ಥಿಗಳ ಕಲ್ಯಾಣಾಧಿಕಾರಿಗಳು ಯಾರೂ ಈ ಅನ್ಯಾಯವನ್ನು ಗಂಭೀರವಾಗಿ ಪರಿಗಣಿಸದಿರುವುದರಿಂದ ಜಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಸಂಘಟನೆ ಆರೋಪಿಸಿದೆ. ಇದಲ್ಲದೆ, ಡಾ. ಬಸವರಾಜ ಕುಬಕಡ್ಡಿಯವರು ಪೆÇಲೀಸರು ಆಗಮಿಸುವ ಮೊದಲೇ ಮೃತ ವಿದ್ಯಾರ್ಥಿನಿಯ ಕೊಠಡಿಯ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದ್ದು, ಸಾಕ್ಷ್ಯಗಳನ್ನು ನಾಶಪಡಿಸಿರಬಹುದೆಂಬ ಅನುಮಾನವನ್ನು ಸಾರ್ವಜನಿಕರಲ್ಲಿ ಮೂಡಿಸಿದೆ ಎಂದು ಅವರು ಶಂಕ್ಯವ್ಯಕ್ತಪಡಿಸದರು.
ಅಖಿಲ ಕರ್ನಾಟಕ ದಲಿತ ಸೇನೆಯು ವಿಶ್ವವಿದ್ಯಾಲಯದ ಅನೈತಿಕ ಚಟುವಟಿಕೆಗಳ ಬಗ್ಗೆ ಸಮಗ್ರ ತನಿಖೆಯನ್ನು ಒತ್ತಾಯಿಸಿದೆ. ಕೇರಳ ಮೂಲದ ವಿದ್ಯಾರ್ಥಿನಿ ಮತ್ತು ಒಡಿಶಾದ ಜಯಶ್ರೀ ನಾಯಕ್ ಅವರ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಒತ್ತಾಯಿಸಿದ ಅವರು, ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸುರಕ್ಷಿತ ವಾತಾವರಣ ಕಲ್ಪಿಸದೇ ಹೋದಲ್ಲಿ ಬರುವ ದಿನಗಳಲ್ಲಿ ಉಗ್ರವಾದ ಹೋರಾಟ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.