ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಹೈ ಫ್ರೀಕ್ವೆನ್ಸಿ ಎಲೆಕ್ಟ್ರಾನಿಕ್ಸ್‌ನಲ್ಲಿ ಶ್ರೇಷ್ಠತೆಯ ಕೇಂದ್ರಕ್ಕೆ ಸಿಯುಕೆ–ಕೀಸೈಟ್ ಟೆಕ್ನಾಲಜೀಸ್ ಶೈಕ್ಷಣಿಕ ಒಪ್ಪಂದ.

On: August 28, 2025 7:09 PM

ಆಳಂದ: ಕಲಬುರಗಿಯ ಸಮೀಪದ ಕಡಗಂಚಿ ಗ್ರಾಮದಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಹಾಗೂ ಅಮೇರಿಕಾದ ಬಹುರಾಷ್ಟ್ರೀಯ ಕಂಪನಿ ಕೀಸೈಟ್ ಟೆಕ್ನಾಲಜೀಸ್ ನಡುವೆ ಹೈ ಫ್ರೀಕ್ವೆನ್ಸಿ ಎಲೆಕ್ಟ್ರಾನಿಕ್ಸ್‌ನಲ್ಲಿ ಶ್ರೇಷ್ಠತೆಯ ಕೇಂದ್ರವನ್ನು ನಿರ್ಮಿಸಲು ಮಹತ್ವದ ಶೈಕ್ಷಣಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಿಯುಕೆಯ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು, “ಕೀಸೈಟ್ ಟೆಕ್ನಾಲಜೀಸ್ ಬೆಂಬಲದೊಂದಿಗೆ ಪ್ರಾರಂಭವಾಗುತ್ತಿರುವ ಈ ಕೇಂದ್ರ ಕೇವಲ ಆರಂಭ. ಮುಂದಿನ ದಿನಗಳಲ್ಲಿ ನಾವು ಕೃತಕ ಬುದ್ಧಿಮತ್ತೆ (AI), ರೋಬೊಟಿಕ್ಸ್ ಮತ್ತು ಮಷೀನ್ ಲರ್ನಿಂಗ್ ಕೋರ್ಸುಗಳನ್ನು ಪ್ರಾರಂಭಿಸುವ ಯೋಜನೆ ಹೊಂದಿದ್ದೇವೆ. ತಂತ್ರಜ್ಞಾನವನ್ನು ಸಮಾಜಕ್ಕೆ ವರ್ಗಾಯಿಸುವುದು ನಮ್ಮ ಗುರಿ. ಇದರಿಂದ ರಾಷ್ಟ್ರದ ಸಾಮಾಜಿಕ-ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು” ಎಂದು ಹೇಳಿದರು.

ಅವರು ಮುಂದುವರಿದು, “ಸಿಯುಕೆಯಲ್ಲಿ ಈಗಾಗಲೇ ಪ್ರತಿಭಾವಂತ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದಾರೆ. ಇದು ತಂತ್ರಜ್ಞಾನಗಳ ಅಭಿವೃದ್ಧಿಗೆ ದೊಡ್ಡ ಬಲ. ಸಂಶೋಧನೆ ಮತ್ತು ಅಭಿವೃದ್ಧಿಗೆ ಅನುಕೂಲಕರ ವಾತಾವರಣ ಇಲ್ಲಿ ಲಭ್ಯವಿದೆ. ಕೇಂದ್ರದ ನಿರ್ಮಾಣಕ್ಕೆ ಭಾರತ ಸರ್ಕಾರ ಕಟ್ಟಡ ಮತ್ತು ಉಪಕರಣಗಳಿಗೆ ಅಗತ್ಯ ಅನುದಾನ ನೀಡುತ್ತಿದೆ” ಎಂದರು.

ಕೀಸೈಟ್ ಅಕಾಡೆಮಿಯಾದ ಜನರಲ್ ಮ್ಯಾನೇಜರ್ ಸ್ವಿಂದರ್ ಪುರಿ ಹೇಳಿದರು: “ಭಾರತ ಭವಿಷ್ಯದ ತಂತ್ರಜ್ಞಾನಗಳಲ್ಲಿ ಜಾಗತಿಕ ನಾಯಕನಾಗಲಿದೆ. ಈ ಪ್ರಯಾಣದಲ್ಲಿ ಕೀಸೈಟ್ ಪಾಲುದಾರರಾಗಿ ಕಾರ್ಯನಿರ್ವಹಿಸುವುದು ನಮ್ಮ ಹೆಮ್ಮೆ.

”ಕೀಸೈಟ್ ಗ್ಲೋಬಲ್ ಉಪಾಧ್ಯಕ್ಷ ಹಾನ್‍ಸಿಂಗ್ ಲಿಮ್ ಹೇಳಿದರು: “ಸೆಮಿಕಂಡಕ್ಟರ್ ಮತ್ತು ಕ್ವಾಂಟಮ್ ಎಲೆಕ್ಟ್ರಾನಿಕ್ಸ್ ಭವಿಷ್ಯದ ತಂತ್ರಜ್ಞಾನಗಳಾಗಲಿವೆ. ಸಿಯುಕೆಯಂತಹ ಸಂಸ್ಥೆಗಳ ಸಹಯೋಗದಿಂದ ಈ ಗುರಿ ಸಾಧ್ಯವಾಗಲಿದೆ. ಸಾಧನ ತಯಾರಿಕೆ ಏಷ್ಯಾಕ್ಕೆ ಸ್ಥಳಾಂತರಗೊಳ್ಳುತ್ತಿರುವುದರಿಂದ ಭಾರತಕ್ಕೆ ಜಾಗತಿಕ ಹೂಡಿಕೆ ಆಕರ್ಷಿಸಲು ಇದು ಬಲವಾಗಲಿದೆ.

”ಕುಲಸಚಿವ ಪ್ರೊ. ಆರ್. ಆರ್. ಬಿರಾದಾರ್ ಹೇಳಿದರು: “ವೈರ್‍ಲೆಸ್ ತಂತ್ರಜ್ಞಾನ ಇಂದಿನ ವಿಶ್ವ ಆರ್ಥಿಕತೆಯನ್ನು ಮರುವ್ಯಾಖ್ಯಾನಿಸಿದೆ. ಭಾರತವು 2030ರೊಳಗೆ ಆರನೇ ತಲೆಮಾರಿನ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ಇರಲು ಈ ಒಪ್ಪಂದ ಸಹಕಾರಿ.

”ಡಾ. ರಾಜೀವ್ ಜೋಶಿ ಒಪ್ಪಂದದ ಮುಖ್ಯ ಉದ್ದೇಶವನ್ನು ವಿವರಿಸಿ ಹೇಳಿದರು: “ಕ್ವಾಂಟಮ್ ತಂತ್ರಜ್ಞಾನ, ಸೆಮಿಕಂಡಕ್ಟರ್ ತಂತ್ರಜ್ಞಾನಗಳು ಹಾಗೂ ಹೈ ಫ್ರೀಕ್ವೆನ್ಸಿ ರಕ್ಷಣಾ–ಬಾಹ್ಯಾಕಾಶ ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿ ಶೈಕ್ಷಣಿಕ–ಉದ್ಯಮ ಪಾಲುದಾರಿಕೆಯನ್ನು ಬಲಪಡಿಸುವುದು ನಮ್ಮ ಗುರಿ.

”ಈ ಸಂದರ್ಭದಲ್ಲಿ ಕೀಸೈಟ್ ಟೆಕ್ನಾಲಜೀಸ್ ಸಿಯುಕೆಗೆ 1.56 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತು. ಇದನ್ನು ಬೋಧನಾ ಕಿಟ್ ಅಭಿವೃದ್ಧಿ ಘಟಕ ಹಾಗೂ ಅಪ್‍ಸ್ಕಿಲ್ಲಿಂಗ್ ಕೇಂದ್ರ ಸ್ಥಾಪನೆಗೆ ಬಳಸಲಾಗಲಿದೆ.

ಕಾರ್ಯಕ್ರಮದಲ್ಲಿ ಕೇಂದ್ರದ ಸಂಯೋಜಕ ಡಾ. ವಿರೇಶ ಕಸ್ಬೆಗೌಡರ್ ಸ್ವಾಗತಿಸಿದರು. ಡಾ. ಭರತ್ ಕುಮಾರ್, ಡಾ. ಪರಮೇಶ, ಡಾ. ಪಾಂಡುರಂಗ ಪ್ರಸಾದ್, ಡಾ. ರಾಘವೈಹ್, ಡಾ. ಎ. ಎನ್. ವಿಜಯಕುಮಾರ್, ಹಣಕಾಸು ಅಧಿಕಾರಿ ಶ್ರೀ ರಾಮದೊರೈ ಹಾಗೂ ಇತರ ಅಧ್ಯಾಪಕರು ಉಪಸ್ಥಿತರಿದ್ದರು.

Join WhatsApp

Join Now

Leave a Comment

error: Content is Protected!