ಆಳಂದ: “ಅಣೆಕಟ್ಟುಗಳು, ಸೇತುವೆಗಳು, ಉಕ್ಕಿನ ಸ್ಥಾವರಗಳು ಹಾಗೂ ಪ್ರವಾಹ ನಿಯಂತ್ರಣ ವ್ಯವಸ್ಥೆಗಳನ್ನು ನಿರ್ಮಿಸುವ ಮೂಲಕ ಸುಸ್ಥಿರ ಭಾರತದ ಕನಸನ್ನು ನನಸು ಮಾಡಿದ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಯೊಬ್ಬ ಎಂಜಿನಿಯರ್‌ಗೆ ಆದರ್ಶ. ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅವರ ಮಾರ್ಗವನ್ನು ಅನುಸರಿಸಿ ಜಗತ್ತಿನಲ್ಲಿ ಅದ್ಭುತಗಳನ್ನು ಸೃಷ್ಟಿಸಬೇಕು,” ಎಂದು ಸಿಯುಕೆಯ ಗೌರವಾನ್ವಿತ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ವಿಶ್ವೇಶ್ವರಯ್ಯ ಜಯಂತಿಯ ಅಂಗವಾಗಿ ಸಿಯುಕೆಯ ಇಂಜಿನಿಯರಿಂಗ್ ನಿಕಾಯವು ಆಯೋಜಿಸಿದ್ದ ತಾಂತ್ರಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮನ್ವಯವಾದ ಒಂದು ವಾರದ ಅಭಿಯಂತರೋತ್ಸವ 2025 ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಸಂದೇಶ ನೀಡಿದ ಅವರು, “ಪ್ರಾಯೋಗಿಕ ಜ್ಞಾನವನ್ನು ಸಂಪಾದಿಸಲು ವಿಶ್ವವಿದ್ಯಾಲಯದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಪ್ರಯೋಗಾಲಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವಿಶ್ವೇಶ್ವರಯ್ಯ ವಿನಯಶೀಲರೂ ಶ್ರೇಷ್ಠರೂ ಆಗಿದ್ದರು; ಅವರ ಜೀವನವೇ ಎಂಜಿನಿಯರ್‌ಗಳಿಗೆ ದಾರಿ ತೋರಿಸುವ ಮಾದರಿಯಾಗಿದೆ,” ಎಂದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ ಇಸ್ಕಾನ್ ಯುವ ವೇದಿಕೆಯ ಬೆಂಗಳೂರಿನ ಎಸ್.ಜಿ. ಹರಿದಾಸ್ ಹಾಗೂ ಸಿಯುಕೆಯ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ಸಹ ವಿದ್ಯಾರ್ಥಿಗಳಿಗೆ ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಕ್ಯಾಂಪಸ್‌ನಲ್ಲಿ ಗಿಡ ನೆಡುವ ಹಾಗೂ ಹಸಿರು ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ “ಪ್ರಾಜೆಕ್ಟ್ ಎಕ್ಸ್‌ಪೋ” ಮತ್ತು “ಆಪರೇಷನ್ ಸಿಂಧೂರ್” ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಸರ್ಕಾರಿ ಶಾಲೆ ಸುಂಟ್ನೂರ್, ಮೌಂಟ್ ಕಾರ್ಮೆಲ್ ಶಾಲೆ, ಸರ್ಕಾರಿ ಶಾಲೆ ಕಡಗಂಚಿ ಹಾಗೂ ಅಜೀಂ ಪ್ರೇಮ್‌ಜಿ ಶಾಲೆಯ ವಿದ್ಯಾರ್ಥಿಗಳು ಈ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳ ತಾಂತ್ರಿಕ ಮಾದರಿಗಳಲ್ಲಿ ಐಒಟಿ ಆಧಾರಿತ ಹೋಮ್ ಆಟೊಮೇಷನ್ ಸಿಸ್ಟಮ್, ಕೃತಕ ಬುದ್ಧಿಮತ್ತೆ ಬಳಸಿದ ರೋಬೋಟಿಕ್ ಆರ್ಮ್, ಮೋಶನ್ ಸೆನ್ಸಿಂಗ್ ವಾಹನ, ರೆಟಿನಲ್ ವೆಸೆಲ್ ಸೆಗ್ಮೆಂಟೇಶನ್ ಮಾದರಿ ಮತ್ತು ಆರ್‌ಎಫ್‌ಐಡಿ ಆಧಾರಿತ ಡೋರ್ ಲಾಕಿಂಗ್ ಸಿಸ್ಟಮ್ ಪ್ರಮುಖ ಆಕರ್ಷಣೆಗಳಾಗಿದ್ದವು. “ಆಪರೇಷನ್ ಸಿಂಧೂರ್” ವಿಭಾಗದಲ್ಲಿ ಐಎನ್‌ಎಸ್ ವಿಕ್ರಾಂತ್, ರಫೇಲ್, ಬ್ರಹ್ಮೋಸ್, ಎಸ್-400, ಅರ್ಜುನ್ ಟ್ಯಾಂಕ್ ಮತ್ತು ಎಂಕ್ಯೂ-9 ಮಾದರಿಗಳು ಗಮನ ಸೆಳೆದವು. ಹ್ಯಾಕಥಾನ್ ಮತ್ತು ಕೋಡಿಂಗ್ ಕ್ವಿಜ್ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಉತ್ಸಾಹವನ್ನು ಹೆಚ್ಚಿಸಿದವು. ಇತರ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳೂ ಇದರಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಡೀನ್ ಪ್ರೊ. ಪರಮೇಶ, ಪ್ರೊ. ವೀರೇಶ ಕಸಬೇಗೌಡರ, ಪ್ರೊ. ಅಮರೇಂದ್ರ ಮತ್ಸ, ಡಾ. ಲಾಯಕ ಅಲಿ, ಡಾ. ಸಂಗಮೇಶ, ಡಾ. ಅರುಣಕುಮಾರ ಪಾಟೀಲ್, ಡಾ. ನಶಿರಿಂಗ್, ಡಾ. ಮಲ್ಲಿಕಾರ್ಜುನ, ಡಾ. ಉದಯ್ ಪಾಟೀಲ್ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.









