ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಗಣತಿ ಕಾರ್ಯದಲ್ಲಿ ಶಿಕ್ಷಕರ ಸೆಳವಿನಿಂದ ಶಾಲೆ ಸ್ಥಗಿತ – ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯ ಅಲೆಮಾರಿತನದಲ್ಲಿ.

On: October 15, 2025 12:33 PM

ಆಳಂದ: ತಾಲ್ಲೂಕಿನ ಅನೇಕ ಗ್ರಾಮೀಣ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಮತ್ತು ಮೂಲಭೂತ ಸೌಕರ್ಯಗಳ ಅಭಾವದಿಂದಾಗಿ ಶಿಕ್ಷಣದ ಗುಣಮಟ್ಟ ಹದಗೆಟ್ಟಿದೆ ಎನ್ನುವ ದೂರಿಗಳು ಹೆಚ್ಚುತ್ತಿವೆ.

ದಸರಾ ರಜೆಯ ನಂತರ ಶಾಲೆಗಳು ಪುನರಾರಂಭವಾಗಬೇಕಿದ್ದರೂ ಸರ್ಕಾರ ಕೈಗೆತ್ತಿಕೊಂಡಿರುವ ಕುಟುಂಬಗಳ ಗಣತಿ ಕಾರ್ಯದ ನಿಮಿತ್ತ ಶಿಕ್ಷಕರು ಅದರಲ್ಲಿ ತೊಡಗಿಕೊಂಡಿರುವ ಕಾರಣ ಮತ್ತೆ ಶಾಲಾ ರಜೆ ವಾತಾವರಣ ನಿರ್ಮಾಣಗೊಂಡಿದೆ. ವಿದ್ಯಾರ್ಥಿಗಳು ಅಲೆದಾಡುವ ಪರಿಸ್ಥಿತಿ ಉಂಟಾಗಿ ಪಾಠ್ಯಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಉಪಮುಖ್ಯಮಂತ್ರಿಗಳು “ರಜೆ ಅವಧಿಯನ್ನು ಸರಿಪಡಿಸಲಾಗುವುದು” ಎಂದಿದ್ದರೂ, ಶಿಕ್ಷಕರ ಕೊರತೆ ಮತ್ತು ಮೂಲಸೌಕರ್ಯ ಸಮಸ್ಯೆಗಳು ಇನ್ನೂ ಪರಿಹಾರವಾಗಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಲವೆಡೆ ಒಂದೇ ಅಥವಾ ಇಬ್ಬರು ಶಿಕ್ಷಕರು ಸಂಪೂರ್ಣ ಶಾಲೆಯ ಹೊಣೆ ಹೊತ್ತಿರುವ ಸ್ಥಿತಿ ನಿರ್ಮಾಣಗೊಂಡಿದೆ. ಗಣಿತ, ಇಂಗ್ಲಿಷ್ ಮತ್ತು ವಿಜ್ಞಾನ ವಿಷಯಗಳ ಶಿಕ್ಷಕರ ಕೊರತೆ ಹೆಚ್ಚಿನ ತೊಂದರೆ ಉಂಟುಮಾಡಿದೆ. ಕೆಲವೆಡೆ ಒಂದೇ ಶಿಕ್ಷಕ ಎಲ್ಲ ವಿಷಯಗಳ ಪಾಠ ಮಾಡಬೇಕಾಗಿ ಬಂದಿದ್ದು, ವಿದ್ಯಾರ್ಥಿಗಳ ಪಾಠ ಕಲಿಕೆ ಹಿನ್ನಡೆಯಾಗಿದೆ.

ಸಾಲೇಗಾಂವ ಮತ್ತು ಧಂಗಾಪೂರ ಶಾಲೆಗಳ ಕೈಕುಸಿತ: ಸಾಲೇಗಾಂವ ಸರ್ಕಾರಿ ಶಾಲೆಯಲ್ಲಿ ಮುಖ್ಯಶಿಕ್ಷಕರ ಮತ್ತು ನಲಿಕಲಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ತರಗತಿ ಕೋಣೆಗಳ ಕೊರತೆ ಹಾಗೂ ಶೌಚಾಲಯ ಸಮಸ್ಯೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಧಂಗಾಪೂರ ಪ್ರಾಥಮಿಕ ಶಾಲೆಯಲ್ಲಿಯೂ ಶಿಕ್ಷಕರ ಕೊರತೆ ತೀವ್ರವಾಗಿದೆ. ಅಲ್ಲಿನ ಶೌಚಾಲಯಗಳು ಬಳಸಲು ಅಸಾಧ್ಯವಾಗಿದ್ದು, ಕುಡಿಯುವ ನೀರಿನ ಅಭಾವ, ಹಾಳಾದ ಕಟ್ಟಡಗಳು ಹಾಗೂ ಕುರ್ಚಿ–ಬೆಂಚುಗಳ ಕೊರತೆ ದಿನನಿತ್ಯದ ಸಂಕಷ್ಟವಾಗಿದೆ.

ಗ್ರಾಮಸ್ಥರು ಹಾಗೂ ಪೋಷಕರು ಹಲವು ಬಾರಿ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದರೂ ಶಾಶ್ವತ ಪರಿಹಾರ ಲಭಿಸದಿರುವುದರಿಂದ ಅಸಮಾಧಾನ ಹೆಚ್ಚಾಗಿದೆ. “ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಬೇಕು, ಆದರೆ ಶಿಕ್ಷಕರಿಲ್ಲದೆ ಅವರು ಹಿಂದುಳಿಯುತ್ತಾರೆ,” ಎಂದು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ಶಿಕ್ಷಣಾಧಿಕಾರಿಗಳ ಪ್ರತಿಕ್ರಿಯೆ: “ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ನವೆಂಬರ್ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಹೆಚ್ಚುವರಿ ಶಿಕ್ಷಕರನ್ನು ಬೇರೆಡೆ ನಿಯೋಜಿಸುವ ಕಾರ್ಯ ಆಗುತ್ತಿದೆ. ತಾತ್ಕಾಲಿಕವಾಗಿ ಶೈಕ್ಷಣಿಕ ಚಟುವಟಿಕೆ ನಿರ್ವಹಣೆಗೆ ವ್ಯವಸ್ಥೆ ಮಾಡಲಾಗಿದೆ. ತಾಲ್ಲೂಕಿನ 85 ಶಾಲೆಗಳ 218 ಕೊಠಡಿಗಳು ಮಳೆಯಿಂದ ಹಾನಿಗೊಳಗಾಗಿದ್ದು, ದುರಸ್ತಿ ಕಾರ್ಯಗಳಿಗೆ ಮೇಲಾಧಿಕಾರಿಗಳಿಗೆ ವರದಿ ನೀಡಲಾಗಿದೆ,” ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ ಮಾಹಿತಿ ನೀಡಿದರು.

ಪರಿಹಾರವಿಲ್ಲದಿದ್ದರೆ ಹೋರಾಟ ಎಚ್ಚರಿಕೆ: “ಶಿಕ್ಷಣ ವ್ಯವಸ್ಥೆ ಕುಂಠಿತವಾಗಿದೆ. ಕೆಲವು ಶಾಲೆಗಳಿಂದ ಶಿಕ್ಷಕರನ್ನು ವರ್ಗಾಯಿಸಲಾಗುತ್ತಿದೆ. ಉದಾಹರಣೆಗೆ, ಮದಗುಣಕಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರೂ ಶಿಕ್ಷಕರನ್ನು ಕಳುಹಿಸಲಾಗಿದೆ. ಮಳೆಯಿಂದ ಕಟ್ಟಡಗಳು ಸೋರಿಕೆಯಾಗಿದ್ದರೂ ದುರಸ್ತಿ ಆಗಿಲ್ಲ. ಝಳಕಿ (ಬಿ) ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯವೇ ಇಲ್ಲ; ಝಳಕಿ (ಕೆ) ಪ್ರೌಢಶಾಲೆಯಲ್ಲಿ ಶಿಕ್ಷಕರ ಕೊರತೆ ಗಂಭೀರವಾಗಿದೆ. ಶಾಸಕರನ್ನು ಭೇಟಿಯಾದರೂ ಸಮಸ್ಯೆ ಬಗೆಹರಿದಿಲ್ಲ. ಗ್ರಾಮೀಣ ಶಿಕ್ಷಣ ಸುಧಾರಿಸಲು ಹೋರಾಟವೇ ದಾರಿ,” ಎಂದು ನಮ್ಮ ಕರ್ನಾಟಕ ಸೇನೆಯ ತಾಲೂಕು ಅಧ್ಯಕ್ಷ ಮಹಾಂತೇಶ ಸಣ್ಣಮನಿ ಎಚ್ಚರಿಸಿದರು.

ತಜ್ಞರ ಅಭಿಪ್ರಾಯ: ಶಿಕ್ಷಣ ತಜ್ಞರು ಹೇಳುವಂತೆ, ಗ್ರಾಮೀಣ ಮಕ್ಕಳಿಗೆ ನಗರ ಮಟ್ಟದ ಸ್ಪರ್ಧಾತ್ಮಕ ಶಿಕ್ಷಣ ದೊರಕಬೇಕಾದರೆ ಶಿಕ್ಷಕರ ಹಾಜರಾತಿ, ಮೂಲಸೌಕರ್ಯ ಮತ್ತು ಸೌಲಭ್ಯಗಳ ವೃದ್ಧಿ ಅತ್ಯಗತ್ಯ. ಸರ್ಕಾರ ತಕ್ಷಣ ಕ್ರಮ ಕೈಗೊಂಡರೆ ಮಾತ್ರ ಪರಿಸ್ಥಿತಿ ಸುಧಾರಿಸಬಹುದು ಎಂದು ತಜ್ಞರು ಸೂಚಿಸಿದ್ದಾರೆ.

Join WhatsApp

Join Now

Leave a Comment

error: Content is Protected!