ಆಳಂದ: ತಾಲೂಕು ಸೇರಿ ಜಿಲ್ಲೆಯ ಬಾಕಿ ಉಳಿದಿರುವ ಬೆಳೆ ವಿಮೆ ಪರಿಹಾರ ಹಣ ಬಿಡುಗಡೆ ಮಾಡುವಂತೆ ರಾಜ್ಯದ ನೀತಿ ಆಯೋಗದ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಆರ್. ಪಾಟೀಲ ಅವರು ನಿನ್ನೆ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಒತ್ತಾಯಿಸಿದರು.
ಜಿಲ್ಲೆಯ ರೈತರು ಬೆಳೆ ನಷ್ಟದಿಂದ ಸಂಕಷ್ಟ ಅನುಭವಿಸುತ್ತಿರುವುದರಿಂದ ವಿಮೆ ಹಣ ಬಿಡುಗಡೆ ತಡವಾದರೆ ಕೃಷಿ ಕ್ಷೇತ್ರದಲ್ಲಿ ಆರ್ಥಿಕ ಬಿಕ್ಕಟ್ಟು ಗಂಭೀರವಾಗುವುದೆಂದು ಪಾಟೀಲ ಅವರು ಎಚ್ಚರಿಸಿದರು.
ವಿಮೆ ಹಣ ತಡವಾದ ಪರಿಣಾಮ ರೈತರು ಸಾಲದ ಭಾರದಿಂದ ಆತ್ಮಹತ್ಯೆಗೀಡಾಗುವ ಭೀತಿ, ಕೃಷಿ ಚಟುವಟಿಕೆಗಳಲ್ಲಿ ಕುಂಠಿತ ಸ್ಥಿತಿ ಎದುರಾಗುವ ಮೊದಲೇ ಹಣ ಬಿಡುಗಡೆಗೆ ತಾಂತ್ರಿಕ ಕಾರಣಗಳನ್ನು ನಿವಾರಿಸಲು ತಕ್ಷಣ ಕ್ರಮ ಕೈಗೊಂಡು ಬಾಕಿ ಉಳಿದಿರುವ ಮೊತ್ತವನ್ನು ಹಂತ ಹಂತವಾಗಿ ಬಿಡುಗಡೆ ಮಾಡುವ ಬದಲು ಒಟ್ಟಾರೆ ಪರಿಹಾರ ನೀಡುವಂತೆ ಸಲಹೆ ನೀಡಿದರು.
ಬಿ.ಆರ್. ಪಾಟೀಲ ಅವರು ಮುಖ್ಯ ಕಾರ್ಯದರ್ಶಿಗೆ, ಆರ್ಥಿಕ ಇಲಾಖೆಯ ಮೇಲೆ ನೇರ ಒತ್ತಡ ಹೇರುವಂತೆ ಸೂಚಿಸಿದರು. “ರೈತರು ಈಗಲೇ ಪರಿಹಾರ ನಿರೀಕ್ಷಿಸುತ್ತಿದ್ದಾರೆ. ಹಣ ಬಿಡುಗಡೆಗೆ ಹೆಚ್ಚಿನ ವಿಳಂಬ ರೈತರ ಜೀವಿತಕ್ಕೆ ಅಪಾಯ,” ಎಂದು ಎಚ್ಚರಿಸಿದರು.
ಅದರ ಜೊತೆಗೆ, ಮುಂದಿನ ದಿನಗಳಲ್ಲಿ ಮಳೆ ಹಾನಿ ವರದಿಗಳ ಆಧಾರದ ಮೇಲೆ ತಾತ್ಕಾಲಿಕ ಪರಿಹಾರ ಬಿಡುಗಡೆ ಮಾಡುವ ವ್ಯವಸ್ಥೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ರೂಪಿಸುವ ಬಗ್ಗೆ ಮೆಲುಕು ಹಾಕಲಾಯಿತು. ಮುಖ್ಯ ಕಾರ್ಯದರ್ಶಿ ಆರ್ಥಿಕ ಇಲಾಖೆಗೆ ತಕ್ಷಣ ಸೂಚನೆ ನೀಡುವ ಭರವಸೆ ನೀಡಿದರೆಂದು ಮೂಲಗಳು ತಿಳಿಸಿವೆ.









