ಆಳಂದ: 2025-26 ನೇ ಸಾಲಿನ ಮುಂಗಾರು ಮಳೆಯಿಂದಾಗಿ ಕೃಷಿಯಲ್ಲಿ ಸಂಭವಿಸಿದ ಭಾರೀ ನಷ್ಟಕ್ಕೆ ಪರಿಹಾರವನ್ನು SDRAF ಮತ್ತು NDRF ಮಾನದಂಡಗಳಿಗೆ ಅನುಸಾರವಾಗಿ ಹಾಗೂ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದರು.
ಗುರುವಾರ ಪಟ್ಟಣದ ಬಸ್ ನಿಲ್ದಾಣದ ಎದುರು ಆಳಂದ ಮಂಡಲ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸುಭಾಷ ಗುತ್ತೇದಾರ್ ನೇತೃತ್ವದಲ್ಲಿ ಪಕ್ಷದ ಮುಖಂಡರು ಸರ್ಕಾರದ ವಿರುದ್ಧ ತೀಕ್ಷ್ಣ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಸುಭಾಷ ಆರ್. ಗುತ್ತೇದಾರ್ ಮಾತನಾಡಿ, “ಈ ಸಾಲಿನ ಎಲ್ಲಾ ಬೆಳೆಗಳಿಗೆ ರಾಜ್ಯ ಸರ್ಕಾರ ತಕ್ಷಣ ಬೆಂಬಲ ಬೆಲೆಯಲ್ಲಿ ಖರೀದಿ ಆರಂಭಿಸಬೇಕು” ಎಂದು ಒತ್ತಾಯಿಸಿದರು. ಹೈನುಗಾರಿಕೆ ಮಾಡುವ 24 ಲಕ್ಷ ಹಾಲು ಉತ್ಪಾದಕ ರೈತರು ಪಶು ಆಹಾರದ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿದ್ದಾರೆ. ಕಾಂಗ್ರೆಸ್ ಸರ್ಕಾರವು ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು ರೂ.5 ರಿಂದ ರೂ.7ಕ್ಕೆ ಹೆಚ್ಚಿಸಬೇಕು ಹಾಗೂ ಬಾಕಿ ಉಳಿದಿರುವ ರೂ.620 ಕೋಟಿ ರೂಪಾಯಿ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
“ಸರ್ಕಾರ ನೀಡಿರುವ ಪರಿಹಾರ ಕೇವಲ ರೈತರ ಕಣ್ಣೆರೆಯಿಸುವ ತಂತ್ರ. ಇದು ಹಾನಿಗೊಳಗಾದ ಯಾವುದೇ ಬೆಳೆಗೂ ಸಾಲದು” ಎಂದು ಆರೋಪಿಸಿದರು. ಮೆಕ್ಕೆಜೋಳ, ಭತ್ತ, ರಾಗಿ, ತೊಗರಿ, ಈರುಳ್ಳಿ ಸೇರಿದಂತೆ ಏಕದಳ, ದ್ವಿದಳ ಹಾಗೂ ತೋಟಗಾರಿಕಾ ಬೆಳೆಗಳನ್ನೂ ಬೆಂಬಲ ಬೆಲೆಯಲ್ಲಿ ಖರೀದಿಸಲು ಪ್ರತಿಯೊಂದು ಗ್ರಾಮ ಪಂಚಾಯಿತಿ ಅಥವಾ ಸಹಕಾರಿ ಸಂಘ ಮಟ್ಟದಲ್ಲಿ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹಾಗೂ ಸಂಪರ್ಕ ವ್ಯವಸ್ಥೆ ಸುಧಾರಣೆ, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ರೂ.10 ಲಕ್ಷ ಸಾಲ ಸೌಲಭ್ಯ, ಕೃಷಿ ಸಲಕರಣೆಗಳಿಗೆ ಹೆಚ್ಚಿನ ಸಬ್ಸಿಡಿ ನೀಡುವಂತೆ ಕೂಡ ಆಗ್ರಹಿಸಲಾಯಿತು.
ಸೇಡಂ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, “ನಷ್ಟಕ್ಕೊಳಗಾದ ರೈತರಿಗೆ ಪ್ರತಿ ಎಕರೆಗೆ ರೂ.25 ಸಾವಿರ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು. ಅರಣ್ಯ ಭೂಮಿ, ಗೋಮಾಳ, ಸೊಪ್ಪಿನಬೆಟ್ಟ, ದೇವರಕಾಡು ಪ್ರದೇಶಗಳಲ್ಲಿ ಬಗರ್ ಹುಕುಂ ರೈತರಿಗೆ ನೀಡಲಾಗುತ್ತಿರುವ ಕಿರುಕುಳವನ್ನು ತಕ್ಷಣ ನಿಲ್ಲಿಸಬೇಕೆಂದೂ ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಅಶೋಕ ಬಗಲಿ ಮಾತನಾಡಿ, ಕೃಶ್ಣ ಮೇಲ್ದಂಡೆ, ಮಹಾದಾಯಿ, ಕಳಸಾ-ಬಂಡೂರಿ, ಅಪ್ಪಭದ್ರಾ, ತುಂಗಭದ್ರಾ ಅಚ್ಚುಕಟ್ಟು, ಮುತ್ತು ಕಾಲುವೆ ಸೇರಿದಂತೆ ಹಲವು ಮಹತ್ವದ ನೀರಾವರಿ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರವು ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪ್ರತಿವರ್ಷ 30 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿ ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ಅಂತ್ಯದಲ್ಲಿ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ವೀರಣ್ಣ ಮಂಗಾಣೆ, ಅಣ್ಣಾರಾವ್ ಪಾಟೀಲ ಕವಲಗಾ, ಸಂತೋಷ ಹಾದಿಮನಿ, ಲಿಂಗರಾಜ ಬಿರಾದಾರ, ಬಸವರಾಜ ಬಿರಾದಾರ, ಚಂದ್ರಕಾಂತ ಭೂಸನೂರ, ಮಲ್ಲಿಕಾರ್ಜುನ ತಡಕಲ, ಪಂಡಿತರಾವ್ ಪಾಟೀಲ, ಆದಿನಾಥ ಹೀರಾ, ನಾಗರಾಜ ಶೇಗಜಿ, ಫಯ್ಯಾಜ್ ಪಟೇಲ್, ಶರಣು ಸರಸಂಬಿ, ಸಂದೀಪ ನಾಯಕ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.









