ಆಳಂದ: ತಲೆಯ ಮೇಲೆ 55 ಕೆ.ಜಿ. ಭಾರದ ಜೋಳದ ಚೀಲ ಹೊತ್ತುಕೊಂಡು, ದಿನಕ್ಕೆ 35 ಕಿಲೋಮೀಟರ್ ನಡೆದು, ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ ಯುವಕನೋರ್ವ ಹೊರಟಿದ್ದಾರೆ.ಈ ಯಾತ್ರೆಯಲ್ಲಿ ಒಬ್ಬ ಮುಸ್ಲಿಂ ಸಹೋದರ ಕೂಡ ಹೆಜ್ಜೆ ಹೆಜ್ಜೆಗೂ ಸಾಥ್ ನೀಡುತ್ತಿದ್ದಾರೆ!
ಹಿಂದೂ–ಮುಸ್ಲಿಂ ಒಡನಾಟದ ಈ ಚಿತ್ರ ನಿಜವಾಗಿಯೂ ಮನಸ್ಸನ್ನು ಮುಟ್ಟುತ್ತದೆ. ಭಾರತದ ಏಕತೆಯ ಸಂದೇಶವನ್ನು ನೀಡುತ್ತದೆ!
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕನಸು ಈಡೇರಿದ ಹಿನ್ನೆಲೆಯಲ್ಲಿ, ಗೋರಕ್ಷಣೆ ಬೇಡಿಕೆಯೊಂದಿಗೆ ಬಿಜಾಪುರ ಜಿಲ್ಲೆ ಆಲ್ಮೆಲ್ ತಾಲೂಕಿನ ಬಳಗಾನೂರು ಗ್ರಾಮದ 26 ವರ್ಷದ ಯುವಕ ಕೇದಾರಲಿಂಗ ಧರೆಪ್ಪ ಕುಂಬಾರ್ ಅವರು 55 ಕೆ.ಜಿ. ಜೋಳದ ಚೀಲವನ್ನು ಹೊತ್ತು 1500 ಕಿಲೋಮೀಟರ್ ಪಾದಯಾತ್ರೆ ಕೈಗೊಂಡಿದ್ದಾರೆ.
ಜನವರಿ 3ರ ಮಧ್ಯಾಹ್ನ ಬಳಗಾನೂರಿನಿಂದ ಹೊರಟ ಯಾತ್ರೆಯು ದಿನಕ್ಕೆ ಸುಮಾರು 35 ಕಿ.ಮೀ. ದೂರ ಕ್ರಮಿಸುತ್ತಿದ್ದು, ಜನವರಿ 5ರ ಸೋಮವಾರ ಸಂಜೆ ಆಳಂದ ಪಟ್ಟಣದ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ವಾಸ್ತವ್ಯ ಮಾಡಿಕೊಂಡ ಕೇದಾರಲಿಂಗ ಕುಂಬಾರ್ ಅವರಿಗೆ ವಿಶೇಷ ಸನ್ಮಾನ ನಡೆಯಿತು.

ಈ ಸತ್ಕಾರ್ಯದಲ್ಲಿ ಮಠದ ಟ್ರಸ್ಟ್ ಕಾರ್ಯದರ್ಶಿ ಹಾಗೂ ಹಿರಿಯ ಪತ್ರಕರ್ತ ಮಹಾದೇವ ವಡಗಾಂವ ಅವರ ಉಪಸ್ಥಿತಿಯಲ್ಲಿ ಕುಂಬಾರ ಸಮಾಜದ ಅಧ್ಯಕ್ಷ ಶರಣು ಟಿ. ಕುಂಬಾರ್, ಶರಣು ಬಿ. ಕುಂಬಾರ್, ಲಿಂಗರಾಜ ಎಂ. ಪಾಟೀಲ, ಮಲ್ಲು ಕುಂಬಾರ್, ಜಗನ್ನಾಥ ಕುಂಬಾರ್, ವಿಜಯಕುಮಾರ್ ಕುಂಬಾರ್, ನ್ಯಾಯವಾದಿ ಮಹಾದೇವ ಹತ್ತಿ, ಡಾ. ಅವಿನಾಶ ದೇವನೂರು, ಮಹೇಶ್ ಸಾಕ್ರೆ, ಶಾಣು ಅಣ್ಣಪ್ಪ ವಣದೆ ಸೇರಿದಂತೆ ಅನೇಕ ಯುವಕರು, ಮಕ್ಕಳು ಹಾಗೂ ತಾಯಂದಿರು ಭಾಗವಹಿಸಿ ಶಾಲು ಹೊದಿಸಿ ಯಾತ್ರೆಗೆ ಶುಭಕೋರಿದರು.
ಯಾತ್ರೆಯುದ್ದಕ್ಕೂ ಜೋಳದ ಚೀಲ ಹೊತ್ತು ಪಾದಯಾತ್ರೆ ಕೈಗೊಳ್ಳುತ್ತಿರುವ ಕೇದಾರಲಿಂಗ ಕುಂಬಾರ್ ಅವರ ಜೊತೆಗೆ ಬಳಗಾನೂರಿನ ವಿವೇಕಾನಂದ ಗುರುಣ್ಣ ಕುಂಬಾರ್, ಅರವಿಂದ ಕುರದಾಳ್ ಹಾಗೂ ಮುಸ್ಲಿಂ ಸಮುದಾಯದ 60 ವರ್ಷದ ನೂರ್ಸಾಬ್ ನದಾಫ್ ಅವರು ಹೆಜ್ಜೆ ಹೆಜ್ಜೆಗೂ ಸಾಥ್ ನೀಡುತ್ತಿದ್ದಾರೆ. ಸೋಮವಾರ ವಾಸ್ತವ್ಯದ ಬಳಿಕ ಮಂಗಳವಾರ ಬೆಳಗಿನ ಜಾವ ಉಮರ್ಗ ದಿಕ್ಕಿನಲ್ಲಿ ಯಾತ್ರೆ ಮುಂದುವರಿದಿದೆ.
ಗೋರಕ್ಷಣೆಗಾಗಿ ಯಾತ್ರೆ:“ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಂಕಲ್ಪ ಈಡೇರಿದ ಹಿನ್ನೆಲೆಯಲ್ಲಿ ಹಾಗೂ ಮುಂದಿನ ದಿನಗಳಲ್ಲಿ ಗೋರಕ್ಷಣೆಗೆ ವಿಶೇಷ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯೊಂದಿಗೆ ಈ ಯಾತ್ರೆ ಕೈಗೊಂಡಿದ್ದೇನೆ”- ಕೇದಾರಲಿಂಗ ಕುಂಬಾರ್, ಯಾತ್ರಾರ್ಥಿ, ಬಳಗಾನೂರು









