ಆಳಂದ: ತಾಲೂಕು ಕೇಂದ್ರದ ಬಸ್ ನಿಲ್ದಾಣದ ಎದುರು ಭಾಗದಲ್ಲಿ ಚರಂಡಿ ನೀರು ನಿಂತುಕೊಂಡು ದುರ್ವಾಸನೆ ಹರಡುತ್ತಿರುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಸರ ಕಲುಷಿತಗೊಂಡಿದ್ದು, ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಬಸ್ ನಿಲ್ದಾಣದ ಎದುರಿನ ರಸ್ತೆ ಭಾಗದಲ್ಲಿ ಚರಂಡಿ ವ್ಯವಸ್ಥೆಯನ್ನು ಮುಚ್ಚಿ ಹಾಕಿರುವುದರಿಂದ ನೀರು ಸರಿಯಾಗಿ ಹರಿದುಹೋಗದೆ, ರಸ್ತೆಯ ಮೇಲೆಯೇ ನಿಂತುಕೊಂಡು ಕಸ ಮತ್ತು ಕಲುಷಿತ ನೀರು ಹರಿಯುತ್ತಿದೆ. ಇದರ ಪರಿಣಾಮವಾಗಿ ಸುತ್ತಮುತ್ತಲಿನ ವ್ಯಾಪಾರಸ್ಥರು, ಪ್ರಯಾಣಿಕರು ಹಾಗೂ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
“ಪ್ರತಿದಿನ ಬಸ್ ನಿಲ್ದಾಣಕ್ಕೆ ಬರುವ ನೂರಾರು ಜನರು ಮೂಗು ಮುಚ್ಚಿಕೊಂಡು ಹಾದುಹೋಗುವಂತಾಗಿದೆ. ದುರ್ವಾಸನೆಯಿಂದ ಉಸಿರಾಟದ ಸಮಸ್ಯೆ ಹಾಗೂ ಇತರ ಆರೋಗ್ಯ ತೊಂದರೆಗಳು ಎದುರಾಗುತ್ತಿವೆ” ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಸಮಸ್ಯೆ ಹಲವು ತಿಂಗಳಿಂದಲೂ ಮುಂದುವರಿದಿದ್ದರೂ, ಪುರಸಭೆ ಅಧಿಕಾರಿಗಳು ಹಾಗೂ ನೈರ್ಮಲ್ಯ ನಿರೀಕ್ಷಕರು ಯಾವುದೇ ಕ್ರಮ ಕೈಗೊಳ್ಳದೇ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜನರು ಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ, ನೀರು ಸರಿಯಾಗಿ ಹರಿಯುವಂತೆ ಮಾಡುವಂತೆ ಆಗ್ರಹಿಸಿದ್ದಾರೆ.
ಅದರ ಜೊತೆಗೆ, ಬಂಡಿ ವ್ಯಾಪಾರಿಗಳು ರಸ್ತೆ ಪಕ್ಕದಲ್ಲೇ ತ್ಯಾಜ್ಯ ವಸ್ತುಗಳನ್ನು ಎಸೆಯುತ್ತಿರುವುದು, ಕಸ ಮತ್ತು ಕೊಳಚೆ ನೀರು ಚರಂಡಿಗೆ ಸೇರಿ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ವ್ಯಾಪಾರಿಗಳಿಗೆ ಸ್ವಚ್ಛತೆ ಬಗ್ಗೆ ಅರಿವು ಇಲ್ಲದಂತೆಯೇ, ಕಸ ನಿರ್ವಹಣೆಯಲ್ಲಿಯೂ ಶಿಸ್ತು ಕೊರತೆಯಿದೆ ಎಂದು ಸಾರ್ವಜನಿಕರು ಟೀಕಿಸಿದ್ದಾರೆ.
ದೀಪಾವಳಿ ಹಬ್ಬದ ಮುನ್ನವೇ ಈ ಅವ್ಯವಸ್ಥೆ ಆರಂಭವಾದರೂ, ವಾರ ಕಳೆದರೂ ಚರಂಡಿ ವಿಲೇವಾರಿ ಕಾರ್ಯ ನಡೆಯದೇ ಇರುವುದು ವಿಪರ್ಯಾಸವಾಗಿದೆ. ಪಟ್ಟಣದ ಪ್ರಮುಖ ಬಸ್ ನಿಲ್ದಾಣ ಎದುರು ಇಂತಹ ಪರಿಸ್ಥಿತಿ ಮುಂದುವರಿದಿರುವುದು ಪಟ್ಟಣದ ಕಳಂಕವಾಗಿದೆ ಎಂದು ನಾಗರಿಕರು ಕಳವಳ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಗಳಿಂದ ತಕ್ಷಣ ಕ್ರಮ ಕೈಗೊಂಡು, ಚರಂಡಿ ನೀರಿನ ವಿಲೇವಾರಿ ಹಾಗೂ ಸ್ವಚ್ಛತೆ ಕಾರ್ಯಕ್ಕೆ ಆದ್ಯತೆ ನೀಡುವಂತೆ ಒತ್ತಾಯಿಸಿದ್ದಾರೆ.









