ಆಳಂದ: ತಾಲೂಕಿನ ಅನೇಕ ಸರ್ಕಾರಿ ಶಾಲೆಗಳು ನಿರಂತರ ಮಳೆಯಿಂದಾಗಿ ಹಾನಿಗೊಳಗಾಗಿದ್ದು, 218 ಶಾಲಾ ಕೋಣೆಗಳು ತುರ್ತು ದುರಸ್ತಿಗಾಗಿ ಕಾಯುತ್ತಿವೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ನಿರ್ಮಿಸಲಾದ ಕಟ್ಟಡಗಳಲ್ಲಿ ಗುಣಮಟ್ಟದ ಕೊರತೆಯಿಂದ ಶಿಥಿಲಾವಸ್ಥೆ ಎದುರಾಗಿರುವುದು ಆತಂಕದ ಸಂಗತಿ.
ತಾಲೂಕಿನ ಒಟ್ಟು 305 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿನ 2359 ಕೋಣೆಗಳಲ್ಲಿ 218 ಕೋಣೆಗಳು ಮಳೆಯಿಂದ ಅವ್ಯವಸ್ಥೆಯಾಗಿ ಬಿಟ್ಟಿದ್ದು, ಮಳೆನೀರು ಸೋರಿಕೆ ಕಂಡುಬರುತ್ತಿದೆ. ಧುತ್ತರಗಾಂವ ಸರ್ಕಾರಿ ಶಾಲೆಯಲ್ಲಿ ಮಳೆನೀರು ಸೋರಿಕೆಯಿಂದ ಒಂದು ದಿನ ರಜೆ ಘೋಷಿಸಲಾತು ಎನ್ನಲಾಗಿದ್ದರು ರಜ್ಜೆ ನೀಡಿಲ್ಲವೆನ್ನಲಾಗಿದೆ. ಆದರೆ ಇದಕ್ಕೆ ಹೊರತಾಗಿಯೂ ಧಂಗಾಪೂರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ ಸಾಲಿನಲ್ಲಿ ಕಟ್ಟಡದ ನಿರ್ವಹಣೆ ನಡೆಸಿದರೂ, ಈ ವರ್ಷ ಮತ್ತೆ ನೀರು ಸೋರಿಕೆಯಾಗಿದೆ. ಇದರಿಂದ ವಿದ್ಯಾರ್ಥಿಗಳು ಆರು ದಿನಗಳವರೆಗೆ ಪಾಠವಿಲ್ಲದೆ ಕಾಲಹರಣ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುಣಮಟ್ಟದ ಕೊರತೆಯಿಂದ ಆತಂಕ: 20 ವರ್ಷಗಳ ಹಿಂದೆ ನಿರ್ಮಿಸಲಾದ ಕಟ್ಟಡಗಳು ಇನ್ನೂ ಬಲವಾಗಿದ್ದರೂ, ನಂತರ ನಿರ್ಮಿಸಿದ ಕಟ್ಟಡಗಳು ಕೆಲವು ವರ್ಷಗಳಲ್ಲೇ ಹಾಳಾಗಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಆಳಂದದ ಸರ್ಕಾರಿ ಕನ್ಯಾ ಪ್ರೌಢಶಾಲೆಯ ಹೊಸ ಕೋಟೆಗಳಲ್ಲಿ ಮಳೆನೀರು ಸೋರಿಕೆ, ಗೋಡೆ ಬಿರುಕುಗಳು ಮಕ್ಕಳ ಮತ್ತು ಬೋಧಕರಲ್ಲಿ ಭಯ ಹುಟ್ಟಿಸಿವೆ.
ಶಾಲೆಗಳ ಮುಚ್ಚುವಿಕೆ ಹೆಚ್ಚಳ: ಮಕ್ಕಳ ಸಂಖ್ಯೆಯಲ್ಲಿ ಕುಸಿತದಿಂದಾಗಿ 2 ಶಾಲೆಗಳು ಈಗಾಗಲೇ ಮುಚ್ಚಲ್ಪಟ್ಟಿವೆ. ಶಾಸಕರ ಸ್ವಗ್ರಾಮ ಸರಸಂಭಾ ಸೇರಿದಂತೆ ಹಲವೆಡೆ ಶಾಲೆಗಳ ಬಾಗಿಲು ಬೀಗ ಹಾಕಲಾಗಿದೆ. ಗೈಮಾಳ ತಾಂಡದಲ್ಲಿ ಒಂದೇ ವಿದ್ಯಾರ್ಥಿ ಇರುವ ಕಾರಣ ತಾತ್ಕಾಲಿಕವಾಗಿ ಒಬ್ಬ ಶಿಕ್ಷಕರನ್ನು ನಿಯೋಜಿಸಲಾಗಿದೆ. ತಾಲ್ಲೂಕಿನಲ್ಲಿ ಎರಡು ಶೂನ್ಯ ಶಾಲೆಗಳೂ ಗುರುತಿಸಲಾಗಿದೆ.
ಇಲಾಖೆಯ ಮೂಲಗಳ ಪ್ರತಿಕ್ರಿಯೆ: “218 ಕೋಣೆಗಳ ದುರಸ್ತಿಗಾಗಿ ಕ್ರಿಯಾಯೋಜನೆ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲಾಗಿದೆ. ಅನುಮೋದನೆಗಾಗಿ ನಿರೀಕ್ಷೆಯಿದೆ,” ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು. ಆದಾಗ್ಯೂ, ತಾತ್ಕಾಲಿಕ ಪರಿಹಾರಕ್ಕೆ ಮಾತ್ರ ಆದ್ಯತೆ ದೊರಕುತ್ತಿದ್ದು, ದೀರ್ಘಕಾಲೀನ ಯೋಜನೆಗಳು ಇನ್ನೂ ದೂರದಲ್ಲಿವೆ.
ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ: ಅಸುರಕ್ಷಿತ ತರಗತಿಗಳಲ್ಲಿ ಮಕ್ಕಳು ಪಾಠ ಕಲಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಸೋರಿಕೆ, ಬಿರುಕುಗಳೊಂದಿಗೆ ಪಾಠ ನಡೆಯುತ್ತಿರುವುದು ಶೈಕ್ಷಣಿಕ ಪರಿಸರವನ್ನು ಹಾಳು ಮಾಡುತ್ತಿದೆ. ತಕ್ಷಣದ ದುರಸ್ತಿ ಕಾರ್ಯ ಕೈಗೊಳ್ಳದಿದ್ದರೆ, ಗ್ರಾಮದ ಶಿಕ್ಷಣ ವ್ಯವಸ್ಥೆಯೇ ಕುಸಿತದಂಚಿನಲ್ಲಿದೆ ಎಂಬ ಎಚ್ಚರಿಕೆ ಗ್ರಾಮಸ್ಥರಿಂದ ಕೇಳಿಬರುತ್ತಿದೆ.
ನಿರ್ವಹಣೆಯ ಕೊರತೆ, ಕಟ್ಟಡ ನಿರ್ಮಾಣದ ಗುಣಮಟ್ಟದ ಕೊರತೆ, ಮಕ್ಕಳ ಸಂಖ್ಯೆ ಕುಸಿತ – ಇವೆಲ್ಲಾ ಸಮಸ್ಯೆಗಳು ಸೇರಿ ಆಳಂದ ತಾಲ್ಲೂಕಿನ ಶಿಕ್ಷಣ ವ್ಯವಸ್ಥೆಗೆ ಸವಾಲಾಗಿವೆ. ತಾಲೂಕಿನ ಶಿಕ್ಷಣ ಭವಿಷ್ಯ ಉಳಿಸಬೇಕಾದರೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಶಿಕ್ಷಣಾಧಿಕಾರಿ – ವಿ. ರಂಗಸ್ವಾಮಿ ಶಟ್ಟಿ ಪ್ರತಿಕ್ರಿಯೆ: ಮಳೆಯಿಂದ ಅಡಚಿಣೆಯಾಗಿದೆ ಕೆಲವು ಕಡೆ ಕೋಣೆ ಸೋರುತ್ತಿವೆ. ಸೋರುವ ಕೋಣೆ ಬಿಟ್ಟು ಸುರಕ್ಷಿತ ಕೋಣೆಗಳಲ್ಲಿ ಪಾಠಮಾಡಲು ಗೋಗಲ್ ಮಿಟ್ ಸಭೆಯಲ್ಲಿ ಎಚ್‍ಎಂಗಳಿಗೆ ಸೂಚಿಸಲಾಗಿದೆ. 218 ಕೋಣೆಗಳು ದುರಸ್ಥಿಗೆ ಬಂದಿವೆ. ಮಕ್ಕಳು ಹಳ್ಳ ದಾಟಿ ಬರುವ ಎರಡು ಶಾಲೆಗಳಿಗೆ ತಾತ್ಕಾಲಿಕವಾಗಿ ರಜೆ ನೀಡಲಾಗಿದೆ.









