ಆಳಂದ: ಪಟ್ಟಣದ ಮುಖ್ಯರಸ್ತೆ ಅಗಲೀಕರಣ ಕಾರ್ಯಾಚರಣೆ ಹಿನ್ನೆಲೆ, ಸಿದ್ಧಕಿ ಮಸೀದಿ ಸಮಿತಿಯ ಸಹಕಾರ ಘೋಷಣೆಯ ಬೆನ್ನೆಲೆಯೇ ಹಿಂದೂಪರ ಧಾರ್ಮಿಕ ಸಮಿತಿಗಳ ಮುಖಂಡರು ಕೂಡ ಆಡಳಿತದೊಂದಿಗೆ ಕೈಜೋಡಿಸುವುದಾಗಿ ಘೋಷಿಸಿದ್ದು, ಪಟ್ಟಣದ ಅಭಿವೃದ್ಧಿ ಕಾರ್ಯಕ್ಕೆ ಮಹತ್ವದ ಬೆಂಬಲ ವ್ಯಕ್ತವಾಗಿದೆ.
ಪಟ್ಟಣದ ಮುಖ್ಯರಸ್ತೆಯಲ್ಲಿರುವ ಅಂಬಾಭವಾನಿ ದೇವಸ್ಥಾನ ಸಮಿತಿ ಹಾಗೂ ಆರ್ಯ ಸಮಾಜ ಸಮಿತಿಗಳ ಪದಾಧಿಕಾರಿಗಳು ತಮ್ಮ ತಮ್ಮ ಸ್ಥಳಗಳಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಿ, ರಸ್ತೆ ಅಗಲೀಕರಣದ ಹಿನ್ನೆಲೆ ತಮ್ಮ ವ್ಯಾಪ್ತಿಗೆ ಬರುವ ಕಟ್ಟಡಗಳನ್ನು ತೆರವುಗೊಳಿಸಲು ಸಮ್ಮತಿ ಸೂಚಿಸಿ, ಪುರಸಭೆ ಆಡಳಿತಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಪ್ರಕಟಿಸಿದ್ದಾರೆ.
ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಪಟ್ಟಣದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಆಡಳಿತದಿಂದಲೂ ಎರಡು ತಿಂಗಳೊಳಗಾಗಿ ರಸ್ತೆ ಅಗಲೀಕರಣ ಸೇರಿ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳ್ಳಬೇಕು. ಜೊತೆಗೆ ಕೊಟ್ಟ ಜಾಗಕ್ಕೆ ಸರ್ಕಾರದಿಂದ ಯೋಗ್ಯ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಧಾರ್ಮಿಕ ಸಮಿತಿಗಳ ಮುಖಂಡರು ಮನವಿ ಮಾಡಿದರು.

ಆರ್ಯ ಸಮಾಜ ಸಮಿತಿ ಅಧ್ಯಕ್ಷ ರಾಮಕೃಷ್ಣ ಸೂರೆ, ಉಪಾಧ್ಯಕ್ಷ ದಯಾನಂದ ಕಠಾರೆ, ಕಾರ್ಯದರ್ಶಿ ಅಶ್ವಿನ ಚಿಂಚೂರೆ, ಖಜಾಂಚಿ ವಿನೋದ ಸೂರೆ ಹಾಗೂ ಮುಖಂಡರು ಸಂಜಯ ಮಿಸ್ಕಿನ್, ಪ್ರಭಾಕರ್ ಘನಾತೆ ಉಪಸ್ಥಿತರಿದ್ದರು. ಇದೇ ವೇಳೆ ದೇವಿ ಮಂದಿರದ ಮುಖಂಡರು ಬುಲಬುಲೆ, ಹಂಚಾಟೆ, ಪುಕಾಳೆ ಕಾಲೇಕರ್ ಸೇರಿದಂತೆ ಹಲವರು ಭಾಗವಹಿಸಿ, ಜಾಗದ ಕುರಿತು ಸರ್ಕಾರದಿಂದ ಪರಿಹಾರ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆರ್ಯ ಸಮಾಜ ಸಮಿತಿಯ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ಸಂಗಮೇಶ್ ಪನಶೆಟ್ಟಿ ಅವರ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದ ಸಕಾರಾತ್ಮಕ, ಸಂಯಮಿತ ಹಾಗೂ ಮಾನವೀಯ ನಿಲುವನ್ನು ಮನದಟ್ಟು ಮಾಡಿ ಪ್ರಶಂಸಿಸಿದರು. ಸಾರ್ವಜನಿಕರೊಂದಿಗೆ ಸಮನ್ವಯ ಸಾಧಿಸಿ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಸ್ತೆ ಅಗಲೀಕರಣ ಕಾರ್ಯಕ್ಕೆ ಅವರು ಕೈಗೊಂಡಿರುವ ವಿಧಾನ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ್ ಪನಶೆಟ್ಟಿ ಅವರು ಧಾರ್ಮಿಕ ಸಮಿತಿಗಳ ಮುಖಂಡರ ಸಹಮತವನ್ನು ಸ್ವಾಗತಿಸಿ, ರಸ್ತೆ ಅಗಲೀಕರಣದ ವೇಳೆ ಕಟ್ಟಡ ತೆರವುಗೊಳಿಸುವ ಮೊದಲು ಹಾಗೂ ನಂತರ ಆಡಳಿತದದಿಂದ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ, ಮಾರ್ಗದರ್ಶನ ಮತ್ತು ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಯಾವುದೇ ರೀತಿಯ ಅಸಮಾಧಾನ ಉಂಟಾಗದಂತೆ ಕಾನೂನುಬದ್ಧ ಹಾಗೂ ಮಾನವೀಯ ದೃಷ್ಟಿಕೋನದೊಂದಿಗೆ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಹೇಳಿದರು.
ಪಟ್ಟಣದ ಮುಖ್ಯರಸ್ತೆ ಅಗಲೀಕರಣ ಕಾರ್ಯ ಪೂರ್ಣಗೊಂಡಲ್ಲಿ ವಾಹನ ಸಂಚಾರ ಸುಗಮವಾಗಲಿದ್ದು, ವ್ಯಾಪಾರ ವಹಿವಾಟು ಹಾಗೂ ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದಲೂ ಹೆಚ್ಚಿನ ಅನುಕೂಲವಾಗಲಿದೆ. ಧಾರ್ಮಿಕ ಸಮಿತಿಗಳ ಈ ಸಹಕಾರಾತ್ಮಕ ನಿರ್ಧಾರವನ್ನು ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಸ್ವಾಗತಿಸಿದ್ದು, ಅಭಿವೃದ್ಧಿ ಕಾರ್ಯಕ್ಕೆ ಮತ್ತಷ್ಟು ವೇಗ ಸಿಗಲಿದೆ ಎಂದು ತಿಳಿಸಲಾಗಿದೆ.









