ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಆಳಂದದಲ್ಲಿ ಪಿಯು ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕನ್ನಡ ಸಂಸ್ಕೃತಿ ಶ್ರೀಮಂತವೆಂದು ಬಿ.ಎಚ್. ನಿರಗುಡಿ ಅಭಿಪ್ರಾಯ.

On: September 20, 2025 8:18 PM

ಆಳಂದ: “ಕಲೆ, ಸಾಹಿತ್ಯ, ಸಂಗೀತ ಹಾಗೂ ವಿಚಾರಪ್ರಜ್ಞೆ ಮೂಲಕ ಕನ್ನಡಿಗರು ನೀಡಿರುವ ಕೊಡುಗೆಗಳಿಂದ ನಮ್ಮ ಸಂಸ್ಕೃತಿ ಜಗತ್ತಿನಲ್ಲಿ ಅಪ್ರತಿಮ ಸ್ಥಾನ ಪಡೆದಿದೆ” ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಹಾಗೂ ಲೇಖಕ ಬಿ.ಎಚ್. ನಿರಗುಡಿ ಅಭಿಪ್ರಾಯಪಟ್ಟರು.

ಶನಿವಾರ ಪಟ್ಟಣದ ಸಂಬುದ್ಧ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಆಶ್ರಯದಲ್ಲಿ ನಡೆದ ಪಿಯು ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. “ಕನ್ನಡ ಭಾಷೆ ಮತ್ತು ಅದರ ಸಂಸ್ಕೃತಿಯ ಬಗ್ಗೆ ಹೆಮ್ಮೆ ಬೆಳೆಸುವುದು ಇಂದಿನ ಪೀಳಿಗೆಯ ಕರ್ತವ್ಯ. ವಿದ್ಯಾರ್ಥಿಗಳಲ್ಲಿ ಅಧ್ಯಯನ ಮನೋಭಾವ ಹಾಗೂ ತಮ್ಮ ತಾಯ್ನಾಡಿನ ಪರಂಪರೆಯ ಅರಿವು ಮೂಡಿಸಲು ಪ್ರಾಧಿಕಾರವು ಇಂತಹ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ” ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿವೈಎಸ್‌ಪಿ ತಮ್ಮರಾಯ ಪಾಟೀಲ ಮಾತನಾಡಿ, “ಮೊಬೈಲ್, ವಾಟ್ಸಪ್, ಫೇಸ್‌ಬುಕ್, ರೀಲ್ಸ್‌ ಬಳಕೆಯ ಮೋಜಿನಲ್ಲಿ ಯುವಕರು ತಮ್ಮ ಸಂಸ್ಕೃತಿಯನ್ನು ಮರೆತರೆ ಅದು ಅಪಾಯಕರ. ಪುಸ್ತಕ ಓದುವುದು, ಸಾಹಿತ್ಯ ಅಧ್ಯಯನ ಮಾಡುವುದು ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗುವುದು ವ್ಯಕ್ತಿತ್ವ ವಿಕಾಸಕ್ಕೆ ಅವಶ್ಯ” ಎಂದು ಹಿತವಚನ ಹೇಳಿದರು.

ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ರವಿಚಂದ್ರ ಕಂಟೇಕೂರೆ ತಮ್ಮ ವಿಶೇಷ ಉಪನ್ಯಾಸದಲ್ಲಿ, “ಕರ್ನಾಟಕದ ಏಕೀಕರಣ ಚಳುವಳಿ ಕನ್ನಡಿಗರನ್ನು ಒಗ್ಗೂಡಿಸಲು ನಡೆದ ಹೋರಾಟವಾಗಿತ್ತು. ಜಾತಿ–ಧರ್ಮಗಳ ಆವರಣದಲ್ಲಿ ಸೀಮಿತವಾಗದೆ, ಭಾಷೆಯ ಮೂಲಕವೇ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂಬ ಅರಿವು ಎಲ್ಲರಲ್ಲಿರಬೇಕು” ಎಂದರು.

ಕಾರ್ಯಕ್ರಮಕ್ಕೆ ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ ಅಧ್ಯಕ್ಷತೆ ವಹಿಸಿದರು. ಪ್ರಾಂಶುಪಾಲ ಸಂಜಯ ಎಸ್. ಪಾಟೀಲ, ಮಾದನ ಹಿಪ್ಪರಗಿ ಕಾಲೇಜಿನ ಪ್ರಾಚಾರ್ಯ ಶಿವಲಿಂಗಪ್ಪ ಸುತಾರ ಸೇರಿದಂತೆ ಅತಿಥಿಗಳಾಗಿ ಪ್ರಕಾಶ ಗಾಯಕವಾಡ, ವೀಣಾ ಕೊಗನೂರೆ, ಗೀತಾ ಪಾಟೀಲ, ಬಾಬುರಾವ ಚಿಕಣಿ, ಮಹಾದೇವಿ ಪಾಟೀಲ, ಜಗದೀಶ ಮುಲಗೆ, ಭೀಮಾಶಂಕರ ಅತನೂರೆ, ಸುರೇಶ ಪಾಟೀಲ, ಯೂಸೂಫ್‌ ಖಾನ್‌ ಹಾಗೂ ಅನೇಕರು ಹಾಜರಿದ್ದರು.

ಸ್ಪರ್ಧೆಯಲ್ಲಿ ಪಟ್ಟಣದ ಆರ್.ಎಂಎಲ್. ಪಿಯು ಕಾಲೇಜು ಪ್ರಥಮ ಸ್ಥಾನ, ಮಾದನ ಹಿಪ್ಪರಗಿಯ ಕುಮಾರೇಶ್ವರ ಪಿಯು ಕಾಲೇಜು ದ್ವಿತೀಯ ಸ್ಥಾನ, ಹಾಗೂ ಸರಸಂಬಾ ಸರ್ಕಾರಿ ಪಿಯು ಕಾಲೇಜು ತೃತೀಯ ಸ್ಥಾನ ಗಳಿಸಿತು. ವಿಜೇತರಿಗೆ ಪ್ರಮಾಣಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.

ಪಟ್ಟಣದ ಸರ್ಕಾರಿ ಬಾಲಕರ ಪಿಯು ಕಾಲೇಜು, ಕನ್ಯಾ ಪಿಯು ಕಾಲೇಜು ಸೇರಿದಂತೆ ಅನೇಕ ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಮೊದಲು ಬಹು ಆಯ್ಕೆ ಮಾದರಿಯ ಲಿಖಿತ ಪರೀಕ್ಷೆ ನಡೆಸಲಾಯಿತು.

Join WhatsApp

Join Now

Leave a Comment

error: Content is Protected!