ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಬೆಳೆ ವಿಮೆ ಪರಿಹಾರ ಅರ್ಜಿ ಸಲ್ಲಿಕೆಗೆ ರೈತರ ಪರದಾಟ.

On: August 30, 2025 5:26 PM

ಆಳಂದ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಪಾವತಿಸಿದ ರೈತರು ಮಳೆಯಿಂದಾಗಿ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ಪಡೆಯಲು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಹಿಂದೆ ಆನ್‍ಲೈನ್ ಮೂಲಕ ಸುಲಭವಾಗಿ ಬೆಳೆ ಹಾನಿ ಕುರಿತು ದೂರು ದಾಖಲಿಸುತ್ತಿದ್ದ ರೈತರು, ಇದೀಗ ವಿಮಾ ಕಂಪನಿಯು ಆನ್‍ಲೈನ್ ಸೌಲಭ್ಯವನ್ನು ತೆಗೆದುಹಾಕಿ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಲಿಖಿತ ಅರ್ಜಿಯೊಂದಿಗೆ ದಾಖಲೆಗಳನ್ನು ಸಲ್ಲಿಸಲು ಸೂಚಿಸಿರುವುದರಿಂದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ದಾಖಲೆಗಳ ಜೆರಾಕ್ಸ್, ಓಡಾಟ ಹಾಗೂ ಕೆಲಸ ಬಿಟ್ಟು ಕಚೇರಿಗಳಿಗೆ ಭೇಟಿ ನೀಡುವುದರಿಂದ ಸಮಯ ಮತ್ತು ಹಣ ಎರಡೂ ವ್ಯರ್ಥವಾಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

“ನಾವು ವಿಮೆ ಕಟ್ಟುವಾಗ ಆನ್‍ಲೈನ್ ಹಾಗೂ ಬ್ಯಾಂಕ್ ಮುಖಾಂತರ ಸ್ಥಳೀಯವಾಗಿಯೇ ಪಾವತಿಸಿದ್ದೇವೆ. ಆದರೆ ಈಗ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಬರೋಬ್ಬರಿ ದೂರದ ಕಚೇರಿಗೆ ಬಂದು ಲಿಖಿತ ಅರ್ಜಿ ಕೊಡಿ ಎನ್ನುತ್ತಿದ್ದಾರೆ. ಇದು ರೈತರ ಮೇಲೆ ಹೆಚ್ಚುವರಿ ಹೊರೆ” ಎಂದು ರೈತರು ಪ್ರಶ್ನಿಸಿದ್ದಾರೆ.

ಆಳಂದ ತಾಲ್ಲೂಕಿನಲ್ಲಿ 80,000ಕ್ಕೂ ಹೆಚ್ಚು ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದರೂ, ಇದುವರೆಗೆ ಕೇವಲ 7,000 ಅರ್ಜಿಗಳು ಮಾತ್ರ ದಾಖಲಾಗಿವೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.

ವಿಮಾ ಕಂಪನಿಯು ಶೇ.20ರಷ್ಟು ದೂರುಗಳು ಬಂದರೆ ‘ರಾಂಡಮ್ ಆಯ್ಕೆ’ ಮೂಲಕ ಪರಿಹಾರ ವಿತರಿಸಲಾಗುವುದು ಎಂದು ಹೇಳಿರುವುದರಿಂದ ರೈತರಲ್ಲಿ ಗೊಂದಲ ಮತ್ತು ಆತಂಕ ಹೆಚ್ಚಾಗಿದೆ. ಉದ್ದು, ಹೆಸರು, ಸೋಯಾಬೀನ್ ಸೇರಿದಂತೆ ಅನೇಕ ಬೆಳೆಗಳು ಮಳೆಯಿಂದ ಹಾನಿಗೊಳಗಾಗಿ ರೈತರು ಮುಂದಿನ ಕೃಷಿ ಚಟುವಟಿಕೆ ನಡೆಸಲು ಹಣವಿಲ್ಲದೆ ಸಂಕಷ್ಟದಲ್ಲಿದ್ದಾರೆ.

ರೈತರು ಆನ್‍ಲೈನ್ ದೂರು ಸೌಲಭ್ಯವನ್ನು ಮರುಸ್ಥಾಪಿಸಬೇಕೆಂದು ಒತ್ತಾಯಿಸಿದ್ದಾರೆ. ಇದರಿಂದ ಗ್ರಾಮೀಣ ಆನ್‍ಲೈನ್ ಕೇಂದ್ರಗಳ ಮೂಲಕವೇ ದೂರು ದಾಖಲಿಸಲು ಅನುಕೂಲವಾಗುತ್ತದೆ. ತಾಲ್ಲೂಕು ಕಚೇರಿಗೆ ಭೇಟಿ ನೀಡುವುದರಿಂದ ಆರ್ಥಿಕ ಹೊರೆ ಹಾಗೂ ಸಮಯ ವ್ಯಯವಾಗುತ್ತಿದೆ ಎಂದು ರೈತ ಸಂಘಟನೆಗಳು ಆಗ್ರಹಿಸಿವೆ.

77,985 ರೈತರಿಂದ ವಿಮೆ ಪಾವತಿ : ಆಳಂದ ತಾಲ್ಲೂಕಿನಲ್ಲಿ ಒಟ್ಟು 77,985 ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದು, ಒಟ್ಟು ₹89,009.88 ಲಕ್ಷ ಮೌಲ್ಯದ ಬೆಳೆ ವಿಮೆ ಮಾಡಲಾಗಿದೆ. ರೈತರಿಂದ ಪಾವತಿಸಲಾದ ಪ್ರೀಮಿಯಂ ಮೊತ್ತ ₹2,320.87 ಲಕ್ಷ. ವಿಮೆಗೆ ಒಳಪಟ್ಟ ಬೆಳೆಗಳ ಅಂದಾಜು ಮೌಲ್ಯ ₹42,436.50 ಲಕ್ಷವಾಗಿದೆ.

ಬೆಳೆವಾರು ವಿವರ:

• ತೊಗರಿ: 71,736 ರೈತರು, ₹82,502.91 ಲಕ್ಷ ವಿಮೆ.

• ಉದ್ದು: 3,144 ರೈತರು, ₹1,851.37 ಲಕ್ಷ ವಿಮೆ, ₹40.38 ಲಕ್ಷ ಪ್ರೀಮಿಯಂ.

• ಸೋಯಾಬೀನ್: 1,485 ರೈತರು, ₹879.93 ಲಕ್ಷ ವಿಮೆ.

• ಹೆಸರು: 680 ರೈತರು, ₹363.76 ಲಕ್ಷ ವಿಮೆ.

• ಈರುಳ್ಳಿ: 749 ರೈತರು, ₹368.52 ಲಕ್ಷ ವಿಮೆ.

• ಹತ್ತಿ: 61 ರೈತರು, ₹41.51 ಲಕ್ಷ ವಿಮೆ.

• ಮೆಕ್ಕೆಜೋಳ: 18 ರೈತರು, ₹12.82 ಲಕ್ಷ ವಿಮೆ.

• ಸಜ್ಜೆ: 8 ರೈತರು, ₹4.44 ಲಕ್ಷ ವಿಮೆ.

• ಎಳ್ಳು: 66 ರೈತರು, ₹44.54 ಲಕ್ಷ ವಿಮೆ.

• ಸೂರ್ಯಕಾಂತಿ: 38 ರೈತರು, ₹24.05 ಲಕ್ಷ ವಿಮೆ.

ತೊಗರಿ ಬೆಳೆಗಳಿಗೆ ಅತ್ಯಧಿಕ ಪ್ರಮಾಣದಲ್ಲಿ ವಿಮೆ ಮಾಡಲಾಗಿದ್ದು, ಒಟ್ಟು ₹82,502.91 ಲಕ್ಷ ಮೌಲ್ಯದ ವಿಮೆ ಹೊಂದಿದೆ.

ಸೋಮವಾರದಿಂದ ಜಂಟಿ ಸರ್ವೆ: ಆಳಂದ ತಾಲ್ಲೂಕಿನಾದ್ಯಂತ ಬೆಳೆ ಹಾನಿಯ ಸಮಗ್ರ ಅಂದಾಜು ಮಾಡಲು ಸೋಮವಾರದಿಂದ ಕೃಷಿ, ಕಂದಾಯ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸರ್ವೆ ಪ್ರಾರಂಭವಾಗಲಿದೆ. ಹೊಲಗಳಿಗೆ ಭೇಟಿ ನೀಡುವ ಸರ್ವೆ ತಂಡಕ್ಕೆ ರೈತರು ನಿಖರವಾದ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಈಗಾಗಲೇ ಬೆಳೆ ವಿಮೆ ಪಾವತಿಸಿದ ರೈತರು ಅರ್ಜಿ ಸಲ್ಲಿಸಿದರೆ ವಿಮಾ ಕಂಪನಿಯ ಸಿಬ್ಬಂದಿ ನಮ್ಮ ಕಚೇರಿಯಲ್ಲಿ ಅರ್ಜಿಗಳನ್ನು ಸ್ವೀಕರಿಸುತ್ತಿದ್ದಾರೆ. ಅಗತ್ಯ ದಾಖಲೆಗಳನ್ನು ನೀಡಿದ ನಂತರ ಕಡ್ಡಾಯವಾಗಿ ಅರ್ಜಿ ಸ್ವೀಕೃತಿ ರಸೀದಿ ಪಡೆದುಕೊಳ್ಳಬೇಕು” ಎಂದು ಆಳಂದ ಸಹಾಯಕ ಪ್ರಬಾರಿ ಕೃಷಿ ನಿರ್ದೇಶಕ ಬನಸಿದ್ಧ ಬಿರಾದಾರ ತಿಳಿಸಿದ್ದಾರೆ.

Join WhatsApp

Join Now

Leave a Comment

error: Content is Protected!