ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಆಳಂದ ಪುರಸಭೆ ಮುಂದೆ ಬಿಜೆಪಿ ಪ್ರತಿಭಟನೆ ರಸ್ತೆ ಅಗಲೀಕರಣದಲ್ಲಿ ಮನೆ ಕಳೆದುಕೊಂಡ ಬಡವರಿಗೆ ನಿವೇಶನ ಮಂಜೂರಾತಿಗೆ ಒತ್ತಾಯ.

On: December 31, 2025 7:30 PM

ಆಳಂದ: ಪಟ್ಟಣದ ರಸ್ತೆ ಅಗಲೀಕರಣ ಕಾಮಗಾರಿಯಿಂದ ಆಸ್ತಿ ಕಳೆದುಕೊಂಡು ನಿರಾಶ್ರಿತರಾಗಿರುವ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸರ್ಕಾರದಿಂದ ಪರ್ಯಾಯ ನಿವೇಶನಗಳನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಭಾರತೀಯ ಜನತಾ ಪಕ್ಷದ ವತಿಯಿಂದ ಆಳಂದ ಪುರಸಭೆ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿದ ಬಿಜೆಪಿ ಮುಖಂಡರು, ರಸ್ತೆ ಅಗಲೀಕರಣದ ನೆಪದಲ್ಲಿ ತಲೆಮಾರುಗಳಿಂದ ವಾಸಿಸುತ್ತಿರುವ ಜನರ ಸ್ವಂತ ಆಸ್ತಿಗಳನ್ನು ಯಾವುದೇ ಪೂರ್ವ ನೋಟಿಸ್ ನೀಡದೇ ತೆರವುಗೊಳಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಲವರು ವರ್ಷಗಳಿಂದ ಪುರಸಭೆಗೆ ತೆರಿಗೆ ಪಾವತಿಸಿಕೊಂಡು ಬಂದಿದ್ದು, ಇಂತಹವರನ್ನು ಏಕಾಏಕಿ ಮನೆಗಳಿಂದ ಹೊರಹಾಕುವುದು ಅಮಾನುಷ ಕ್ರಮವಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಶೋಕ್ ಬಗಲಿ, ಬಿಜೆಪಿ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ವಿ. ಕಂದಗುಳೆ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹರ್ಷಾನಂದ ಎಸ್. ಗುತ್ತೇದಾರ್, ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಂತೋಷ ಹಾದಿಮನಿ, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮನೆ, ಸೀತಾರಾಮ್ ಜಮಾದಾರ್, ಮಹೇಶ್ ಗೌಳಿ, ಬಸವರಾಜ್ ಹತ್ತರಕಿ, ಶಿವಪುತ್ರ ನಡಿಗೇರಿ, ನ್ಯಾಯವಾದಿ ಬಾಬಾಸಾಹೇಬ್ ಪಾಟೀಲ್, ಗೌರಿ ಚಿಟ್ಕೋಟಿ, ಚಂದ್ರಶೇಖರ್ ಹಿರೇಮಠ, ವೀರಣ್ಣ ಮಂಗಣಿ ಸೇರಿದಂತೆ ಅನೇಕ ಹಿರಿಯ–ಕಿರಿಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮುಖಂಡರು ಮಾತನಾಡಿ, ಆರಂಭದಲ್ಲಿ 20 ಮೀಟರ್ ರಸ್ತೆ ಅಗಲೀಕರಣ ಎಂದು ತಿಳಿಸಲಾಗಿದ್ದು, ಇದೀಗ ಏಕಾಏಕಿ 25 ಮೀಟರ್ ಅಗಲೀಕರಣ ಮಾಡಲಾಗುತ್ತಿದೆ. ಇದು ಸಂಪೂರ್ಣ ಅವೈಜ್ಞಾನಿಕ ಕ್ರಮವಾಗಿದ್ದು ತಕ್ಷಣವೇ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಯಾವುದೇ ಸ್ಪಷ್ಟ ಮಾಹಿತಿ ನೀಡದೇ, ದಾಖಲೆ ಪರಿಶೀಲನೆ ಮಾಡದೇ ತೆರವು ಕಾರ್ಯಾಚರಣೆ ನಡೆಸಿರುವುದು ಜನರಿಗೆ ತೀವ್ರ ತೊಂದರೆ ತಂದಿದೆ ಎಂದು ಹೇಳಿದರು.

ರಾಜಧಾನಿ ಬೆಂಗಳೂರಿನ ಯಲಂಕದಲ್ಲಿರುವ ಕೋಗಿಲು ಬಡಾವಣೆಯಲ್ಲಿ ಸರ್ಕಾರ ತೋರಿದ ಮಾನವೀಯ ಕಾಳಜಿಯಂತೆ, ಆಳಂದ ಪಟ್ಟಣದ ಸಂತ್ರಸ್ತರ ಮೇಲೂ ಸರ್ಕಾರ ಕಾಳಜಿ ವಹಿಸಬೇಕು. ಮನೆ ಕಳೆದುಕೊಂಡವರಿಗೆ ನ್ಯಾಯಯುತ ಪರಿಹಾರ ನೀಡಬೇಕು ಅಥವಾ ಬೇರೆ ಸ್ಥಳದಲ್ಲಿ ಪರ್ಯಾಯ ನಿವೇಶನ ಕಲ್ಪಿಸಿ ಗೌರವಯುತ ಬದುಕು ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ಬಳಿಕ, ಈ ಸಂಬಂಧ ಮುಖ್ಯಮಂತ್ರಿಗಳಿಗೆ ಉದ್ದೇಶಿಸಿ ಮನವಿಪತ್ರವನ್ನು ಪುರಸಭೆ ಮುಖ್ಯ ಅಧಿಕಾರಿ ಸಂಗಮೇಶ್ ಪನ್‌ಶೆಟ್ಟಿ ಅವರ ಮೂಲಕ ಸಲ್ಲಿಸಲಾಯಿತು. ಒಂದು ವಾರದೊಳಗೆ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಸೇರಿದಂತೆ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳಲಾಗುವುದು ಎಂದು ಬಿಜೆಪಿ ಮುಖಂಡರು ಎಚ್ಚರಿಕೆ ನೀಡಿದರು.

Join WhatsApp

Join Now

ಶಿಫಾರಸಿತ ಸುದ್ದಿಗಳು

Leave a Comment

error: Content is Protected!