ಚನ್ನಬಸವ ಪಟ್ಟದೇವರ ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ಭಕ್ತಿ ಸಾಗರದ ಅಲೆ
ಆಳಂದ: ಭಕ್ತಿ, ಸಂಭ್ರಮ ಮತ್ತು ಸಾಂಸ್ಕøತಿಕ ವೈಭವದ ಸಂಗಮವಾಗಿ ಆಳಂದ ಪಟ್ಟಣದ ಶರಣ ಮಂಟಪದಲ್ಲಿ ಸದ್ಗುರು ರೇವಣಸಿದ್ದ ಶಿವಶರಣ ಮಹಾಸ್ವಾಮಿಗಳ 120ನೇ ಜಾತ್ರಾ ಮಹೋತ್ಸವ ಭಾನುವಾರ ಅದ್ಧೂರಿಯಾಗಿ ನಡೆಯಿತು.

ಬೆಳಗಿನ ಜಾವ ಶರಣ ಮಂಪಟದಲ್ಲಿ ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಗಳ ಮಹಾಮಂಗಳ ನಿಮಿತ್ತವಾಗಿ ನಡೆದ ಶ್ರೀ ಚನ್ನಬಸವ ಪಟ್ಟ ದೇವರ ಅಡ್ಡ ಪಲ್ಲಕ್ಕಿ ಮಹೋತ್ಸವ, ಬೃಹತ್ ಮೆರವಣಿಗೆ ಮತ್ತು ಸಂಜೆ ಮಹಾರಥೋತ್ಸವದಲ್ಲಿ ಪಟ್ಟಣವನ್ನು ಭಕ್ತಿಮಯ ವಾತಾವರಣದಲ್ಲಿ ಮುಳುಗಿಸಿದವು.
ನಾನಾ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ಶ್ರೀಗಳ ದರ್ಶನ ಪಡೆದು, ಆಶೀರ್ವಾದ ಮತ್ತು ಪ್ರಸಾದ ಸ್ವೀಕರಿಸಿ ಧನ್ಯರಾದರು.
ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಬೆಳಗಿನ 11:00 ಗಂಟೆ ಸುಮಾರಿಗೆ ಆರಂಭಗೊಂಡ ಅಡ್ಡ ಪಲ್ಲಕ್ಕಿ ಉತ್ಸವವು ಪಟ್ಟಣದ ಮುಖ್ಯ ಬೀದಿಗಳಲ್ಲಿ ಅದ್ಧೂರಿಯಾಗಿ ಸಾಗಿತು. ಶರಣ ಮಂಟಪದಿಂದ ಹೊರಟ ಮೆರವಣಿಗೆಯು ಮಹಾದೇವ ಮಂದಿರ, ಮುಖ್ಯ ರಸ್ತೆ, ಹಳೆ ಪೆÇಲೀಸ್ ಠಾಣೆ ಮತ್ತು ಹನುಮಾನ್ ದೇವಸ್ಥಾನ, ಹತ್ತ್ಯಾನಗಲಿಯ ಮಾರ್ಗಗಳ ಮೂಲಕ ಸಂಜೆಯವರೆಗೆ ನಡೆಯಿತು.

ಮೆರವಣಿಗೆಯಲ್ಲಿ ಕುಂಭ ಕಳಸ, ಭಜನೆ, ವಾದ್ಯ ವೈಭವಗಳೊಂದಿಗೆ ಅಲಂಕೃತಗೊಂಡ ಪಲ್ಲಕ್ಕಿಯು ಭಕ್ತರ ಕಣ್ಮನಗಳನ್ನು ಸೆಳೆಯಿತು. ಸದ್ಗುರು ರೇವಣಸಿದ್ದ ಶಿವಶರಣ ಮಹಾಸ್ವಾಮಿಗಳು ಭಕ್ತಾದಿಗಳಿಗೆ ಕಡಿಸಕ್ಕರೆ ಪುಷ್ಪ ನೀಡಿ ಆಶೀರ್ವದಿಸಿದ ದೃಶ್ಯವು ಭಾವುಕತೆಯನ್ನು ಮೂಡಿಸಿತು.ಮೆರವಣಿಗೆಯಲ್ಲಿ ಕಲಾತಂಡಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ವಿಶೇಷ ಆಕರ್ಷಣೆಯಾಗಿ ಗಮನ ಸೆಳೆದವು. ಕಲಾಕುಣಿತ, ಪುರವಂತರ ಕುಣಿತ, ಭಜನೆ ಮತ್ತು ಶಾಲಾ ಮಕ್ಕಳ ಲೇಜಿಮು, ಲಂಬಾಣಿ ಮಹಿಳೆಯರ ಸಾಂಪ್ರದಾಯಿಕ ಕುಣಿತಗಳಂತಹ ವಿವಿಧ ಕುಣಿತಗಳು ಮೆರವಣಿಗೆಗೆ ಹೊಸ ರೂಪ ನೀಡಿದವು.
ಸ್ಥಳೀಯ ಕಲಾವಿದರು ಮತ್ತು ಯುವಕರ ತಂಡಗಳು ಪ್ರದರ್ಶಿಸಿದ ಈ ಕುಣಿತಗಳು ಜಾನಪದ ಸಂಸ್ಕೃತಿಯ ಸಾರವನ್ನು ಪ್ರತಿಬಿಂಬಿಸಿದವು. ಪುರವಂತರ ಕುಣಿತದಲ್ಲಿ ಭಾಗವಹಿಸಿದ ಕಲಾವಿದರು ತಮ್ಮ ಚುರುಕುತನ ಮತ್ತು ಸಾಂಪ್ರದಾಯಿಕ ಉಡುಪುಗಳೊಂದಿಗೆ ಉತ್ಸವದ ವೈಭವವನ್ನು ಹೆಚ್ಚಿಸಿ ಭಕ್ತರಿಗೆ ಮನೋರಂಜನೆಯ ಜೊತೆಗೆ ಸಾಂಸ್ಕೃತಿಕ ಮೌಲ್ಯಗಳನ್ನು ಕಲಿಸುವಂತಿತ್ತು.

ಉತ್ಸವದ ಮುನ್ನ ಬೆಳಗಿನ ಜಾವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪುರಾಣ ಮಹಾಮಂಗಲ, ವಿಶೇಷ ಪೂಜೆ ಮತ್ತು ಅರ್ಚನೆಗಳು ಶರಣ ಮಂಟಪದಲ್ಲಿ ಭಕ್ತಿಯ ವಾತಾವರಣವನ್ನು ಸೃಷ್ಟಿಸಿದವು. ಸಂಜೆಯಲ್ಲಿ ನಡೆದ ಮಹಾ ರಥೋತ್ಸವ ಮತ್ತು ಚನ್ನಬಸವ ಪಟ್ಟ ದೇವರ ಕೈಲಾಸ ಮಂಟಪ ಮಹಾಪೂಜೆಯು ಉತ್ಸವದ ಕಳಸವಾಗಿ ನೆರವೇರಿತು. ರಥೋತ್ಸವದಲ್ಲಿ ಭಾಗವಹಿಸಿದ ಭಕ್ತರು ರಥವನ್ನು ಎಳೆಯುತ್ತಾ ಭಜನೆ ಮತ್ತು ಜಯಘೋಷಗಳೊಂದಿಗೆ ಭಕ್ತಿಯ ಹೊಳೆಯನ್ನೇ ಹರಿಸಿದರು.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಮತ್ತು ನಾನಾ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದರ್ಶನ ಪಡೆದ ಅವರು, ಪ್ರಸಾದ ಸ್ವೀಕರಿಸಿ ಮನೆಗೆ ಮರಳಿದರು.

ಉತ್ಸವದ ಸಂಪೂರ್ಣ ವ್ಯವಸ್ಥೆಯನ್ನು ಶರಣ ಮಂಟಪದ ಆಡಳಿತ ಮಂಡಳಿ ಮತ್ತು ಸ್ಥಳೀಯರು ಸಮರ್ಥವಾಗಿ ನಿರ್ವಹಿಸಿದ್ದು, ಯಾವುದೇ ಅಡಚಣೆಗಳಿಲ್ಲದೆ ಸುಗಮವಾಗಿ ನಡೆಯಿತು. ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.









