ಆಳಂದ: ದೇಶದಾದ್ಯಂತ ಬುಡಕಟ್ಟು ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಈಗ ಆಳಂದ ತಾಲೂಕಿಗೂ ತಲುಪಿದೆ.
ಈ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿ ಬುಧವಾರ ಆಳಂದ ತಾಲ್ಲೂಕು ಆಡಳಿತಸೌಧ ಸಭಾಂಗಣದಲ್ಲಿ ಆದಿ ಕರ್ಮಯೋಗಿ ಅಡಿಯಲ್ಲಿ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಭರ್ಜರಿಯಾಗಿ ಉದ್ಘಾಟಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರ ಅಣ್ಣಾರಾವ್ ಪಾಟೀಲ ಅವರು ಹೇಳಿದರು:“ದೇಶದ 30 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, 550 ಜಿಲ್ಲೆಗಳು ಮತ್ತು ಒಂದು ಲಕ್ಷ ಗ್ರಾಮಗಳನ್ನು ಒಳಗೊಂಡಿರುವ ಈ ಅಭಿಯಾನವು ಬುಡಕಟ್ಟು ಸಮುದಾಯಗಳ ಬದುಕುಮಟ್ಟ ಸುಧಾರಿಸಲು ಸರ್ಕಾರ ಕೈಗೊಂಡಿರುವ ಅತ್ಯಂತ ದೊಡ್ಡ ಹೆಜ್ಜೆ. ತಾಲ್ಲೂಕು ಮಟ್ಟದ ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ಪಡೆದ ತರಬೇತಿಯನ್ನು ಗ್ರಾಮೀಣ ಮಟ್ಟದಲ್ಲಿ ಪರಿಣಾಮಕಾರಿ ಅನುಷ್ಠಾನಕ್ಕೆ ಬಳಸಬೇಕು.”
ಅವರು ಮುಂದುವರಿದು, “ಈ ಅಭಿಯಾನವು ಕೇವಲ ಯೋಜನೆಗಳ ಪಟ್ಟಿ ನೀಡುವುದಲ್ಲದೆ, ಅವುಗಳನ್ನು ಜನಜಾತಿ ಸಮುದಾಯಗಳ ನಿಜವಾದ ಅಗತ್ಯಗಳಿಗೆ ಹೊಂದುವಂತೆ ಜಾರಿಗೊಳಿಸುವುದೇ ಉದ್ದೇಶ. ಜನಜಾತಿ ಸಮುದಾಯಗಳು ಶಿಕ್ಷಣ, ಆರೋಗ್ಯ, ಉದ್ಯೋಗ, ಪಶುಪಾಲನೆ, ಮಹಿಳಾ ಸಬಲೀಕರಣ ಇತ್ಯಾದಿ ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸವಾಲುಗಳಿಗೆ ಶಾಶ್ವತ ಪರಿಹಾರ ನೀಡುವುದು ನಮ್ಮ ಹೊಣೆಗಾರಿಕೆ” ಎಂದರು.

ಕಾರ್ಯಾಗಾರದಲ್ಲಿ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಹೋಳ್ಕರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಂಭುಲಿಂಗ ಹಿರೇಮಠ, ಪಶುಸಂಗೋಪನ ಸಹಾಯಕ ನಿರ್ದೇಶಕ ಡಾ. ಯಲ್ಲಪ್ಪ ಇಂಗಳೆ ಮುಂತಾದವರು ಉದ್ದೇಶಿಸಿ ಮಾತನಾಡಿದರು.
ಇವರ ಅಭಿಪ್ರಾಯದಲ್ಲಿ, ಈ ಕಾರ್ಯಾಗಾರವು ಸ್ಥಳೀಯ ಆಡಳಿತದ ಜವಾಬ್ದಾರಿಯನ್ನು ಬಲಪಡಿಸುವುದರೊಂದಿಗೆ ಬುಡಕಟ್ಟು ಸಮುದಾಯಗಳಿಗೆ ಸರ್ಕಾರದ ಕಲ್ಯಾಣ ಯೋಜನೆಗಳು ತಲುಪುವಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಲಿದೆ.
ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಸಂತೋಷ ಶಿಂಧೆ, ಸಿಡಿಪಿಓ ಕಚೇರಿ ಹಿರಿಯ ಮೇಲ್ವಿಚಾರಕಿ ಬೇಬಿನಂದಾ ಎಸ್. ಪಾಟೀಲ್, ಬಿಆರ್‌ಸಿ ಮಲ್ಲಿನಾಥ್ ಘೋಡಕೆ, ಆರೋಗ್ಯ ಶಿಕ್ಷಣಾಧಿಕಾರಿ ವಿಜಯಲಕ್ಷ್ಮಿ ನಂದಿಕೋಲಮಠ, ತಾಪಂ ಯೋಜನಾಧಿಕಾರಿ ಸೋಮಶೇಖರ್ ಅವರು ತರಬೇತಿ ನೀಡಿದರು. ಇವರು ಅಭಿಯಾನದ ಉದ್ದೇಶ, ಕಾರ್ಯತಂತ್ರ, ಅನುಷ್ಠಾನ ವಿಧಾನ ಹಾಗೂ ಪರಿಣಾಮಕಾರಿತ್ವದ ಬಗ್ಗೆ ಅಧಿಕಾರಿಗಳಿಗೆ ಮಾರ್ಗದರ್ಶನ ಒದಗಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಸಿದ್ಧರಾಮ ಪಿ. ವಡಗಾಂವ, ವಾಡ್ರ್ನ ನಿಂಗಣ್ಣ ದೊಡ್ಡಮನಿ, ಅಶ್ವೀನಿ, ಸುವರ್ಣ, ಎಫ್‌ಡಿಎ ರಮೇಶ ಪಾತ್ರೆ, ಇಂದುಬಾಯಿ, ಪಾರ್ವತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡರು.
ಈ ಕಾರ್ಯಾಗಾರವನ್ನು “ಆಳಂದ ತಾಲ್ಲೂಕಿಗೆ ಬಂದಿರುವ ಒಂದು ಹೊಸ ಅಭಿವೃದ್ಧಿಯ ದಾರಿ” ಎಂದು ಕೊಂಡಾಡಲಾಯಿತು.“ಬುಡಕಟ್ಟು ಸಮುದಾಯಗಳ ಹಿತಾಸಕ್ತಿ ಕೇವಲ ಘೋಷಣೆಯಲ್ಲ, ಅನುಷ್ಠಾನದ ಹಾದಿಯಲ್ಲಿ ಸಾಗುತ್ತಿರುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ” ಎಂಬ ಅಭಿಪ್ರಾಯ ವ್ಯಕ್ತವಾಯಿತು.









