ಆಳಂದ: ಪಟ್ಟಣದಲ್ಲಿ ಮೊದಲ ಬಾರಿಗೆ ಆಯೋಜಿಸಲ್ಪಟ್ಟ ತಾಲೂಕು ಮಟ್ಟದ ಪ್ರಥಮ ಬೌದ್ಧ ದಮ್ಮ ಸಮ್ಮೇಳನವು ಅದ್ಧೂರಿ, ಶಿಸ್ತಿನ ಮತ್ತು ಭಕ್ತಿಭಾವದ ವಾತಾವರಣದಲ್ಲಿ ಯಶಸ್ವಿಯಾಗಿ ನಡೆಯಿತು. ಮಾರುಕಟ್ಟೆ ಆವರಣದಲ್ಲಿ ನಡೆದ ಈ ಸಮ್ಮೇಳನಕ್ಕೆ ಸಮಿತಿಯ ಅಧ್ಯಕ್ಷರು ಸೇರಿದಂತೆ ಸಹಸ್ರಾರು ಸಂಖ್ಯೆಯ ಬೌದ್ಧ ಅನುಯಾಯಿಗಳು ಹಾಗೂ ಸಾರ್ವಜನಿಕರು ಸಾಕ್ಷಿಯಾದರು.
ಸಮ್ಮೇಳನ ಉದ್ಘಾಟನೆಗೆ ಮುನ್ನ ವಿವಿಧ ಭಾಗಗಳಿಂದ ಆಗಮಿಸಿದ ಬಂತೇಜಿಗಳ ಸಾನ್ನಿಧ್ಯದಲ್ಲಿ ತ್ರಿಶರಣ–ಪಂಚಶೀಲ ಸ್ವೀಕಾರ, ಬುದ್ಧ ಪೂಜೆ, ಸುತ್ತ ಪಠಣ, ತ್ರಿಪಿಠಕ ಪಠಣ, ದಮ್ಮಪದೇಶ, ದಮ್ಮ ಸಂವಾದ, ಬಿಕ್ಕು ಸಂಘಕ್ಕೆ ಚಿವರದಾನ ಹಾಗೂ ದಮ್ಮ ದೀಕ್ಷಾ ಕಾರ್ಯಕ್ರಮಗಳು ಧಾರ್ಮಿಕ ಶ್ರದ್ಧೆಯೊಂದಿಗೆ ಜರುಗಿದವು. ಹಿರಿಯ ಬಂತೇಜಿ ವರಜ್ಯೀತಿ ಥೇರೋ ಅವರು ದಮ್ಮ ನುಡಿಗಳನ್ನು ಆಡಿ, ಮಾನವ ಜೀವನದಲ್ಲಿ ಶೀಲ, ಪ್ರಜ್ಞೆ ಮತ್ತು ಮಹತ್ವವನ್ನು ವಿವರಿಸಿದರು.
ಬಂತೇ ದಮ್ಮಾನಂದ ಮಹಾಥೇರೋ ಅವರು ನೀಡಿದ ದಮ್ಮೋಪದೇಶದಲ್ಲಿ, “ಬುದ್ಧ ದಮ್ಮವು ಕೇವಲ ಧರ್ಮವಲ್ಲ; ಅದು ಮಾನವೀಯ ಮೌಲ್ಯಗಳ ಸಂವಿಧಾನ. ಅಹಿಂಸೆ, ಸಮಾನತೆ ಮತ್ತು ಬುದ್ಧಿವಂತ ಚಿಂತನೆ ದಮ್ಮದ ಹೃದಯ” ಎಂದು ಹೇಳಿದರು. ಪಟ್ಟಣದ ಹಳೆಯ ಚೆಕ್ಪೋಸ್ಟ್ನಿಂದ ಮಾರುಕಟ್ಟೆಯವರೆಗೆ ಸುಮಾರು ೨ ಕಿಲೋಮೀಟರ್ ದೂರದ ಮೆರವಣಿಗೆಯಲ್ಲಿ ಭಗವಾನ್ ಬುದ್ಧರ ಮೂರ್ತಿ ಹಾಗೂ ತ್ರಿಪಿಠಕಗಳು ಭವ್ಯವಾಗಿ ಪ್ರದರ್ಶಿಸಲ್ಪಟ್ಟವು. ಈ ಮೆರವಣಿಗೆ ಸಮ್ಮೇಳನ ವೇದಿಕೆಯ ಸಮಾರಂಭಕ್ಕೆ ಭಕ್ತಿಭಾವದೊಂದಿಗೆ ಚಾಲನೆ ನೀಡಿತು.
ಸಮ್ಮೇಳನದ ಸಾನ್ನಿಧ್ಯವನ್ನು ಅಣದೂರ ಬುದ್ಧ ವಿಹಾರದ ಭಂತೆ ಬೋಧಿದತ್ತ ಮಹಾಥೇರೋ ವಹಿಸಿದ್ದರು. ನಳಂದ ವಿಶ್ವವಿದ್ಯಾಲಯದ ಚಾಮರಾಜ ಭಂತೆ ಬೋಧಿದತ್ತ ಮಹಾಥೇರೋ ಸಹ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಂತೇ ಬೋಧಿದತ್ತ ಮಹಾಥೇರೋ ಅವರು ಮುಖ್ಯ ಭಾಷಣ ಮಾಡುತ್ತಾ, “ಸಾಮಾಜಿಕ ಅಸಮಾನತೆ, ಅಜ್ಞಾನ ಮತ್ತು ಹಿಂಸೆಗೆ ಪರಿಹಾರ ದಮ್ಮದಲ್ಲಿದೆ. ಬುದ್ಧ ದಮ್ಮ ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ನೀತಿ ಆಯೋಗದ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಆರ್. ಪಾಟೀಲ, “ಬುದ್ಧ ದಮ್ಮವು ಶಾಂತಿ, ಸಮಾನತೆ ಮತ್ತು ಬೌದ್ಧಿಕ ಕ್ರಾಂತಿಗೆ ದಾರಿ ತೋರಿಸಿದೆ. ಸಮಾಜದಲ್ಲಿ ವೈಚಾರಿಕತೆ ಮತ್ತು ಮಾನವೀಯತೆಯನ್ನು ಬಲಪಡಿಸಲು ಇಂತಹ ದಮ್ಮ ಸಮ್ಮೇಳನಗಳು ಅಗತ್ಯ” ಎಂದು ಹೇಳಿದರು. ದಮ್ಮದ ಕುರಿತು ವಿಶೇಷ ಉಪನ್ಯಾಸ ನೀಡಿದ ಮುಂಬೈನ ಭಾರತೀಯ ಬೌದ್ಧ ಮಹಾಸಭಾದ ಡಾ. ರಜರತ್ನ ಅಂಬೇಡ್ಕರ್, “ಡಾ. ಬಿ.ಆರ್. ಅಂಬೇಡ್ಕರ್ ಅವರು ಬುದ್ಧ ದಮ್ಮವನ್ನು ಸಾಮಾಜಿಕ ನ್ಯಾಯದ ಮಾರ್ಗವಾಗಿ ಕಂಡಿದ್ದರು. ದಮ್ಮವು ಶೋಷಣೆಯಿಂದ ಮುಕ್ತ ಸಮಾಜ ನಿರ್ಮಾಣಕ್ಕೆ ದಾರಿ ತೋರಿಸುತ್ತದೆ” ಎಂದು ತಿಳಿಸಿದರು.
ಈ ಮೊದಲು ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ರಾಷ್ಟ್ರಧ್ವಜಾರೋಹಣ, ಮಾಜಿ ಶಾಸಕ ಸುಭಾಷ ಗುತ್ತೇದಾರ ದಮ್ಮ ಧ್ವಜಾರೋಹಣ ಹಾಗೂ ಹಿರಿಯ ಮುಖಂಡ ಬಸವಲಿಂಗಪ್ಪ ಗಾಯಕವಾಡ ನೀಲಿ ಭಾವುಟ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಸಿಯುಕೆ ಕನ್ನಡ ಪ್ರಾಧ್ಯಾಪಕ ಡಾ. ಅಪ್ಪಗೇರೆ ಸೋಮಶೇಖರ ಹಾಗೂ ಸಾಹಿತಿ ಡಾ. ಜಯದೇವಿ ಗಾಯವಾಡ ಅವರು ಮಾತನಾಡಿ, ಬುದ್ಧ ದಮ್ಮದ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಭಾವಗಳ ಕುರಿತು ವಿವರಿಸಿದರು.









