ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ರಸ್ತೆ ಅಗಲೀಕರಣದ ನಡುವೆ ಮೌನ ಮುರಿದ ಶಾಸಕ; ತಿಂಗಳ ಬಳಿಕ ಆಳಂದ ಪ್ರವೇಶ, ಬಸ್ ಸಂಚಾರಕ್ಕೆ ಉದ್ಘಾಟನೆ.

On: January 15, 2026 4:43 PM

ಆಳಂದ: ಪಟ್ಟಣದಲ್ಲಿ ತಿಂಗಳಿಂದ ನಡೆಯುತ್ತಿರುವ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿಯಿಂದ ನೇರವಾಗಿ ಬಾಧಿತರಾದ ಸಂತ್ರಸ್ತರ ಮಧ್ಯೆ ಕಾಣಿಸಿಕೊಳ್ಳದೇ ದೂರವಿದ್ದ ಶಾಸಕ, ನೀತಿ ಆಯೋಗದ ರಾಜ್ಯ ಉಪಾಧ್ಯಕ್ಷ ಬಿ.ಆರ್. ಪಾಟೀಲ ಅವರು ಗುರುವಾರ ಏಕಾಏಕಿ ಪಟ್ಟಣದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಹೊಸ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.

ರಸ್ತೆ ಅಗಲೀಕರಣ ಆರಂಭವಾಗಿ ತಿಂಗಳು ಸಮೀಪಿಸುತ್ತಿದ್ದರೂ, ಪರಿಹಾರ ಗೊಂದಲ, ಅಂಗಡಿ ತೆರವು, ಬಡ ವ್ಯಾಪಾರಿಗಳ ಸಂಕಷ್ಟಗಳ ನಡುವೆಯೇ ಶಾಸಕರ ಗೈರುಹಾಜರಾತಿ ಕುರಿತು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲೇ ಅವರ ಆಳಂದ ಭೇಟಿ ವಿಶೇಷ ಗಮನ ಸೆಳೆದಿದೆ.

ಮುಖ್ಯ ರಸ್ತೆ ಅಗಲೀಕರಣದಿಂದ ಆಸ್ತಿ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಶಾಸಕರು ಸ್ಪಷ್ಟ ಭರವಸೆಯ ಬದಲು, “ಜನರ ಬೇಡಿಕೆ ಸರಿಯಾಗಿದೆ. ಸರ್ಕಾರದಿಂದ ಪರಿಹಾರ ಬಂದರೆ ಸಂತ್ರಸ್ತರಿಗೆ ಕೊಡಲು ಪ್ರಯತ್ನಿಸಲಾಗುವುದು” ಎನ್ನುವ ಪ್ರತಿಕ್ರಿಯೆ ನೀಡಿದರು.

ಈ ಮೊದಲು ಪಟ್ಟಣದ ಬಸ್ ನಿಲ್ದಾಣದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸ್ಥಳೀಯ ಘಟಕಕ್ಕೆ ಬಿಡುಗಡೆಯಾದ ಎರಡು ಹೊಸ ಬಸ್‍ಗಳಿಗೆ ಶಾಸಕರು ಪೂಜೆ ಸಲ್ಲಿಸಿ, ಸಂಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಜಿಲ್ಲಾ ಕೇಂದ್ರ ಕಲಬುರಗಿಗೆ ಸಂಚರಿಸುವ ಸಾರ್ವಜನಿಕರು ಮತ್ತು ವ್ಯಾಪಾರಿಗಳ ಬೇಡಿಕೆಯನ್ನು ಮನಗಂಡು ಹೊಸ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

“ಆಳಂದ–ಕಲಬುರಗಿ ನಡುವೆ ದಿನನಿತ್ಯ ಸಂಚಾರಕ್ಕೆ ಅನುಕೂಲವಾಗಲಿದೆ. ಇನ್ನೂ ಬಸ್‍ಗಳ ಅಗತ್ಯವಿದ್ದರೆ ಸರ್ಕಾರದ ಗಮನಕ್ಕೆ ತರಲಾಗುತ್ತದೆ. ಹಂತ ಹಂತವಾಗಿ ಸಾರಿಗೆ ವ್ಯವಸ್ಥೆ ಸುಧಾರಿಸುವುದಕ್ಕೆ ಸರ್ಕಾರ ಬದ್ಧವಾಗಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ದೊರೆಯುತ್ತಿದೆ” ಎಂದು ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಘಟಕಾಧಿಕಾರಿ ಯೋಗಿನಾಥ ಸರಸಂಬಿ ಅವರು ಬಸ್ ಸಂಚಾರ, ವೇಳಾಪಟ್ಟಿ ಹಾಗೂ ಸೇವಾ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪಂಚಗ್ಯಾರಂಟಿ ಅಧ್ಯಕ್ಷ ಶಿವುಪುತ್ರ ಪಾಟೀಲ, ಮುಖಂಡ ಮಲ್ಲಪ್ಪ ಹತ್ತರಕಿ, ಘಟಕದ ಮೇಲ್ವಿಚಾರಕ ಮೊಹ್ಮದ್ ಖಾನ್, ವೈದ್ಯಕುಮಾರ ತೇಲ್ಕರ್, ಮಶಾಕ್ ಪಟೇಲ್, ಮಹ್ಮದ್ ಯಾಸೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Join WhatsApp

Join Now

ಶಿಫಾರಸಿತ ಸುದ್ದಿಗಳು

Leave a Comment

error: Content is Protected!