ಆಳಂದ: ಪಟ್ಟಣದಲ್ಲಿ ಕೈಗೊಳ್ಳಲಾಗಿರುವ ಮುಖ್ಯ ರಸ್ತೆ ಅಗಲೀಕರಣ ಯೋಜನೆಗೆ ಜುಮ್ಮಾ ಮಸೀದಿ ಸದಸ್ಯರು ಸ್ವಯಂಪ್ರೇರಿತವಾಗಿ ಬೆಂಬಲ ಸೂಚಿಸಿದರು.
ಇದರಿಂದ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಈ ಯೋಜನೆಯಿಂದ ಮುಂದಿನ ದಿನಗಳಲ್ಲಿ ಆಳಂದ ಪಟ್ಟಣದ ಸಂಚಾರ ವ್ಯವಸ್ಥೆ ಸುಧಾರಿಸಿ ಸಮಗ್ರ ಅಭಿವೃದ್ಧಿಗೆ ದಾರಿ ತೆರೆಯಲಿದೆ ಎಂದು ಜುಮ್ಮಾ ಮಸೀದಿ ಸದಸ್ಯ ಸೈಯದ್ ಯೂಸುಫ್ ಕಾಜಿ ಹೇಳಿದರು.
ಕಳೆದ ಸುಮಾರು ಆರು ದಶಕಗಳಿಂದ ಈ ರಸ್ತೆ ಕಿರಿದಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ಸಂಚಾರದಿಂದ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ರಸ್ತೆ ಅಗಲೀಕರಣದ ಮೂಲಕ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಅಭಿವೃದ್ಧಿ ಯೋಜನೆಗೆ ಮುಂದಾಗಿರುವ ಸಂಬಂಧಿಸಿದ ಇಲಾಖೆ ಹಾಗೂ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.
ಇನ್ನೊಬ್ಬ ಜುಮ್ಮಾ ಮಸೀದಿ ಸದಸ್ಯ ಶೇರ್ ಅಲಿ ಖಾನ್ ಮಾತನಾಡಿ, ಪಟ್ಟಣಸಭೆಯೊಂದಿಗೆ ಸಮನ್ವಯ ಸಾಧಿಸಿ ಮಸೀದಿಗೆ ಸೇರಿದ ಅಂಗಡಿಗಳನ್ನು ಯಾವುದೇ ವಿರೋಧವಿಲ್ಲದೆ ಸ್ವಯಂಪ್ರೇರಿತವಾಗಿ ತೆರವುಗೊಳಿಸಿರುವುದಾಗಿ ತಿಳಿಸಿದರು. ಪಟ್ಟಣಸಭೆ ಮುಖ್ಯಾಧಿಕಾರಿಗಳ ಸಹಕಾರ ಮತ್ತು ಸಕಾರಾತ್ಮಕ ನಿಲುವು ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿಗಳು ಮಾತನಾಡಿ, ರಸ್ತೆ ಅಗಲೀಕರಣದಂತಹ ಪ್ರಗತಿಪರ ಅಭಿವೃದ್ಧಿ ಕಾರ್ಯಕ್ಕೆ ಜುಮ್ಮಾ ಮಸೀದಿ ಸದಸ್ಯರು ಹಾಗೂ ಸ್ಥಳೀಯ ನಾಗರಿಕರು ತೋರಿದ ಸಹಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಸಾರ್ವಜನಿಕರ ಸಹಕಾರದಿಂದಲೇ ಅಭಿವೃದ್ಧಿ ಕಾಮಗಾರಿಗಳು ಸುಗಮವಾಗಿ ಮುಂದುವರಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಮೊಹ್ಸಿನ್ ಗುತ್ತೇದಾರ್ ಮಾತನಾಡಿ, ಈ ರಸ್ತೆ ಅಗಲೀಕರಣ ಯೋಜನೆಯಿಂದ ಆಳಂದ ಪಟ್ಟಣದಲ್ಲಿ ಹೊಸ ಅವಕಾಶಗಳು ಮತ್ತು ಅಭಿವೃದ್ಧಿಯ ದಾರಿಗಳು ತೆರೆಯಲಿವೆ ಎಂದು ಅಭಿಪ್ರಾಯಪಟ್ಟರು. ಅಭಿವೃದ್ಧಿ ಕಾರ್ಯಕ್ಕೆ ತಡೆಯಾಗುವಂತೆ ನ್ಯಾಯಾಲಯಗಳಲ್ಲಿ ಸ್ಟೇ ಅರ್ಜಿ ಸಲ್ಲಿಸದೇ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದ ಅವರು, ಜೊತೆಗೆ ಅರ್ಹ ಸಂತ್ರಸ್ತರಿಗೆ ಸಮರ್ಪಕ ಹಾಗೂ ನ್ಯಾಯಸಮ್ಮತ ಪರಿಹಾರ ನೀಡುವಂತೆ ಸಂಬಂಧಿಸಿದ ಇಲಾಖೆಯನ್ನು ಕೋರಿದರು.









