ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಭೀಮಾ ಕೋರೆಗಾಂವ್ ವಿಜಯೋತ್ಸವ: ಸ್ವಾಭಿಮಾನ, ಸಮಾನತೆ ಹೋರಾಟದ ಐತಿಹಾಸಿಕ ಸಂಕೇತ – ಸುಭಾಷ್ ಗುತ್ತೇದಾರ್.

On: January 5, 2026 7:07 PM

ಆಳಂದ: ಭೀಮಾ ಕೋರೆಗಾಂವ್ ಯುದ್ಧವು ಶೋಷಿತ–ವಂಚಿತ ವರ್ಗಗಳ ಸ್ವಾಭಿಮಾನ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಹೋರಾಟಕ್ಕೆ ದಿಕ್ಕು ತೋರಿದ ಐತಿಹಾಸಿಕ ಘಟನೆಯಾಗಿದೆ ಎಂದು ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಹೇಳಿದರು. ಪಟ್ಟಣದ ಹಳೆಯ ಚೆಕ್‍ಪೋಸ್ಟ್ ಬಳಿಯ ದೀಕ್ಷಾ ಭೂಮಿಯಲ್ಲಿ ತಾಲೂಕು ದಲಿತ ಸೇನೆಯ ಆಶ್ರಯದಲ್ಲಿ ಸಮಾವೇಶವಾಗಿ ನಡೆದ 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಹಾಗೂ ಭೀಮಾ ಕೋರೆಗಾಂವ್ ಸ್ತಂಭ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾವಚಿತ್ರ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಈ ವಿಜಯೋತ್ಸವವು ಕೇವಲ ಇತಿಹಾಸ ಸ್ಮರಣೆ ಮಾತ್ರವಲ್ಲ; ಇಂದಿನ ಪೀಳಿಗೆಗೆ ಸಂವಿಧಾನಾತ್ಮಕ ಮೌಲ್ಯಗಳು, ಮಾನವೀಯತೆ ಮತ್ತು ಸಮಾನ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಮಹತ್ವದ ಪ್ರೇರಣೆಯಾಗಿದೆ ಎಂದು ಗುತ್ತೇದಾರ್ ಹೇಳಿದರು. ಸಮಾಜದಲ್ಲಿರುವ ಅಸಮಾನತೆಗಳನ್ನು ನಿವಾರಿಸಲು ಶಿಕ್ಷಣ, ಸಂಘಟನೆ ಮತ್ತು ಸಂವಿಧಾನಾತ್ಮಕ ಮಾರ್ಗಗಳೇ ಶಾಶ್ವತ ಪರಿಹಾರಗಳಾಗಿವೆ ಎಂದು ಅಭಿಪ್ರಾಯಪಟ್ಟ ಅವರು, ಎಲ್ಲ ವರ್ಗಗಳ ಏಕತೆ ಮತ್ತು ಸಹಬಾಳ್ವೆಯಿಂದಲೇ ಬಲಿಷ್ಠ ಭಾರತ ನಿರ್ಮಾಣ ಸಾಧ್ಯವೆಂದು ತಿಳಿಸಿದರು.

ದಲಿತ ಸೇನೆ ರಾಜ್ಯಾಧ್ಯಕ್ಷ ಹಾಗೂ ನ್ಯಾಯವಾದಿ ಹನುಮಂತ ಯಳಸಂಗಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭೀಮಾ ಕೋರೆಗಾಂವ್ ಸ್ತಂಭವು ಹೋರಾಟ, ತ್ಯಾಗ ಮತ್ತು ಆತ್ಮಗೌರವದ ಪ್ರತೀಕವಾಗಿದೆ ಎಂದು ಹೇಳಿದರು. ಸಂವಿಧಾನ ನೀಡಿದ ಹಕ್ಕುಗಳನ್ನು ಅರಿತುಕೊಂಡು ಅವುಗಳ ರಕ್ಷಣೆಗೆ ಸದಾ ಎಚ್ಚರಿಕೆಯಿಂದ ಇರಬೇಕೆಂದು ಕರೆ ನೀಡಿದ ಅವರು, ದಲಿತ ಸೇನೆ ಸಮಾಜದ ಅಂಚಿನವರ ಧ್ವನಿಯಾಗಲು ನಿರಂತರವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.

ದಲಿತ ಸಮುದಾಯದ ರಾಷ್ಟ್ರ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ ಖರ್ಗೆ ಕುಟುಂಬದ ವಿರುದ್ಧ ಕೀಳುಮಟ್ಟದ ಹೇಳಿಕೆಗಳು ಬಂದರೂ ಕಾಂಗ್ರೆಸ್‌ನಿಂದ ಧ್ವನಿ ಎತ್ತದಿರುವುದು ದಲಿತರಿಗೆ ನೋವು ತಂದಿದೆ ಎಂದು ಹನುಮಂತ ಯಳಸಂಗಿ ಆರೋಪಿಸಿದರು. ಉತ್ತರ ಹಾಗೂ ದಕ್ಷಿಣ ಭಾರತದಲ್ಲಿ ಶೋಷಿತ–ದಲಿತ ಸಮುದಾಯಗಳ ಮೇಲೆ ವಿವಿಧ ಸಮುದಾಯಗಳಿಂದ ದೌರ್ಜನ್ಯ ನಡೆದ ಇತಿಹಾಸವಿದೆ ಎಂದು ಅವರು ಉಲ್ಲೇಖಿಸಿ, ಇಂತಹ ಅನ್ಯಾಯಗಳ ವಿರುದ್ಧ ಸಮುದಾಯ ಜಾಗೃತವಾಗಬೇಕೆಂದು ಕರೆ ನೀಡಿದರು.

ಮೀಸಲಾತಿಯಲ್ಲಿ ಅಸಮಾನತೆ ನಡೆಯುತ್ತಿದೆ ಎಂದು ಪ್ರಶ್ನಿಸಿದ ಅವರು, ಅಲ್ಪಜನಸಂಖ್ಯೆಯ ಬ್ರಾಹ್ಮಣರಿಗೆ ಹೆಚ್ಚಿನ ಮೀಸಲಾತಿ ನೀಡಿ, ದೊಡ್ಡ ಜನಸಂಖ್ಯೆ ಹೊಂದಿರುವ ದಲಿತ ಸೇರಿ ಹಲವು ಸಮುದಾಯಗಳಿಗೆ ಕಡಿಮೆ ಮೀಸಲಾತಿ ನೀಡಿರುವುದು ಸಂವಿಧಾನದ ಆತ್ಮಕ್ಕೆ ವಿರುದ್ಧವಾಗಿದೆ ಎಂದರು. ಖರ್ಗೆಯವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಲಾಗುತ್ತಿದ್ದು, ದಲಿತ ಸಮುದಾಯವನ್ನು ಯಾವ ಪಕ್ಷವೂ ನಾಯಕತ್ವಕ್ಕೆ ಬೆಳೆಸುತ್ತಿಲ್ಲ. ಹೋರಾಟಗಾರರನ್ನೇ ಜೈಲಿಗೆ ಹಾಕಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಬಳಸಿ ರಾಜಕೀಯ ನಾಟಕ ಮಾಡುತ್ತಿವೆ ಎಂದು ಟೀಕಿಸಿದ ಯಳಸಂಗಿ, ಶಿವಾಜಿ ಮತ್ತು ಸಂಭಾಜಿ ಮಹಾರಾಜರ ಇತಿಹಾಸವನ್ನು ವಿಕೃತಗೊಳಿಸಲಾಗುತ್ತಿದೆ ಹಾಗೂ ಟಿಪ್ಪು ಜಯಂತಿ ವಿಷಯದಲ್ಲಿ ದ್ವಂದ್ವ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು. ರಾಜಕೀಯ ವ್ಯವಸ್ಥೆಗಳು ಜನಚಳವಳಿಗಳನ್ನು ನಾಶ ಮಾಡುತ್ತಿದ್ದು, ಇಂತಹ ಅನ್ಯಾಯಗಳ ವಿರುದ್ಧ ಕಾರ್ಯಕರ್ತರು ಮತ್ತು ಯುವಜನತೆ ಧೈರ್ಯವಾಗಿ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.

ಉಪನ್ಯಾಸಕ ಜೀತೇಂದ್ರ ತಳವಾರ ಉಪನ್ಯಾಸ ನೀಡುತ್ತಾ ಭೀಮಾ ಕೋರೆಗಾಂವ್ ಯುದ್ಧದ ಐತಿಹಾಸಿಕ ಹಿನ್ನೆಲೆ ವಿವರಿಸಿದರು. ಈ ವಿಜಯೋತ್ಸವವು ಸಾಮಾಜಿಕ ನ್ಯಾಯದ ಚಳವಳಿಗೆ ಶಕ್ತಿ ತುಂಬಿದ ಮಹತ್ವದ ಘಟನೆ ಆಗಿದ್ದು, ಇತಿಹಾಸದಿಂದ ಪಾಠ ಕಲಿದು ಸಮಕಾಲೀನ ಸವಾಲುಗಳನ್ನು ಎದುರಿಸಲು ಯುವಜನತೆ ಮುಂದಾಗಬೇಕೆಂದು ಹೇಳಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದರಾಮ್ ಪಾಟೀಲ ಮಾತನಾಡಿ, ಸಮಾನತೆಗಾಗಿ ನಡೆದ ಹೋರಾಟಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು. ದಲಿತ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ್ ಭಂಡಾರಿ ಕಾರ್ಯಕ್ರಮದ ಉದ್ದೇಶ ವಿವರಿಸಿ, ಸಮುದಾಯಗಳ ನಡುವೆ ಸೌಹಾರ್ದ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳ ಪಾತ್ರ ಮಹತ್ವದ್ದಾಗಿದೆ ಎಂದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಆದಿಮಾನಿ ಮಾತನಾಡಿ, ಸಂವಿಧಾನಾತ್ಮಕ ಮೌಲ್ಯಗಳನ್ನು ಗೌರವಿಸುವ ಮೂಲಕ ಎಲ್ಲರೂ ಒಗ್ಗಟ್ಟಾಗಿ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಮಲ್ಲಿಕಾರ್ಜುನ ಖೇಮಜೀ, ಪ್ರಕಾಶ ಮೂಲಭಾರತಿ, ಆನಂದ ಗಾಯಕವಾಡ, ಪುರಸಭೆ ನಿಕಟಪೂರ್ವ ಸದಸ್ಯ ಶಿವಪುತ್ರ ನಡಗೇರಿ, ಲಕ್ಷ್ಮಣ ಝಳಕಿ, ಸಿದ್ದು ಪೂಜಾರಿ, ಕಿಟ್ಟಿ ಸಾಲೇಗಾಂವ, ಶ್ರೀಮಂತ ಜಿಡ್ಡೆ, ಸುನೀಲ ಹಿರೋಳಿಕರ್, ಫಯಾಜ್ ಪಟೇಲ್, ದಲಿತ ಸೇನೆಯ ತಾಲೂಕು ಅಧ್ಯಕ್ಷ ಪಿಂಟು ಸಾಲೇಗಾಂವ, ಗೌರವ ಅಧ್ಯಕ್ಷ ಪಿಂಕು ಭದ್ರೆ, ಕಾರ್ಯಾಧ್ಯಕ್ಷ ಗೌತಮ ಕಾಂಬಳೆ, ವಿ.ಓ. ಅಧ್ಯಕ್ಷ ಗೌತಮ ನಿಂಬಾಳ, ಜಿಲ್ಲಾ ಮುಖಂಡ ಅಪ್ಪು ಗೋಪಾಳೆ, ಆಕಾಶ ಬಂಗರಗಾ, ಸಾಗರ ಗುಳಗಿ, ದಿಲೀಪ ಕ್ಷೀರಸಾಗರ, ರಾಘವೇಂದ್ರ ಹೇಬಳಿ, ಸೂರ್ಯಕಾಂತ್ ಸಾಲೇಗಾಂವ ಸೇರಿದಂತೆ ಅನೇಕ ಗಣ್ಯರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ನಂತರ ಭೀಮಾ ಕೋರೆಗಾಂವ್ ಸ್ತಂಭ ಮೆರವಣಿಗೆ ಶಿಸ್ತಿನಿಂದ ನಡೆಯಿತು. ಕಾರ್ಯಕ್ರಮಕ್ಕೆ ಶಿವಕುಮಾರ ದಳಪತಿ ಸ್ವಾಗತಿಸಿದರು.

Join WhatsApp

Join Now

ಶಿಫಾರಸಿತ ಸುದ್ದಿಗಳು

Leave a Comment

error: Content is Protected!