ಆಳಂದ: ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಹೊಣೆಗಾರಿಕೆ ಮಾತ್ರವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಕಾನೂನು ಅರಿವು ಹೊಂದಿದಾಗ ಮಾತ್ರ ಸುಸ್ಥಿರ ಹಾಗೂ ಸುರಕ್ಷಿತ ಭವಿಷ್ಯವನ್ನು ನಿರ್ಮಿಸಲು ಸಾಧ್ಯ ಎಂದು ಸ್ಥಳೀಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಸುಮನ ಚಿತ್ತರಗಿ ಹೇಳಿದರು.
ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಶಿಕ್ಷಣ ಇಲಾಖೆ ಹಾಗೂ ಪುರಸಭೆಯ ಆಶ್ರಯದಲ್ಲಿ ಹಮ್ಮಿಕೊಂಡ ‘ಇಂದು ರಕ್ಷಿಸಿ – ನಾಳೆ ಸುರಕ್ಷಿತ ಪರಿಸರ’ ಕಾನೂನು ಸಾಕ್ಷರತೆ ಮತ್ತು ಸಮುದಾಯ ಸಂರಕ್ಷಣಾ ಉಪಕ್ರಮದ ಅನುಷ್ಠಾನ ಅಂಗವಾಗಿ ನಡೆದ ಕಾನೂನು ಅರಿವು ಹಾಗೂ ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದವರು,
ಪರಿಸರ ಹಾನಿಯಿಂದ ಮಾನವ ಜೀವನದ ಮೇಲೆ ಬೀರುವ ದುಷ್ಪರಿಣಾಮಗಳನ್ನು ವಿವರಿಸಿದರು. ಪರಿಸರ ಕಾನೂನುಗಳ ಬಗ್ಗೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಅರಿವು ಪಡೆದು, ಅವುಗಳನ್ನು ದೈನಂದಿನ ಜೀವನದಲ್ಲಿ ಅನುಸರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಮಾತನಾಡಿ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ ಹಾಗೂ ಹಸಿರು ಪರಿಸರ ನಿರ್ಮಾಣಕ್ಕೆ ಪುರಸಭೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಜನರ ಸಹಕಾರ ಅತ್ಯಂತ ಅಗತ್ಯ ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕಮಲ ರಾಠೋಡ ಅವರು ಕಾನೂನು ಸೇವಾ ಸಮಿತಿಯ ಮೂಲಕ ನೀಡಲಾಗುತ್ತಿರುವ ಉಚಿತ ಕಾನೂನು ನೆರವು ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕಾನೂನುಗಳ ಮಹತ್ವವನ್ನು ವಿವರಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಶ್ರೀಮಂತ ಹತ್ತರಕಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ಪರಿಸರ ಪ್ರಜ್ಞೆ ಮತ್ತು ಕಾನೂನು ಅರಿವು ಬೆಳೆಸಿದರೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ನ್ಯಾಯವಾದಿ ದೇವಾನಂದ ಹೋದಲೂರಕರ್ ‘ಇಂದು ರಕ್ಷಿಸಿ – ನಾಳೆ ಸಂರಕ್ಷಿಸಿ ಸುರಕ್ಷಿತ ಪರಿಸರ’ ವಿಷಯವಾಗಿ ಉಪನ್ಯಾಸ ನೀಡಿ, ಪರಿಸರ ಕಾನೂನುಗಳು, ನಾಗರಿಕರ ಹಕ್ಕು–ಕರ್ತವ್ಯಗಳು ಹಾಗೂ ಪರಿಸರ ಅಪರಾಧಗಳ ವಿರುದ್ಧ ಕೈಗೊಳ್ಳಬಹುದಾದ ಕಾನೂನು ಕ್ರಮಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ವಕೀಲ ಇಸ್ಲಾಲ ಪಟೇಲ್, ಜೋತಿ ಬಂದಿ, ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಬಲಭೀಮ ಸಿಂದೆ, ಶಾಲೆಯ ಸಹ ಶಿಕ್ಷಕ ಮಲ್ಲಿಕಾರ್ಜುನ ಖಜೂರಗಿ, ನ್ಯಾಯವಾದಿ ಬಿ.ಜಿ. ಬೀಳಗಿ, ಮಹಾದೇವ ಹತ್ತಿ ಸೇರಿದಂತೆ ಶಾಲಾ ಸಿಬ್ಬಂದಿ, ನ್ಯಾಯವಾದಿಗಳು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸುದೀರ ಪಡಶಟ್ಟಿ ನಿರೂಪಿಸಿದ್ದು, ಸಂಗಣ್ಣಾ ಕೆರಮಗಿ ವಂದಿಸಿದರು.









