ಆಳಂದ: ರಾಜ್ಯಾದ್ಯಂತ ಕಮ್ಮಾರ, ಕಂಬಾರ, ಗೆಜ್ಜೆಗಾರ, ಬೈಲುಕಮ್ಮಾರ, ಲೋಹಾರ ಎಂಬ ಹೆಸರಿನಿಂದ ಕರೆಯಲ್ಪಡುವ ಕಬ್ಬಿಣದ ಕೆಲಸಗಾರರನ್ನು ವಿಶ್ವಕರ್ಮ ಉಪಜಾತಿಯಿಂದ ಬೇರ್ಪಡಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಶಾಸ್ತ್ರ ಅಧ್ಯಯನ ವರದಿ ಸಿಫಾರಸು ಮಾಡಿರುವುದು ಸ್ವಾಗತಾರ್ಹವಾಗಿದೆ ಎಂದು ವಿಶ್ವ ಕಮ್ಮಾರ ಸಮುದಾಯಗಳ ಒಕ್ಕೂಟದ ಗೌರವಾಧ್ಯಕ್ಷ ರಮೇಶ ಲೋಹಾರ ಹೇಳಿದರು.

ಸಮುದಾಯದ ಬೇಡಿಕೆಗಳಿಗೆ ಒತ್ತಾಯಿಸಿ ಬೆಳಗಾವಿ ಅಧಿವೇಶನದ ವೇಳೆ ಧರಣಿ ಸತ್ಯಾಗ್ರಹ ನಡೆಸಲಾಗಿದ್ದು, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ವಿಶ್ವಕರ್ಮ ನಿಗಮ ರಚನೆ ಸಂದರ್ಭದಲ್ಲಿ ಮೇಲ್ಜಾತಿಯ ಚಿನ್ನ–ಬೆಳ್ಳಿ ವ್ಯಾಪಾರಿಗಳಿಗೆ ಮಾತ್ರ ಲಾಭವಾಗಿದ್ದು, ಇದುವರೆಗೆ ಒಬ್ಬರೂ ಕಮ್ಮಾರ ಸಮುದಾಯದವರಿಗೆ ಅಧ್ಯಕ್ಷ ಅಥವಾ ನಾಮನಿರ್ದೇಶನ ಸ್ಥಾನ ಸಿಕ್ಕಿಲ್ಲ, ನಿಗಮದ ಯೋಜನೆಗಳೂ ತಲುಪಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
1950ರ ಸಂವಿಧಾನದ 342ನೇ ವಿಧಿಯಂತೆ ದೇಶದ ಹಲವಾರು ರಾಜ್ಯಗಳಲ್ಲಿ ಕಮ್ಮಾರಿಕೆ ಮಾಡುವ ಜನರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ.
ವೃತ್ತಿ ಆಧರಿಸಿ ಕಮ್ಮಾರ, ಕಂಬಾರ, ಗೆಜ್ಜೆಗಾರ, ಬೈಲುಕಮ್ಮಾರ, ಬೈಲಿಗ, ಲೋಹಾರ ಮುಂತಾದ ಹೆಸರಿನಿಂದ ಕರೆಯಲ್ಪಡುವವರೆಲ್ಲ ಒಂದೇ ಸಮುದಾಯದವರಾಗಿರುತ್ತಾರೆ ಎಂದರು.
ರಾಜ್ಯದಲ್ಲೂ ಸಹ ಊರು ಊರಿಗೆ ವಲಸೆ ಹೋಗಿ ಕುಲುಮೆ ಕೆಲಸ ಮಾಡುವ ಈ ಸಮುದಾಯದ ಸಾಮಾಜಿಕ–ಆರ್ಥಿಕ ಬದುಕು ವಿಭಿನ್ನವಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ಇಲ್ಲಿನ ಊರು ಹೊರಗೆ ಇದ್ದು ಗೂಡಿಸಲಿನಲ್ಲಿ ಕುಲುಮೆ ಕೆಲಸಮಾಡಿಕೊಂಡು ಹಾಗೂ ಒಂದು ಊರಿನಿಂದ ಇನ್ನೊಂದು ಊರಿಗೆ ವೃತ್ತಿ ಮಾಡುತ್ತ ಅಲೆದಾಡುವ ಈ ಕಮ್ಮಾರರು ಪರಿಶಿಷ್ಟ ಪಂಗಡ ಮತ್ತು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, ಈಗಾಗಲೇ ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವರು ಪರಿಶಿಷ್ಟ ಪಂಗಡದಲ್ಲಿದ್ದು, ಇವರಂತೆ ರಾಜ್ಯದ ಎಲ್ಲಡೆ ವಾಸವಾಗಿರುವ ಈ ಕಮ್ಮಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಹಾಗೂ ಪ್ರತ್ಯೇಕ ನಿಗಮ ರಚಿಸಿ ಅನುಕೂಲ ಮಾಡಿಕೊಡಬೇಕು. ಕಮ್ಮಾರರ ಕುಲುಮೆಗಳಿಗೆ ಭೇಟಿ ನೀಡಿ ನೈಜ ಬದುಕಿನ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ರಮೇಶ ಲೋಹಾರ ಅವರು ಒತ್ತಾಯಿಸಿದರು.









