ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಭೂಸನೂರಲ್ಲಿ ಜಿಲ್ಲಾ ಮಟ್ಟದ ಹಾಲು ಕರೆಯುವ ಸ್ಪರ್ಧೆ ಮತ್ತು ಮಿಶ್ರತಳಿ ಕರುಗಳ ಪ್ರದರ್ಶನ.

On: December 24, 2025 2:50 PM

ಆಳಂದ: ರೈತ ಸಮುದಾಯದ ಯುವಕರು ಸೋಮಾರಿತನ ತಂದುಕೊಳ್ಳದೆ ಶ್ರಮಜೀವಿಗಳಾಗಿ ಆರ್ಥಿಕ ಲಾಭ ಪಡೆಯಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು. ಪ್ರತಿಯೊಬ್ಬರು ಆಕಳು–ಎಮ್ಮೆಗಳನ್ನು ಹೊಂದಿಕೊಂಡು ಕೃಷಿಯೊಂದಿಗೆ ಹೈನುಗಾರಿಕೆಯನ್ನು ಉತ್ತೇಜಿಸಿ, ಆರೋಗ್ಯಭರಿತ ಆಹಾರ ಉತ್ಪಾದನೆಗೆ ಶ್ರಮಿಸಬೇಕು ಎಂದು ಕಲಬುರಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ (ಆಡಳಿತ) ಉಪನಿರ್ದೇಶಕ ಡಾ. ಸಂಜಯ ರೆಡ್ಡಿ ಅವರು ಸಲಹೆ ನೀಡಿದರು.

ತಾಲೂಕಿನ ಭೂಸನೂರ ಗ್ರಾಮದಲ್ಲಿ ಕೆಎಂಎಫ್, ಜಿಪಂ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಆಯೋಜಿಸಿದ ಜಿಲ್ಲಾ ಮಟ್ಟದ ಹಾಲು ಕರೆಯುವ ಸ್ಪರ್ಧೆ ಮತ್ತು ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ನಿರೀಕ್ಷಿತ ಹೈನುಗಾರಿಕೆ ಉತ್ಪಾದನೆ ಆಗುತ್ತಿಲ್ಲ. ಹೈನುಗಾರಿಕೆ ಹೆಚ್ಚಿರುವ ಈ ಭಾಗದಲ್ಲಿ ಉತ್ಪಾದನೆ ಕಡಿಮೆಯಾಗುತ್ತಿರುವುದು ಆರ್ಥಿಕ ಹಿನ್ನಡೆಗೆ ಕಾರಣವಾಗುತ್ತದೆ. ಯುವ ತಲೆಮಾರಿನಲ್ಲಿ ಹೈನುಗಾರಿಕೆಯ ಕಡೆಗೆ ಆಕರ್ಷಣ ಹೆಚ್ಚಿಸುವ ಅಗತ್ಯವಿದೆ. ಇದಕ್ಕಾಗಿ ಇಲಾಖೆಯಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಕೃಷಿ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ ಮಾತನಾಡಿ, “ಹಿಂದೆ ಪಶುಗಳ ಆಧಾರದ ಮೇಲೆ ಸಂಪತ್ತನ್ನು ನಿರ್ಧರಿಸಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ದನಗಳ ಸಾಕುಗಾರಿಕೆಯಲ್ಲಿ ಹೆಣ್ಣು ಕೊಡುವಂತಹ ಪರಿಸ್ಥಿತಿ ಇಲ್ಲದಂತಾಗಿದ್ದು, ಹೈನುಗಾರಿಕೆಯಿಂದ ಹಾಲು ಕರೆದಾಗ ದುಡ್ಡು ಬರುತ್ತದೆ. ಜೋಡು ದನಗಳನ್ನು ಮಾಡಿಕೊಳ್ಳಿ, ದೇಶಿ ತಳಿಗಳನ್ನು ಉಳಿಸಿ ನಾಡಿಗೆ ಗೌರವ ತನ್ನಿ. ಸಾವಯವ ಕೃಷಿ ಮೂಲಕ ಆರೋಗ್ಯಭರಿತ ಗುಣಮಟ್ಟದ ಆಹಾರ ಉತ್ಪಾದನೆಗೆ ಮುಂದಾಗಬೇಕು” ಎಂದು ಹೇಳಿದರು. ಹಾಲು ಉತ್ಪಾದನೆಯ ಮೂಲಕ ರೈತ ಸಮುದಾಯವು ಆರ್ಥಿಕವಾಗಿ ಸಬಲಗೊಳ್ಳಬಹುದು ಎಂದು ಕರೆ ನೀಡಿದರು.

ಉಪನ್ಯಾಸಕರಾಗಿ ಡಾ. ದಯಾನಂದ ಹಕ್ಕಾಪಕ್ಕಿ ಅವರು ಮಾತನಾಡಿ, “ವೈಜ್ಞಾನಿಕ ಮತ್ತು ಲಾಭದಾಯಕ ಹೈನುಗಾರಿಕೆ” ವಿಷಯದಲ್ಲಿ ರೈತರಿಗೆ ಮಾರ್ಗದರ್ಶನ ನೀಡಿದರು. ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ರವಿಂದ್ರನಾಥ ಅವರು “ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರುಕಟ್ಟೆ ಅವಕಾಶಗಳು” ಕುರಿತು ಚರ್ಚಿಸಿ, ರೈತರಿಗೆ ಮಾರುಕಟ್ಟೆ ಸಂಬಂಧಿತ ಸಲಹೆಗಳನ್ನು ನೀಡಿದರು.

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಶಂಕರ ಕಣ್ಣಿ ಮತ್ತು ಕೆಎಂಎಫ್ ವ್ಯವಸ್ಥಾಪಕ ಡಾ. ಪಿ.ವಿ. ಪಾಟೀಲ ಅವರು ಮಾತನಾಡಿ, ಪಶುಸಂಗೋಪನೆಯಲ್ಲಿ ವೈವಿಧ್ಯತೆಯ ಮತ್ತು ಹೈನುಗಾರಿಕೆ ಉತ್ತೇಜನದ ಮಹತ್ವವನ್ನು ಒತ್ತಿ ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಶ್ರೀಶೈಲ ಯಂಕಂಚಿ ಅಧ್ಯಕ್ಷತೆ ವಹಿಸಿದ್ದರು. ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಲಕ್ಷ್ಮಣ ಬಾಳಿ ಉಪಸ್ಥಿತರಿದ್ದರು.

ಆಳಂದ ಮುಖ್ಯ ಪಶುವೈದ್ಯಾಧಿಕಾರಿ ಡಾ. ಯಲ್ಲಪ್ಪ ಇಂಗಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಪರ್ಧೆಗಳ ನಿರ್ಣಾಯಕರಾಗಿ ಡಾ. ಸುನಿಲ್ ಜಿರೋಬೆ, ಡಾ. ಕೇದಾರನಾಥ್, ಡಾ. ಮಹಾಂತೇಶ್ ಪಾಟೀಲ್, ಡಾ. ಉದಯಕುಮಾರ್ ಜಾದವ್ ಮತ್ತು ಡಾ. ಪ್ರಶಾಂತ್ ಕಾರ್ಯನಿರ್ವಹಿಸಿದರು. ಚಿತ್ತಾಪೂರದ ಪಶುವೈದ್ಯಾಧಿಕಾರಿ ಡಾ. ಶಂಕರಣ್ಣೆ, ಡಾ. ಗುರುಮಾತಾ ಮತ್ತು ಸುಪ್ರಿಯಾ ಪಾಟೀಲ್ ಉಪಸ್ಥಿತರಿದ್ದರು.

ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಾದ ರೈತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳೊಂದಿಗೆ ಸಾಮಗ್ರಿಗಳು ಮತ್ತು ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು. ಡಾ. ಶ್ರೀಕಾಂತಟ್ಟಿ ಸ್ವಾಗತಿಸಿದರು. ಶಾಂತಕುಮಾರ್ ಹಿರೇಮಠ್ ನಿರೂಪಿಸಿದರು.

Join WhatsApp

Join Now

ಶಿಫಾರಸಿತ ಸುದ್ದಿಗಳು

Leave a Comment

error: Content is Protected!