ಆಳಂದ: ತಾಲೂಕಿನ ಮಕ್ಕಳ ಭವಿಷ್ಯ ರಕ್ಷಣೆಗೆ ಅತ್ಯಂತ ಮಹತ್ವದ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಪಟ್ಟಣದ ಮಟ್ಟಿಗಿ ರಸ್ತೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾದ ಶಾಸಕ ಬಿ.ಆರ್. ಪಾಟೀಲ್ ಅವರು ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಭಾನುವಾರ ಅಧಿಕೃತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಪೋಲಿಯೋ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಸರ್ಕಾರ ಕೈಗೊಂಡಿರುವ ಈ ಕಾರ್ಯಕ್ರಮದಲ್ಲಿ ಯಾವುದೇ ಮಗು ಲಸಿಕೆಯಿಂದ ವಂಚಿತವಾಗಬಾರದು ಎಂದು ಹೇಳಿದರು.
“ತಾಲೂಕಿನ ಪ್ರತಿಯೊಂದು ಹಳ್ಳಿ, ಪಟ್ಟಣ, ಬಡಾವಣೆ ಹಾಗೂ ವಲಸೆ ಪ್ರದೇಶಗಳಲ್ಲಿಯೂ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ತಪ್ಪದೆ ಪೋಲಿಯೋ ಲಸಿಕೆ ತಲುಪುವಂತೆ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು” ಎಂದು ಸಲಹೆ ನೀಡಿದರು.
ಪೋಷಕರು ಸಹ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಆರೋಗ್ಯ ಸಿಬ್ಬಂದಿ ಮನೆ–ಮನೆಗೆ ಬಂದಾಗ ಮಕ್ಕಳಿಗೆ ಲಸಿಕೆ ಹಾಕಿಸಲು ಸಹಕರಿಸಬೇಕು. ಪೋಲಿಯೋ ಹನಿ ಕೇವಲ ಒಂದು ಔಷಧಿ ಮಾತ್ರವಲ್ಲ, ಅದು ಮಗುವಿನ ಭವಿಷ್ಯವನ್ನು ರಕ್ಷಿಸುವ ಕವಚವಾಗಿದೆ ಎಂದು ಶಾಸಕರು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಸುಶೀಲಕುಮಾರ ಅಂಬೂರೆ ಮಾತನಾಡಿ, ಪಲ್ಸ್ ಪೋಲಿಯೋ ಅಭಿಯಾನವನ್ನು ಯಶಸ್ವಿಗೊಳಿಸಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬೂತ್, ಮೊಬೈಲ್ ಹಾಗೂ ಟ್ರಾನ್ಸಿಟ್ ತಂಡಗಳ ಮೂಲಕ ಯಾವುದೇ ಮಗು ಲಸಿಕೆಯಿಂದ ಹೊರಗುಳಿಯದಂತೆ ಕ್ರಮ ವಹಿಸಲಾಗಿದೆ ಎಂದರು.
“ಪೋಲಿಯೋ ನಿರ್ಮೂಲನೆಗೆ ಪೋಷಕರು ಸಂಪೂರ್ಣ ಸಹಕಾರ ನೀಡಬೇಕು. ಐದು ವರ್ಷದೊಳಗಿನ ಪ್ರತಿಯೊಬ್ಬ ಮಗುವಿಗೂ ಲಸಿಕೆ ಹನಿ ತಪ್ಪದೆ ಹಾಕಿಸಬೇಕು” ಎಂದು ಮನವಿ ಮಾಡಿದರು.

ಸಾರ್ವಜನಿಕ ಆಸ್ಪತ್ರೆಯ ಆಡಳಿತ ಮುಖ್ಯ ವೈದ್ಯಾಧಿಕಾರಿ ಡಾ. ಉಮಾಕಾಂತ ರಾಜಗಿರಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂಗೀತಾ ಪಾಟೀಲ್, ಸಾಮಾಜಿಕ ಕಾರ್ಯಕರ್ತ ದಿಲೀಪ ಕ್ಷೀರಸಾಗರ ಸೇರಿದಂತೆ ಆರೋಗ್ಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಪಟ್ಟಣದ ವೆಂಕಟೇಶ್ ನಗರದಲ್ಲಿರುವ ಹನುಮಾನ್ ದೇವಸ್ಥಾನದಲ್ಲೂ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಚಾಲನೆಯನ್ನು ಆರೋಗ್ಯಾಧಿಕಾರಿ ಡಾ. ಸುಶೀಲಕುಮಾರ ಅಂಬೂರೆ ಅವರು ನೀಡಿದರು. ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಉಮಾಕಾಂತ ರಾಜಗಿರಿ, ಪಟ್ಟಣದ ಪಿಎಚ್ಸಿ ವೈದ್ಯಾಧಿಕಾರಿ ಡಾ. ಸಂಗೀತಾ ಪಾಟೀಲ್ ಹಾಗೂ ಸಿಬ್ಬಂದಿ, ಹಿರಿಯ ಆರೋಗ್ಯ ನಿರೀಕ್ಷಕ ಅಬ್ದುಲ್ ರೌಫ್, ಬ್ಲಾಕ್ ಪ್ರೋಗ್ರಾಂ ಮ್ಯಾನೇಜರ್ ನವೀನ್ ಮೂಲಭಾರತಿ, ಚಂದ್ರಕಾಂತ್ ಹಿರೇಮಠ, ಆರೋಗ್ಯ ಶಿಕ್ಷಣಾಧಿಕಾರಿ ವಿಜಯಲಕ್ಷ್ಮಿ ನಂದಿಕೋಲಮಠ, ಮೇಲ್ವಿಚಾರಕಿ ವಿಜಯಲಕ್ಷ್ಮಿ ಹೊಸಮನಿ, ಅಂಗನವಾಡಿ ಮೇಲ್ವಿಚಾರಕಿ ಮಹದೇವಿ ವಚ್ಚೆ, ಬಡಾವಣೆ ಮುಖಂಡ ಸಿದ್ದು ಪೂಜಾರಿ, ಕನಕಪ್ಪ ದಂಡುಗುಲಿ, ಶ್ಯಾಮರಾವ್ ದಂಡುಗುಲೆ ಮತ್ತಿತರರು ಉಪಸ್ಥಿತರಿದ್ದರು.









