ಆಳಂದ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಮೀನಾ-ಮೇಷ ಏಣಿಸದೇ ತಕ್ಷಣವೇ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ತೊಗರಿ ಖರೀದಿಗೆ ಪ್ರಸಕ್ತವಾಗಿ ಕೇಂದ್ರ ಸರ್ಕಾರ ಒಪ್ಪಿಗೆಯನ್ನು ನೀಡಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರಿಕಾ ಹೇಳಿಕೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರ 9.67 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಗೆ ಅನುಮತಿ ನೀಡಿರುವುದನ್ನು ಸಹ ಸ್ವಾಗತಿಸಿದ್ದಾರೆ. ಕೇಂದ್ರದ ಅನುಮತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗಿನಿಂದಲೇ ರೈತರ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿ, ವಾರದೊಳಗೆ ತೊಗರಿ ಖರೀದಿಯನ್ನು ಆರಂಭಿಸಬೇಕೆಂದಿದ್ದಾರೆ.
ಸಾವಿರ ರೂ. ಪ್ರೋತ್ಸಾಹ ಧನ ನೀಡಲಿ
ಅತಿವೃಷ್ಟಿಯಿಂದ ತೊಗರಿ ಬೆಳೆ ಹಾನಿಯಾಗಿ, ಹಲವೆಡೆ ಅಲ್ಪಸ್ವಲ್ಪ ಬೆಳೆ ಮಾತ್ರ ಉಳಿದು ರಾಶಿಯಾಗುತ್ತಿದೆ. ಮಾರುಕಟ್ಟೆಯಲ್ಲಿ ದರ ಬೆಂಬಲ ಬೆಲೆಗೆ ಹೋಲಿಸಿದರೆ ಕಡಿಮೆಯಾಗಿದ್ದು, ಕ್ವಿಂಟಾಲ್ ತೊಗರಿಗೆ ಕೇವಲ ₹7,000 ದರ ಮಾತ್ರ ಸಿಗುತ್ತಿದೆ. ರೈತರಿಗೆ ಕ್ವಿಂಟಾಲ್‌ಗೆ ₹9,000 ದರದಲ್ಲಿ ಖರೀದಿ ಮಾಡಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಹಾಗೂ ಮಾರುಕಟ್ಟೆಯಲ್ಲೂ ದರ ಸುಧಾರಣೆ ಕಾಣುತ್ತದೆ.
ಹೀಗಾಗಿ ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್‌ಗೆ ಸಾವಿರ ರೂ. ಪ್ರೋತ್ಸಾಹ ಧನ ನಿಗದಿ ಮಾಡಿ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಪ್ರಾರಂಭಿಸಬೇಕು. ಕೇಂದ್ರದ ಎಂಎಸ್‌ಪಿ ಕ್ವಿಂಟಾಲ್‌ಗೆ ₹8,000 ಇದ್ದು, ರಾಜ್ಯ ಸರ್ಕಾರ ಸಾವಿರ ರೂ. ಪ್ರೋತ್ಸಾಹ ಧನ ನೀಡಿದರೆ ಕ್ವಿಂಟಾಲ್‌ಗೆ ₹9,000 ದರಕ್ಕೆ ಖರೀದಿ ಮಾಡಲು ಸಾಧ್ಯ ಎಂದು ಗುತ್ತೇದಾರ ಹೇಳಿದ್ದಾರೆ.
ಕಳೆದ ವರ್ಷ ತೊಗರಿ ಖರೀದಿ ನೆಪಕ್ಕೆ ಮಾತ್ರ
ಕಳೆದ ವರ್ಷ ತೊಗರಿ ಖರೀದಿ ಕೇವಲ ನೆಪಕ್ಕೆ ಮಾತ್ರ ಆರಂಭಿಸಲಾಯಿತು. ರೈತರ ನೋಂದಣಿಗೂ ಅಡ್ಡಿ ಉಂಟಾದ್ದರಿಂದ ಖರೀದಿ ಪ್ರಕ್ರಿಯೆ ನಡೆದಿಲ್ಲ. ಮಾರುಕಟ್ಟೆಯಲ್ಲಿ ದರ ಬೆಂಬಲ ಬೆಲೆಗೆ ಕಡಿಮೆಯಾಗಿದ್ದರೂ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಆಸಕ್ತಿಯ ಕೊರತೆಯಿಂದ ಖರೀದಿ ನಡೆಯದೆ, ರೈತರು ನಷ್ಟ ಅನುಭವಿಸಬೇಕಾದಿತು.
ಇದರಿಂದ ರೈತರು ಮಾರುಕಟ್ಟೆಯಲ್ಲಿದ್ದ ಕಡಿಮೆ ದರಕ್ಕೆ ತೊಗರಿ ಮಾರಾಟ ಮಾಡಿ ನಷ್ಟ ಅನುಭವಿಸಿದ್ದಾರೆ. ಈ ಬಾರಿ ಪ್ರತಿ ರೈತವೂ ಖರೀದಿ ಕೇಂದ್ರಗಳಲ್ಲೇ ಮಾರಾಟ ಮಾಡುವಂತೆ ಕ್ರಮ ಕೈಗೊಳ್ಳಬೇಕು. ಪಿಕೆಪಿಎಸ್ ಕಾರ್ಯದರ್ಶಿಗಳಿಗೆ ಖಡಕ್ ಎಚ್ಚರಿಕೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಎನ್‌ಡಿಆರ್‌ಎಫ್ ಅಡಿ ಎಲ್ಲರಿಗೂ ಪರಿಹಾರ ದೊರಕಲಿ
ಪ್ರಸಕ್ತವಾಗಿ ಅತಿವೃಷ್ಠಿಯಿಂದ ಬೆಳೆಗಳು ಹಾನಿಗೊಳಗೊಂಡಿವೆ. ಸರ್ಕಾರ ಇದುವರೆಗೆ ಬೆಳೆಹಾನಿ ಪರಿಹಾರವನ್ನು ಸಂಪೂರ್ಣವಾಗಿ ರೈತರ ಖಾತೆಗೆ ಜಮಾ ಮಾಡಬೇಕಾಗಿದ್ದರೂ, ಕೇವಲ ಮೂರು ಅಥವಾ ಏಳು ಸಾವಿರ ರೂ. ಮಾತ್ರ ಜಮಾ ಮಾಡಿದ್ದಾರೆ.
ಎನ್‌ಡಿಆರ್‌ಎಫ್ ನಿಯಮಾವಳಿ ಅಡಿ ಕೇಂದ್ರ ಸರ್ಕಾರ ಹೆಕ್ಟೇರ್‌ಗೆ ₹8,500 ನಂತೆ ಎರಡು ಹೆಕ್ಟೇರ್‌ಗಳಿಗೆ ₹17,000 ಪರಿಹಾರ ನೀಡುತ್ತದೆ. ಅದಕ್ಕೆ ರಾಜ್ಯ ಸರ್ಕಾರದ ಪರಿಹಾರ ಸೇರಿದರೆ ₹34,000 ರೂ. ಆಗುತ್ತದೆ. ಆದ್ದರಿಂದ ಪ್ರತಿ ರೈತಿಗೂ ₹34,000 ರೂ. ಪರಿಹಾರ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಇಲ್ಲದಿದ್ದರೆ ರಾಜ್ಯ ಸರ್ಕಾರದ ಬೊಕ್ಕಸ್ ಖಾಲಿಯಾಗಿದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಬೆಳೆ ಹಾನಿ ಸಮೀಕ್ಷೆ ಸರಿಯಾಗಿ ನಡೆಸಲಿ
ರೈತರು ತೊಗರಿ ಖರೀದಿ ಕೇಂದ್ರಗಳನ್ನು ತಕ್ಷಣ ಪ್ರಾರಂಭಿಸುವಂತೆ ಆಗ್ರಹಿಸುತ್ತಿದ್ದರು. ಬಿಡಿಗಾಸು ಬೆಳೆ ಹಾನಿ ಪರಿಹಾರ ಸಮೀಕ್ಷೆ ಸರಿಯಾಗಿ ಮಾಡದಿರುವುದರಿಂದ ರೈತರಿಗೆ ತಕ್ಕ ಪರಿಹಾರ ದೊರಕುತ್ತಿಲ್ಲ. ಸರ್ಕಾರ ಎಲ್ಲಾ ರೈತರಿಗೆ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತರು ಬೀದಿಗಿಳಿದು ಹೋರಾಟ ನಡೆಸಿದರೆ ಸರ್ಕಾರವೇ ಹೊಣೆಗಾರ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
100ಕ್ಕೆ 100ರಷ್ಟು ಬೆಳೆ ವಿಮೆ ದೊರಕಲಿ
ಪ್ರಧಾನಮಂತ್ರಿ ಫಸಲು ವಿಮಾ ಯೋಜನೆ ಅಡಿ ಹೆಚ್ಚಿನ ರೈತರು ವಿಮೆ ಮಾಡಿಸಿದ್ದಾರೆ. ಈಗ ತೊಗರಿ ಬೆಳೆ ಸಂಪೂರ್ಣ ಹಾಳಾಗಿರುವುದರಿಂದ 100% ಬೆಳೆ ವಿಮೆ ದೊರಕುವಂತೆ ಕಲಬುರಗಿ ಜಿಲ್ಲಾಡಳಿತ ಮುಂದಾಗಬೇಕು. ಕನಿಷ್ಠ ₹1,000 ಕೋಟಿ ರೂಪಾಯಿ ವಿಮೆ ಮೊತ್ತವಾದರೂ ಜಿಲ್ಲೆಯ ರೈತರಿಗೆ ದೊರಕಬೇಕು ಎಂದು ಗುತ್ತೇದಾರ ಹೇಳಿದ್ದಾರೆ.









