ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಭೂಸನೂರ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಅಕ್ರಮ: ನಕಲಿ ಮತಪತ್ರ, ತಪ್ಪು ಬ್ಯಾಲೆಟ್ – ಬಿಜೆಪಿ ರೈತರಿಂದ ಧರಣಿ.

On: December 4, 2025 4:53 PM

ಆಳಂದ: ತಾಲೂಕಿನ ಭೂಸನೂರ ಶ್ರೀ ಸಿದ್ಧೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ, ಬಿಜೆಪಿ ಮುಖಂಡರು ಹಾಗೂ ನೂರಾರು ರೈತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ನಡೆದ ಚುನಾವಣೆಯಲ್ಲಿ ಬೂತ್ ನಂ. ೧ರಲ್ಲಿ ಚುನಾವಣಾಧಿಕಾರಿ ಉದ್ದೇಶಪೂರ್ವಕವಾಗಿ ನಕಲಿ ಮತಪತ್ರಗಳನ್ನು ಹಂಚುತ್ತಿದ್ದ ಸಮಯದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಆಳಂದ ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ್ ಆರೋಪಿಸಿದರು. ಅವರು ಮಾತನಾಡಿ, “ಈ ಬೂತ್‌ನಲ್ಲಿ ೩೫೦ ಮತದಾರರಲ್ಲಿ ಬಹುತೇಕರು ಆಡಳಿತ ಪಕ್ಷದ ಶಾಸಕರ ಬೆಂಬಲಿತ ಪ್ಯಾನಲ್‌ಗೆ ವಿರೋಧವಾಗಿ ಮತ ಚಲಾಯಿಸುವವರಿದ್ದರು. ಈ ಹಿನ್ನೆಲೆಯಲ್ಲೇ ಶಾಸಕರ ಒತ್ತಡಕ್ಕೆ ಮಣಿದು ಚುನಾವಣಾಧಿಕಾರಿಗಳು ಒಂದು ಪಕ್ಷದ ಪ್ರತಿನಿಧಿಯಂತೆ ವರ್ತಿಸಿ ಚುನಾವಣಾ ಅಕ್ರಮಕ್ಕೆ ಮುಂದಾಗಿದ್ದಾರೆ.

ಸಕ್ಕರೆ ಕಾರ್ಖಾನೆಯ ಸಹಾಯಕ ನೋಂದಣಿ ಅಧಿಕಾರಿ (ಓ.ಎ. ಸಂಜು ಕರ್ಪೂರ) ಮತ್ತು ಎಸ್‌ಇಓ ಮೇಲ್ವಿಚಾರಕ ಶಿವಾನಂದ ಅಷ್ಟಗಿ ಈ ಅಕ್ರಮದಲ್ಲಿ ನೇರ ಭಾಗಿಯಾಗಿದ್ದು, ಇಬ್ಬರನ್ನೂ ತಕ್ಷಣ ಸೇವೆಯಿಂದ ವಜಾಗೊಳಿಸಬೇಕು,” ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ಚಂದ್ರಶೇಖರ ಹಿರೇಮಠ ಮಾತನಾಡಿ,
“ಮತದಾರರನ್ನು ದಿಕ್ಕುತಪ್ಪಿಸುವ ಸಲುವಾಗಿ ಚುನಾವಣಾಧಿಕಾರಿಗಳು ಉದ್ದೇಶಪೂರ್ವಕವಾಗಿ ಜನತಾ ಬಜಾರ್ ಸಹಕಾರಿ ಸಂಘದ ಚುನಾವಣೆಯ ಬ್ಯಾಲೆಟ್ ಪತ್ರಿಕೆಗಳನ್ನೇ ಬಳಸಿದ್ದಾರೆ. ಮತಪತ್ರ ಬದಲಾವಣೆಯಲ್ಲಿ ಭಾಗಿಯಾದ ಚುನಾವಣಾಧಿಕಾರಿಯನ್ನು ತಕ್ಷಣ ಬಂಧಿಸಿ, ಚುನಾವಣಾ ಪಿತೂರಿ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ್ ಮಾತನಾಡಿ, “ಕಾರ್ಖಾನೆ ಆವರಣದಲ್ಲಿ ಚುನಾವಣೆಯನ್ನು ನಡೆಸಬೇಕು. ಕಲಬುರ್ಗಿ ನಗರದಲ್ಲಿರುವ ಕಾರ್ಖಾನೆ ಕಚೇರಿಯನ್ನು ತಕ್ಷಣ ಕಾರ್ಖಾನೆ ಆವರಣಕ್ಕೆ ಸ್ಥಳಾಂತರಿಸಬೇಕು. ಮತದಾರರ ಪಟ್ಟಿಯಲ್ಲಿ ದೊಡ್ಡ ಮಟ್ಟದ ತಿರುಚುವಿಕೆ ನಡೆದಿದ್ದು, ಪಟ್ಟಿಯ ಮರುಪರಿಶೀಲನೆ ನಡೆಸಿ ಹೆಸರು ಸೇರ್ಪಡೆಗೆ ಕಾಲಾವಕಾಶ ನೀಡಬೇಕು.

ಶೇರು ಮೌಲ್ಯದ ವ್ಯತ್ಯಾಸದ ಹಣ ಭರಿಸಿರುವ ರೈತರಿಗೆ ಮತದಾನದ ಹಕ್ಕು ಒದಗಿಸಬೇಕು. ಚುನಾವಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಬೇಕು. ಮತಪತ್ರ ಬದಲಾವಣೆ ಮತ್ತು ಪಟ್ಟಿ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡ ಬಳಿಕ ಮಾತ್ರ ಪುನರ್‌ಚುನಾವಣೆ ಘೋಷಿಸಬೇಕು,” ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಅಶೋಕ ಬಗಲಿ, ಧರ್ಮಣ್ಣ ಇಟಗಾ, ಅವ್ವಣ್ಣ ಮ್ಯಾಕೇರಿ, ವೀರಣ್ಣ ಮಂಗಾಣೆ, ಅಣ್ಣಾರಾವ್ ಪಾಟೀಲ ಕವಲಗಾ, ಬಾಬುಗೌಡ ಪಾಟೀಲ, ಚಂದ್ರಕಾಂತ ಭೂಸನೂರ, ಶಿವಪ್ಪ ವಾರಿಕ, ಬಸವರಾಜ ಬಿರಾದಾರ, ಸಂತೋಷ ಹಾದಿಮನಿ, ಸಿ.ಕೆ. ಪಾಟೀಲ, ಆನಂದರಾವ್ ಗಾಯಕವಾಡ, ಶರಣಪ್ಪ ನಾಟೀಕಾರ, ಶಾಂತಕುಮಾರ್ ಪರೀಟ, ವಿಜಯಕುಮಾರ್ ಹುಲಸೂರೆ, ಅಶೋಕ ಗುತ್ತೇದಾರ್, ಮಲ್ಲಣ್ಣ ನಾಗೂರೆ, ಸುನೀತಾ ಪೂಜಾರಿ, ಗೌರಿ ಚಿಚಕೋಟಿ, ಮಲ್ಲಿಕಾರ್ಜುನ ಕಂದಗೂಳೆ, ಪ್ರಕಾಶ ಮಾನೆ, ಸೀತಾರಾಮ ಜಮಾದಾರ, ಸುನೀಲ ಹಿರೋಳಿಕರ, ನಾಗರಾಜ ಶೇಗಜಿ, ಗುಂಡಪ್ಪ ಪೂಜಾರಿ, ರವಿ ಮದನಕರ, ಶಿವಪ್ರಕಾಶ ಹೀರಾ, ಶರಣಗೌಡ ಪಾಟೀಲ ದೇವತಗಿ, ರುದ್ರಯ್ಯ ಸ್ವಾಮಿ, ಅಶೋಕ ಹತ್ತರಕಿ, ರಮೇಶ್ ಬಿರಾದರ, ಎಂ.ಎಸ್. ಪಾಟೀಲ, ಪ್ರಕಾಶ ಸಣಮನಿ, ಮಹೇಶ್ ಗೌಳಿ, ಈರಣ್ಣ ಮೇತ್ರೆ ಸೇರಿದಂತೆ ತಾಲೂಕಿನ ಸಾವಿರಾರು ರೈತರು ಭಾಗವಹಿಸಿದ್ದರು.

ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ವಿವರವಾದ ಮನವಿಪತ್ರ ಸಲ್ಲಿಸಿ, ಮೇಲಿನ ಎಲ್ಲ ಬೇಡಿಕೆಗಳನ್ನು ತಕ್ಷಣ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

Join WhatsApp

Join Now

Leave a Comment

error: Content is Protected!